ADVERTISEMENT

ಶಾಸಕ ರಾಜೇಶ್‌ಗೆ ‘ಬಿ’ ಫಾರಂ

ಮೈಸೂರಿನಲ್ಲಿ ರಾಜೇಶ್‌– ಪುಷ್ಪಾ ಜೊತೆ ಸಿಎಂ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಜಗಳೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಅನ್ನು ಶಾಸಕ ಎಚ್‌.ಪಿ. ರಾಜೇಶ್‌ ಅವರಿಗೆ ಕೊಡಲು ಕೊನೆಗೂ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

ಈ ಹಿಂದೆ ಪುಷ್ಪಾ ಲಕ್ಷ್ಮಣಸ್ವಾಮಿ ಅವರಿಗೆ ಕ್ಷೇತ್ರದ ಟಿಕೆಟ್‌ ಘೋಷಿಸಲಾಗಿತ್ತು. ನಂತರ ಶಾಸಕರ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಮೈಸೂರಿನ ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ರಾಜೇಶ್‌ ಹಾಗೂ ಪುಷ್ಪಾ ಲಕ್ಷ್ಮಣಸ್ವಾಮಿ ಅವರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೇಶ್‌ ಅವರಿಗೆ ‘ಬಿ’ ಫಾರಂ ಕೊಡುವುದಾಗಿ ಸ್ಪಷ್ಟಪಡಿಸಿದರು ಮೂಲಗಳು ತಿಳಿಸಿವೆ.

ADVERTISEMENT

‘ಪಕ್ಷದಿಂದ ನಡೆಸಿದ ಸಮೀಕ್ಷೆ ಪ್ರಕಾರ, ನಿಮಗೆ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಶಾಸಕ ರಾಜೇಶ್‌ಗೆ ಜನಬೆಂಬಲ ಇದೆ. ಈಗ ಸಹಕರಿಸಿ. ಮುಂದೆ ನೋಡೋಣ. ನಿಮಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು’ ಎಂದು ಪುಷ್ಪಾ ಅವರಿಗೆ ಮುಖ್ಯಮಂತ್ರಿ ತಿಳಿಸಿದರು. ತಕ್ಷಣವೇ ಪುಷ್ಪಾ ಕಣ್ಣೀರು ಹಾಕಿದರು. ಆಗ ಸಿದ್ದರಾಮಯ್ಯ ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.

ಪುಷ್ಪಾ ಅವರನ್ನು ಸಂಪರ್ಕಿಸಿದಾಗ, ‘ರಾಜೇಶ್‌ಗೆ ಟಿಕೆಟ್‌ ಕೊಡುತ್ತೇವೆ, ಮುಂದೆ ನೋಡೋಣ ಎಂದು ಮುಖ್ಯಮಂತ್ರಿ ನನಗೆ ತಿಳಿಸಿದ್ದಾರೆ. ಜಗಳೂರಿಗೆ ತೆರಳಿ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ನಡೆ ನಿರ್ಧರಿಸುತ್ತೇನೆ’ ಎಂದು ಗದ್ಗದಿತರಾಗಿ ನುಡಿದರು.

ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಎಚ್.ಪಿ. ರಾಜೇಶ್ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.