ADVERTISEMENT

ರಾಜಕೀಯವಾಗಿ ನಿರ್ಲಕ್ಷಿತ ಸಣ್ಣ ಕೈಗಾರಿಕಾ ಘಟಕಗಳು

​ಕೇಶವ ಜಿ.ಝಿಂಗಾಡೆ
Published 23 ಏಪ್ರಿಲ್ 2018, 19:10 IST
Last Updated 23 ಏಪ್ರಿಲ್ 2018, 19:10 IST
ರಾಜಕೀಯವಾಗಿ ನಿರ್ಲಕ್ಷಿತ  ಸಣ್ಣ ಕೈಗಾರಿಕಾ ಘಟಕಗಳು
ರಾಜಕೀಯವಾಗಿ ನಿರ್ಲಕ್ಷಿತ ಸಣ್ಣ ಕೈಗಾರಿಕಾ ಘಟಕಗಳು   

ರಾಜ್ಯದ ಯೋಜಿತ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಕೈಗಾರಿಕಾ ಘಟಕಗಳು (ಎಸ್‌ಎಸ್‌ಐ) ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಹೊಸ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಇವುಗಳು ಪ್ರಮುಖ ಚಾಲನಾ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

‘ಎಸ್‌ಎಸ್‌ಇ’ಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರೂ ರಾಜಕೀಯ ಪಕ್ಷಗಳ ಪಾಲಿಗೆ ದೊಡ್ಡ ವೋಟ್ ಬ್ಯಾಂಕ್‌ ಆಗಿದ್ದಾರೆ. ಇವರಿಗೆಲ್ಲ ಉದ್ಯೋಗ ನೀಡಿರುವ ಉದ್ಯಮಿಗಳನ್ನೂ ನಿರ್ಲಕ್ಷಿಸುವಂತಿಲ್ಲ. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ, ಅಮಿತ್‌ ಶಾ, ಯಡಿಯೂರಪ್ಪ, ಕುಮಾರಸ್ವಾಮಿ ಅವರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘಕ್ಕೆ (ಕಾಸಿಯಾ) ಭೇಟಿ ಕೊಟ್ಟು ಉದ್ಯಮಿಗಳ ಜತೆ ನೇರ ಸಂವಾದ ನಡೆಸಿದ್ದಾರೆ. ಅವರ ಅಹವಾಲುಗಳನ್ನು ಆಲಿಸಿದ್ದಾರೆ.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕನಿಷ್ಠ ವೇತನ ಮಂಡಳಿಗೆ ರಾಜಕೀಯ ನೇಮಕಾತಿ ಆದ ನಂತರ ಕಾರ್ಮಿಕರ ಕನಿಷ್ಠ ವೇತನ ಮಿತಿ ಹೆಚ್ಚಿಸಲಾಗಿದೆ. ಇದು ಉದ್ಯಮದ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಸದ್ಯಕ್ಕೆ ವಿವಾದ ಹೈಕೋರ್ಟ್‌ನಲ್ಲಿ ಇದೆ’ ಎಂದು ಬೆಂಗಳೂರು ಕಾರ್ಬನ್ಸ್‌ ಸಂಸ್ಥೆಯ ಮಾಲೀಕ ಗೋ‍ಪಿನಾಥ ಎನ್‌.ಸಿ. ಅವರು ಹೇಳುತ್ತಾರೆ.

ADVERTISEMENT

‘ರಾಜ್ಯದ ಸಣ್ಣ ಕೈಗಾರಿಕಾ ಘಟಕಗಳು ಅನೇಕ ತೊಂದರೆಗಳನ್ನು ಎದುರಿಸುತ್ತಿವೆ. ಅಧಿಕಾರಶಾಹಿಯ ಮಾತು ಕೇಳಿ ಜಾರಿಗೆ ತಂದಿದ್ದ ‘ಎಸ್‌ಎಸ್‌ಐ’ಗಳೂ 99 ವರ್ಷಗಳ ಅವಧಿಗೆ ಭೂಮಿ ಗುತ್ತಿಗೆ ಪಡೆಯಲು ಮಾರುಕಟ್ಟೆ ದರ ಪಾವತಿಸಬೇಕು ಎನ್ನುವ ನಿಯಮ ಬದಲಾಯಿಸಲು ತೀವ್ರ ಹೋರಾಟ ನಡೆಸಬೇಕಾಯಿತು. ಈಗ ಮಂಜೂರಾದ ಭೂಮಿಯ ಸಂಪೂರ್ಣ ಮೊತ್ತ ಪಾವತಿಸಿ 10 ವರ್ಷಗಳ ನಂತರ ಭೂಮಿಯ ಸಂಪೂರ್ಣ ಮಾಲೀಕತ್ವ ಪಡೆದುಕೊಳ್ಳಬಹುದಾಗಿದೆ.

‘ಸರ್ಕಾರ ತನ್ನ ವೋಟ್ ಬ್ಯಾಂಕ್‌ ಆಗಿರುವ ಕಾರ್ಮಿಕರ ಹಿತಾಸಕ್ತಿಗಾಗಿ ಈ ನಿರ್ಧಾರಕ್ಕೆ ಬಂದಿದೆ. ಆದರೆ, ಇದು ಉದ್ದಿಮೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೇರಳದಲ್ಲಿನ ಕಾರ್ಮಿಕರ ಪರ ಕಮ್ಯುನಿಸ್ಟ್‌ ಸರ್ಕಾರದಲ್ಲಿ ಜಾರಿಯಲ್ಲಿ ಇರುವ ಕನಿಷ್ಠ ವೇತನಕ್ಕಿಂತ ನಮ್ಮಲ್ಲಿ ದುಬಾರಿ ವೇತನ ನಿಗದಿ ಮಾಡಲಾಗಿದೆ’ ಎಂದು ಅವರು ಅಸಮಾಧಾನ ಸೂಚಿಸುತ್ತಾರೆ.

‘ವಿದ್ಯುತ್‌ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ನಾಗರಿಕರ ಪಾಲಿಗೆ ವಿದ್ಯುತ್‌ ಕಡಿತ ಸಮಸ್ಯೆ ಇರಲಿಕ್ಕಿಲ್ಲ. ಆದರೆ, ಕೈಗಾರಿಕೆಗಳಿಗೆ ಪ್ರತಿ ದಿನ ಮೂರ್ನಾಲ್ಕು ಗಂಟೆಗಳ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ವಿದ್ಯುತ್‌ ಖರೀದಿ ದರವೂ ನಮ್ಮಲ್ಲಿ ದುಬಾರಿಯಾಗಿದೆ.

‘ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ಮರುಪಾವತಿ ತುಂಬಾ ಸಂಕೀರ್ಣವಾಗಿದೆ. ಸಕಾಲದಲ್ಲಿ ತೆರಿಗೆ ಮರುಪಾವತಿಯಾಗದೆ ಹೊರೆಯಾಗುತ್ತಿದೆ. ದುಡಿಯುವ ಬಂಡವಾಳಕ್ಕೂ ಕೊರತೆ ಬೀಳುತ್ತಿದೆ. ‘ಎಸ್‌ಎಸ್‌ಐ’ಗಳಲ್ಲಿ ರಫ್ತು ಘಟಕಗಳ ಪಾಲು ಶೇ 12ರಷ್ಟು ಇದೆ. ಸಕಾಲದಲ್ಲಿ ರೀಫಂಡ್‌ ದೊರೆತರೆ ಅವರ ವಹಿವಾಟು ಹೆಚ್ಚಲಿದೆ.

‘ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಒದಗಿಸುತ್ತಿದ್ದರೂ, ಈ ವಲಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸುತ್ತಲೇ ಬಂದಿವೆ. ಅಧಿಕಾರದ ಮೊಗಸಾಲೆಯಲ್ಲಿ ಬೃಹತ್‌ ಉದ್ದಿಮೆದಾರರು ಹೊಂದಿರುವ ಪ್ರಭಾವ ನಮಗೆ ಇಲ್ಲ. ಹೀಗಾಗಿ ನಾವು ನಿರ್ಲಕ್ಷಿತರಾಗಿಯೇ ಮುಂದುವರಿದಿದ್ದೇವೆ’.

‘ಕರ್ನಾಟಕ ಹಣಕಾಸು ಸಂಸ್ಥೆಯಿಂದಲೂ ಸಮರ್ಪಕ ಸಾಲ ವಿತರಣೆಯಾಗುತ್ತಿಲ್ಲ. ದುಬಾರಿ ಬಡ್ಡಿ ದರವು (ಶೇ 13ರಿಂದ ಶೇ 15) ಕೈಗಾರಿಕೋದ್ಯಮಿಗಳ ಕೈ ಕಟ್ಟಿ ಹಾಕಿದೆ. ನೋಟು ರದ್ದತಿ, ಜಿಎಸ್‌ಟಿ ಜಾರಿ ಸಂದರ್ಭದಲ್ಲಿನ ಅಡಚಣೆಗಳನ್ನು ಹಣಕಾಸು ಸಂಸ್ಥೆಗಳು ಪರಿಗಣಿಸದೇ ವಸೂಲಾಗದ ಸಾಲದ ಹಣೆಪಟ್ಟಿ ಹಚ್ಚುತ್ತವೆ.

‘ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಚಾಲನೆ ನೀಡಲಾಗಿದ್ದ ‘ಗ್ರೇಟರ್ ಪೀಣ್ಯ’ ಕೈಗಾರಿಕಾ ವಸಾಹತು ಈಗಲೂ ಕಾರ್ಯಾರಂಭ ಮಾಡಿಲ್ಲ. ಭೂಮಿ ಹಂಚಿಕೆಗೆ 4 ವರ್ಷ ವಿಳಂಬವಾಗಿದೆ. ಅಧಿಸೂಚನೆ ಹೊರಡಿಸಿ ವರ್ಷಗಳೇ ಉರುಳಿದ್ದರೂ ಉದ್ಯಮಿಗಳಿಗೆ ಈಗಲೂ ಭೂಮಿ ಹಸ್ತಾಂತರಿಸಿಲ್ಲ. ಇಲ್ಲಿ ಮೂಲ ಸೌಕರ್ಯಗಳನ್ನು ಆಮೆಗತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗಾಗಿ ಉದ್ಯಮಗಳು ಅಲ್ಲಿಗೆ ಹೋಗುತ್ತಿಲ್ಲ.

‘ಅಧಿಕಾರಶಾಹಿಯ ಅದಕ್ಷತೆ, ಅಸಹಕಾರ, ರಾಜಕೀಯ ನೇಮಕಾತಿ, ಜಿಎಸ್‌ಟಿ ಜಾರಿ ಹೊರತಾಗಿಯೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದಿರುವುದು ನಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ಪ್ರತಿಯೊಂದು ಬೇಡಿಕೆ ಈಡೇರಿಸಲು ಬೀದಿಗೆ ಇಳಿದು ಪ್ರತಿಭಟನೆ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಒಂದು ದಿನ ಬಾಗಿಲು ಮುಚ್ಚಿದರೆ ಹತ್ತಾರು ಪ್ರತಿಕೂಲಗಳನ್ನು ಎದುರಿಸಬೇಕಾಗುತ್ತದೆ.
ಸಣ್ಣ ಕೈಗಾರಿಕೆಗಳ ಪಾಲಿಗೆ ಪ್ರತ್ಯೇಕ ಸಚಿವಾಲಯ ಕೊಡಿ ಎನ್ನುವ ಬೇಡಿಕೆ ಈಡೇರಿಕೆಗೆ, ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರ ಕಿವಿಗೊಡಬೇಕಾಗಿದೆ’ ಎಂದು ಗೋಪಿನಾಥ ಹೇಳುತ್ತಾರೆ. ದಕ್ಷ ಸಚಿವರನ್ನು ನೇಮಿಸಬೇಕಾಗಿದೆ ಎನ್ನುವುದು ಅವರ ಹಕ್ಕೊತ್ತಾಯವಾಗಿದೆ.

‘ಬೃಹತ್‌ ಉದ್ದಿಮೆಗಳಿಗೆ ಪೂರಕವಾದ ಅಸಂಖ್ಯ ಉದ್ದಿಮೆಗಳು ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗಲು ಆಗುವುದಿಲ್ಲ. ಹೀಗಾಗಿ ನಗರ ವ್ಯಾಪ್ತಿಯಲ್ಲಿಯೇ ಅವುಗಳಿಗೆ ನೆಲೆ ಕಲ್ಪಿಸಬೇಕಾಗಿದೆ. ಮುಚ್ಚಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಜಾಗೆಯಲ್ಲಿ ಕೈಗಾರಿಕಾ ಉದ್ದೇಶದ ಫ್ಲ್ಯಾಟ್‌ಗಳನ್ನು ಸರ್ಕಾರವೇ ಕಟ್ಟಿ, ಬಾಡಿಗೆ ಆಧಾರದಲ್ಲಿ ಕೊಡಬಹುದು.

‘ಬೆಂಗಳೂರು ಬಿಟ್ಟು ಹೊರಗೆ ಹೋಗಿ ಎಂದು ಸರ್ಕಾರಿ ಪ್ರಭೃತಿಗಳು ಅಪ್ಪಣೆ ಕೊಡಿಸುತ್ತಾರೆ. ನಗರಗಳಲ್ಲಿಯೇ ವಿದ್ಯುತ್‌ ಸಮಸ್ಯೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಅದ್ವಾನವಾಗಿದೆ. ಹೀಗಾಗಿ ಅಲ್ಲಿಗೆ ಹೋಗಲು ಆಗುವುದಿಲ್ಲ. ನಗರಾಡಳಿತ ಸಂಸ್ಥೆಗಳಿಗೆ ಸ್ಥಳೀಯವಾಗಿ ಆಸ್ತಿ ತೆರಿಗೆ ನಿಗದಿಪಡಿಸುವ ಅಧಿಕಾರ ಕೊಟ್ಟಿರುವುದು ಸರಿಯಲ್ಲ. ತಾರತಮ್ಯದಿಂದ ತೆರಿಗೆ ನಿಗದಿಪಡಿಸಲಾಗುತ್ತಿದೆ. ಆಸ್ತಿ ತೆರಿಗೆ ವಿಧಿಸುವಲ್ಲಿ ನೀಡುವ ಕಿರುಕುಳ ತಪ್ಪಿಸಲು ಎಲ್ಲ ಕಡೆ ಸಮಾನವಾದ ಸ್ಥಳೀಯ ಆಸ್ತಿ ತೆರಿಗೆ ಜಾರಿಗೆ ತರಬೇಕಾಗಿದೆ.

‘ಭೂಮಿ ಅಲಭ್ಯತೆ, ಕಾರ್ಮಿಕರ ಕೊರತೆ ಮತ್ತು ವಿದ್ಯುತ್‌ ಸಮಸ್ಯೆಯಂತಹ ಮೂಲ ಸೌಕರ್ಯಗಳನ್ನು ಹೊಸ ಸರ್ಕಾರ ಆದ್ಯತೆ ಮೇರೆಗೆ ಪರಿಹರಿಸಿದರೆ ದೇಶದ ಕೈಗಾರಿಕಾ ಭೂಪಟದಲ್ಲಿ ರಾಜ್ಯವು ಇನ್ನಷ್ಟು ಪ್ರವರ್ಧಮಾನಕ್ಕೆ ಬರಲಿದೆ.

ರಫ್ತು ಆಧಾರಿತ, ಗರಿಷ್ಠ ಮೌಲ್ಯದ, ಸಂಶೋಧನೆ ಆಧಾರಿತ ಸಣ್ಣ ಕೈಗಾರಿಕಾ ಘಟಕಗಳು ವಿಶ್ವದ ಗಮನ ಸೆಳೆದಿವೆ. ರಾಜ್ಯದ ‘ಎಸ್‌ಎಸ್‌ಐ’ ಉದ್ಯಮಶೀಲರಲ್ಲಿ ಇರುವ ಸಾಮರ್ಥ್ಯದ ಬಳಕೆಗೆ ಪೂರಕ ಸೌಲಭ್ಯ ಕಲ್ಪಿಸಿದರೆ ರಾಜ್ಯವು ಕೈಗಾರೀಕರಣದಲ್ಲಿ ದಾಪುಗಾಲು ಹಾಕಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಬಡ ಉದ್ಯಮಿಗಳ ಬಗ್ಗೆ ಕಾಳಜಿ ಇರಲಿ

‘ಕೈಗಾರಿಕೋದ್ಯಮಿಗಳು ಎಂದರೆ ಜನರಲ್ಲಿ, ರಾಜಕಾರಣಿಗಳ ಮನದಲ್ಲಿ ಮೂಡುವ ಚಿತ್ರಣಕ್ಕೂ ವಾಸ್ತವಕ್ಕೂ ಭಾರಿ ವ್ಯತ್ಯಾಸ ಇದೆ. ಸಾಲ ಮಾಡಿ ಕಾರ್‌ ಖರೀದಿಸಿ, ಕೋಟ್ ಹಾಕಿಕೊಂಡು ತಿರುಗುವ ಸಣ್ಣ ಕೈಗಾರಿಕೋದ್ಯಮಿಗಳು ತಮ್ಮ ಕೈಗಾರಿಕಾ ಶೆಡ್‌ಗಳಲ್ಲಿ ಕೈಕೊಳೆ ಮಾಡಿಕೊಂಡು ಕೆಲಸದಲ್ಲಿ ತೊಡಗಿರುತ್ತಾರೆ. ಅವರೊಂದು ಬಗೆಯಲ್ಲಿ ಬಡ (ಬಿಪಿಎಲ್‌) ಉದ್ಯಮಿಗಳು. ರಾಜಕೀಯ ಪಕ್ಷಗಳು ಮತ್ತು ಅಧಿಕಾರದಲ್ಲಿ ಇರುವ ಸರ್ಕಾರಗಳು ಕೈಗಾರಿಕಾ ಮೂಲ ಸೌಕರ್ಯಗಳಿಗೆ ಕೊನೆಯ ಆದ್ಯತೆ ನೀಡುತ್ತಿವೆ. ಹೀಗಾಗಿ ಸಣ್ಣ ಉದ್ದಿಮೆದಾರರು ಒಂದರ್ಥದಲ್ಲಿ ನಿರ್ಲಕ್ಷಿತ ಮತದಾರರಾಗಿದ್ದಾರೆ’ ಎಂದು ಆಟೊಮೊಬೈಲ್‌ ಸರ್ವಿಸ್‌ ಸೆಂಟರ್‌ ಬಿಡಿಭಾಗ ಪೂರೈಕೆ ಉದ್ದಿಮೆಯ ಶಶಿಧರ ಶೆಟ್ಟಿ ದೂರುತ್ತಾರೆ.

‘ಮಂಜೂರಾದ ಭೂಮಿ ವಶಕ್ಕೆ ಪಡೆಯಲು ಲಂಚ ಕೊಡಬೇಕು. ಉದ್ದಿಮೆ ಆರಂಭಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹಂಚಿಕೆಯಾದ ಭೂಮಿ ರದ್ದುಪಡಿಸಲೂ ಲಂಚ ಕೊಡಬೇಕಾಗುತ್ತದೆ.

ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿಗಳಿಂದ ‘ಎಸ್‌ಎಸ್‌ಐ’ಗಳಿಗಾಗಿ ವಿಶೇಷ ನೆರವು ನಿರೀಕ್ಷಿಸುವಂತಿಲ್ಲ. ಭೂಮಿ ಹಂಚಿಕೆಯಾದ ನಂತರ ಕೈಗಾರಿಕೆ ಸ್ಥಾಪಿಸಲು ಇರುವ ಮೂರು ವರ್ಷಗಳ ಅವಧಿಯಲ್ಲಿ ಕಂತಿನ ರೂಪದಲ್ಲಿ ಹಣ ಕಟ್ಟಲು ಅವಕಾಶ ಮಾಡಿಕೊಡಬೇಕು. ಹೊಸ ಕೈಗಾರಿಕಾ ಎಸ್ಟೇಟ್‌ಗಳಿಗೆ ಉದ್ದಿಮೆಗಳು ವರ್ಗಾವಣೆಗೊಳ್ಳಬೇಕಾಗಿದೆ. ಅಂದರೆ ಮಾತ್ರ ಬೆಂಗಳೂರಿನ ಪ್ರಕಾಶ್‌ ನಗರ ಮತ್ತು ಕಾಮಾಕ್ಷಿ ಪಾಳ್ಯದಂತಹ ಜನವಸತಿ ಪ್ರದೇಶಗಳು ಮಾಲಿನ್ಯ, ವಾಹನ ದಟ್ಟಣೆ, ಕಸದ ರಾಶಿ, ಕೈಗಾರಿಕೆಗಳ ಸದ್ದು ಮತ್ತಿತರ ಸಮಸ್ಯೆಗಳಿಂದ ಮುಕ್ತವಾಗಲಿವೆ’ ಎಂದು ಅವರು ಪರಿಹಾರವನ್ನೂ ಸೂಚಿಸುತ್ತಾರೆ.

ಕೈಗಾರಿಕೆಗಳಲ್ಲಿ ಇರುವ ಬಡ ಉದ್ದಿಮೆದಾರರ ಬಗ್ಗೆಯೂ ಗಮನ ಹರಿಸಿ ಎನ್ನುವುದು ಅವರ ಪ್ರಮುಖ ಅಹವಾಲು ಆಗಿದೆ. ‘ಎಸ್‌ಎಸ್‌ಐ’ಗಳು ವೋಟ್‌ ಬ್ಯಾಂಕ್‌ ಅಲ್ಲ ಎನ್ನುವ ಕಾರಣಕ್ಕೆ ಅನಾದರಕ್ಕೆ ಒಳಗಾಗಿವೆ. ತಮ್ಮ ಮತದಾರರಲ್ಲದ ಜನರ ಬಗ್ಗೆ ಜನಪ್ರತಿನಿಧಿಗಳು ಸಹಜವಾಗಿಯೇ ಕಾಳಜಿ ವಹಿಸುವುದಿಲ್ಲ.

‘ಜಿಎಸ್‌ಟಿ ವ್ಯವಸ್ಥೆಯು ’ಇನ್‌ಸ್ಪೆಕ್ಟರ್‌ ಮುಕ್ತ ರಾಜ್‌' ಎಂದು ಹೇಳುವುದು ಬರೀ ಬೂಟಾಟಿಕೆ. ಇಲ್ಲಿ ಪ್ರತಿಯೊಂದಕ್ಕೂ ಅಧಿಕಾರಿಗಳಿಗೆ ದುಡ್ಡು ಕೊಡಬೇಕು. ದೊಡ್ಡ ಕಂಪನಿಗೆ ಬಿಲ್ ಮಾಡಿದಾಗ ನಾವು ಶೇ 18ರಷ್ಟು ತೆರಿಗೆ ಪಾವತಿಸಬೇಕು. ದೊಡ್ಡ ಸಂಸ್ಥೆಗಳು ಸುಲಭವಾಗಿ ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ನ ಪ್ರಯೋಜನ ಪಡೆದುಕೊಳ್ಳುತ್ತವೆ, ‘ಎಸ್‌ಎಸ್‌ಐ’ಗಳಿಗೆ ಅಂತಹ ಪ್ರಯೋಜನ ಇಲ್ಲ. ಹೋರಾಟ ನಡೆಸುವ ಸಾಮರ್ಥ್ಯ ನಮ್ಮ ರಟ್ಟೆಯಲ್ಲಿ ಇಲ್ಲದ ಕಾರಣಕ್ಕೆ ಶೋಷಣೆ ನಡೆದೇ ಇದೆ. ಕೈಗಾರಿಕಾ ಮೂಲಸೌಕರ್ಯಗಳಿಗೆಂದೇ ನಿರ್ದಿಷ್ಟ ನಿಧಿ ಹಂಚಿಕೆ ಮಾಡಬೇಕು. ಕಾರ್ಮಿಕರಿಗಾಗಿ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಜಾರಿಗೆ ತರಲು ಹೊಸ ಸರ್ಕಾರ ಮುತುವರ್ಜಿ ವಹಿಸಬೇಕು’ ಎಂದೂ ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.