ADVERTISEMENT

ಮೋದಿ ಅವರದ್ದೂ ಕಮಿಷನ್ ಸರ್ಕಾರ: ಮೇವಾನಿ

‘ಗುಜರಾತ್ ಮತ್ತು ಕೇಂದ್ರದಲ್ಲಿ ಶೇ 80ರಿಂದ 90ರಷ್ಟು ಕಮಿಷನ್ ಸರ್ಕಾರವಿದೆ’

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 13:49 IST
Last Updated 27 ಏಪ್ರಿಲ್ 2018, 13:49 IST
ಜಿಗ್ನೇಶ್‌ ಮೇವಾನಿ
ಜಿಗ್ನೇಶ್‌ ಮೇವಾನಿ   

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರವನ್ನು ಶೇ 10 ಕಮಿಷನ್ ಸರ್ಕಾರ ಎಂದು ಆರೋಪಿಸುತ್ತಾರೆ. ಆದರೆ ಗುಜರಾತ್ ಮತ್ತು ಕೇಂದ್ರ ಸರ್ಕಾರದಲ್ಲಿ ಶೇ 80ರಿಂದ 90ರಷ್ಟು ಕಮಿಷನ್ ಸರ್ಕಾರವಿದೆ’ ಎಂದು ಗುಜರಾತ್‌ನ ವಡ್‌ಗಾಂ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ ದೂರಿದರು.

ನಗರದಲ್ಲಿ ನಡೆದ ಏರ್ಪಡಿಸಿದ್ದ ‘ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೋದಿ ಗುಜರಾತ್‌ನವರು, ನಾನೂ ಗುಜರಾತಿನವ. 22 ವರ್ಷ ಅವರ ಆಡಳಿತದ ಅವಧಿಯಲ್ಲಿ ಗುಜರಾತ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅಂಬಾನಿ, ಅದಾನಿಗೆ ಕೋಟ್ಯಂತರ ಮೌಲ್ಯದ ಭೂಮಿಯನ್ನು ಹಸ್ತಾಂತರಿಸಿದ್ದಾರೆ. ಅದಾನಿಗೆ ₹72 ಸಾವಿರ ಕೋಟಿ ಸಾಲ ನೀಡಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಮೋದಿ ಅವರ ಭ್ರಷ್ಟಾಚಾರ ಮತ್ತು ಕಮಿಷನ್‌ ಅನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ತಾಕತ್ತಿದ್ದರೆ ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ಸವಾಲು ಹಾಕಿದರು.

ADVERTISEMENT

ಸುಗ್ರೀವಾಜ್ಞೆಗೆ ಒತ್ತಾಯ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ತಕ್ಷಣವೇ ಸುಗ್ರೀವಾಜ್ಞೆ ತರಬೇಕು’ ಎಂದು ಒತ್ತಾಯಿಸಿದರು.

‘ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾಯ್ದೆ ದುರ್ಬಲಗೊಂಡಿದೆ. ಇದನ್ನು ವಿರೋಧಿಸಿ ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಗಲಭೆಯಲ್ಲಿ 11 ಜನರು ಮೃತಪಟ್ಟರು. ಆದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.