ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜನರಿಂದಲೇ ತಕ್ಕ ಉತ್ತರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಮಂಗಳೂರು: ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳುವ ಪ್ರಶ್ನೆಗಳಿಗೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕೇರಳದಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಇಲ್ಲಿನ ಸರ್ಕೀಟ್‌ ಹೌಸ್‌ನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಣ್ಣಿನ ಮಕ್ಕಳು ಯಾರು ಎಂಬುದು ಮುಖ್ಯವಲ್ಲ. ಮಣ್ಣಿನ ಮಕ್ಕಳಾದ ರೈತರ ಸಮಸ್ಯೆಗೆ ಯಾರು ಉತ್ತಮವಾಗಿ ಸ್ಪಂದಿಸಿದರು ಎಂಬುದು ಮುಖ್ಯ’ ಎಂದರು.

‘ಬಿಜೆಪಿಯು ರೈತರ ಸಂಕಟಗಳಿಗೆ ಸರಿಯಾಗಿ ಸ್ಪಂದಿಸಿ ಸಾಲಮನ್ನಾ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಹಲವಾರು ರೈತಪರ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ರೈತರು ಬಲ್ಲರು. ಆದರೆ ಸಿದ್ದರಾಮಯ್ಯ ಇದ್ಯಾವುದನ್ನೂ ಗಮನಿಸದೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

 ‘ಸಿದ್ದರಾಮಯ್ಯ ಮಣ್ಣಿನ ಮಗನಾಗಿದ್ದರೆ ನೇಗಿಲು ಕಟ್ಟಲಿ, ನಾನೂ ನೇಗಿಲು ಕಟ್ಟುತ್ತೇನೆ. ಬೆಳಿಗ್ಗೆ ಹೊಲಕ್ಕೆ ಹೋಗಿ ದುಡಿದು ರಾತ್ರಿ ಮನೆಗೆ ಬಂದ ದಿನಗಳನ್ನು ನಾನು ಮರೆತಿಲ್ಲ. ಆದ್ದರಿಂದಲೇ ರೈತರ 50 ಸಾವಿರ ಸಾಲ ಮನ್ನಾ ಮಾಡುವುದು ಎಷ್ಟು ಮುಖ್ಯ ಎಂಬ ಅರಿವಿತ್ತು’ ಎಂದು ಹೇಳಿದರು.

ಇಂದಿನಿಂದ ಜಿಲ್ಲಾ ಸುರಕ್ಷಾ ಯಾತ್ರೆ

ಬೆಂಗಳೂರು: ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ಸಂಘಟನೆ ಬಲಗೊಳಿಸಿ, ಪಕ್ಷದ ಪರವಾಗಿ ಅಲೆ ಎಬ್ಬಿಸಲು ಮುಂದಾಗಿರುವ ಬಿಜೆಪಿ ನಾಯಕರು, ಶನಿವಾರದಿಂದ (ಮಾರ್ಚ್‌ 3) ನಾಲ್ಕು ದಿನಗಳ ಜನ ಸುರಕ್ಷಾ ಯಾತ್ರೆ ಹಮ್ಮಿಕೊಂಡಿದ್ದಾರೆ.

ಯಾತ್ರೆಯ ಸಮಾರೋಪದ ಅಂಗವಾಗಿ ಮಾರ್ಚ್‌ 6ರಂದು ‘ಮಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಳ್ಳಲಿದ್ದಾರೆ.

ಅಂಕೋಲಾದಿಂದ ಆರಂಭವಾಗಲಿರುವ ಯಾತ್ರೆಯ ನೇತೃತ್ವವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಅನಂತ ಕುಮಾರ ಹೆಗಡೆ, ಕುಶಾಲನಗರದಿಂದ ಆರಂಭವಾಗಲಿರುವ ಯಾತ್ರೆಯ ನೇತೃತ್ವವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಅವರು ವಹಿಸಲಿದ್ದಾರೆ.

ಯಾತ್ರೆಯ ಉದ್ದಕ್ಕೂ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಬಹಿರಂಗ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.