ADVERTISEMENT

ವೈಯಕ್ತಿಕ ಟೀಕೆಗಿಳಿದ ಮೋದಿ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಬೀದರ್ ಜಿಲ್ಲೆಯ ಔರಾದ್‌ನಲ್ಲಿ ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕಾರ್ಯಕರ್ತರು ಬಿದರಿ ಕಲಾಕೃತಿಯನ್ನು ಕಾಣಿಕೆಯಾಗಿ ನೀಡಿದರು
ಬೀದರ್ ಜಿಲ್ಲೆಯ ಔರಾದ್‌ನಲ್ಲಿ ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕಾರ್ಯಕರ್ತರು ಬಿದರಿ ಕಲಾಕೃತಿಯನ್ನು ಕಾಣಿಕೆಯಾಗಿ ನೀಡಿದರು   

ಬೀದರ್‌: ‘ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಘೋಷಣೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ವಿರುದ್ಧ ಮಾತನಾಡಲು ಪ್ರಮುಖ ವಿಷಯಗಳೇ ಇಲ್ಲವಾಗಿದೆ. ಹೀಗಾಗಿ ಅವರು ಪ್ರಧಾನಿ ಹುದ್ದೆಯ ಘನತೆಯನ್ನೂ ಲೆಕ್ಕಿಸದೆ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು.

ಜಿಲ್ಲೆಯ ಔರಾದ್‌ ಹಾಗೂ ಭಾಲ್ಕಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಅವರು, ‘ನನ್ನ ವಿರುದ್ಧ ಎಷ್ಟೇ ಮಾತನಾಡಿದರೂ ನಾನು ಅವರ ವಿರುದ್ಧ ಮಾತನಾಡಲಾರೆ. ಮೋದಿ ಪ್ರಧಾನಮಂತ್ರಿ ಸ್ಥಾನದಲ್ಲಿರುವ ಕಾರಣ ಅವರಿಗೆ ಗೌರವ ಕೊಡುತ್ತೇನೆ’ ಎಂದರು.

‘ಮೋದಿ ಅವರು ಭ್ರಷ್ಟ ಯಡಿಯೂರಪ್ಪ ಅವರನ್ನು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಜೈಲಿಗೆ ಹೋಗಿ ಬಂದಿರುವ ನಾಲ್ವರಿಗೆ ಮಣೆ ಹಾಕಿದ್ದಾರೆ. ರಾಜ್ಯದ ಬಿಜೆಪಿಯಲ್ಲಿ ಹಿಂದಿ ಚಲನಚಿತ್ರ ‘ಶೋಲೆ’ಯಲ್ಲಿನ ಖಳನಾಯಕರಾದ ಗಬ್ಬರ್‌ಸಿಂಗ್, ಕಾಲಿಯಾ, ಸಾಂಬಾ ಎಲ್ಲರೂ ಇದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನೀರವ್‌ ಮೋದಿ ಸಾವಿರಾರು ಕೋಟಿ ರೂಪಾಯಿ ವಂಚಿಸಿದರೂ ಸುಮ್ಮನಿರುವುದು ಏಕೆ?, ಯಡಿಯೂರಪ್ಪ ಭ್ರಷ್ಟ ಎನ್ನುವುದು ಗೊತ್ತಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಏಕೆ? ಜೈ ಶಾ ₹40 ಸಾವಿರ ಹೂಡಿಕೆ ಮಾಡಿ ₹80 ಕೋಟಿಯನ್ನಾಗಿ ಪರಿವರ್ತಿಸಿದ್ದು ಹೇಗೆ ಎನ್ನುವ ನನ್ನ ಮೂರು ಪ್ರಶ್ನೆಗಳಿಗೆ ಮೋದಿ ಅವರು ಉತ್ತರಿಸಬೇಕು’ ಎಂದು ಹೇಳಿದರು.

‘ಕನಿಷ್ಠ ಪಕ್ಷ ಬಸವಣ್ಣನ ನಾಡಿನಲ್ಲಾದರೂ ಮೋದಿ ನುಡಿದಂತೆ ನಡೆಯಬೇಕಿತ್ತು. ಆರ್‌ಎಸ್‌ಎಸ್‌ ವಿಚಾರಧಾರೆಗಳನ್ನು ಹೇರಲು ಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ರಾಹುಲ್‌– ಮೋದಿ ನಡುವೆ ಚುನಾವಣೆ ನಡೆಯುತ್ತಿಲ್ಲ. ರಾಜ್ಯದ ಜನರ ಪ್ರಗತಿ ವಿಷಯವಾಗಿ ಚುನಾವಣೆ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.