ADVERTISEMENT

ಸದಾಶಿವ ಆಯೋಗದ ವರದಿ- ತೀರದ ತಗಾದೆ

ಉಮಾಪತಿ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ. (ಪ್ರಜಾವಾಣಿ ಸಂಗ್ರಹ ಚಿತ್ರ)
ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ. (ಪ್ರಜಾವಾಣಿ ಸಂಗ್ರಹ ಚಿತ್ರ)   

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನಿಗದಿ ಮಾಡಿರುವ ನ್ಯಾಯಮೂರ್ತಿ ಸದಾಶಿವ ವರದಿಯ ಜಾರಿಗೆ ಬದ್ಧವೆಂದು ಜಾತ್ಯತೀತ ಜನತಾದಳ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದೇ ಪಕ್ಷದ ತಲೆಯಾಳು ಎಚ್.ಡಿ.ಕುಮಾರಸ್ವಾಮಿ ಅವರು ಈಗ ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ. ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ 2013ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಆಯೋಗದ ವರದಿ ಪರವಾಗಿ ಸದ್ದು ಮಾಡಿ ಎಡಗೈ ಒಳಪಂಗಡದ ಬೆಂಬಲ ಗಳಿಸಿತ್ತು. ಐದು ವರ್ಷದ ಅಧಿಕಾರಾವಧಿಯಲ್ಲಿ ವರದಿಯನ್ನು ಪುರಸ್ಕರಿಸಲಿಲ್ಲ, ತಿರಸ್ಕರಿಸಲೂ ಇಲ್ಲ. ಇದೇ ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಚಹರೆ ಡಾ.ಜಿ.ಪರಮೇಶ್ವರ್ ಈಗ ಉಪಮುಖ್ಯಮಂತ್ರಿ. ಸಂದರ್ಭವಶಾತ್ ಅವರು ಪ್ರಬಲ ‘ಅಸ್ಪೃಶ್ಯ’ ಪರಿಶಿಷ್ಟ ಜಾತಿಯೆನಿಸಿದ ಹೊಲೆಯ (ಬಲಗೈ) ಒಳಪಂಗಡಕ್ಕೆ ಸೇರಿದವರು.

ಒಳಮೀಸಲು ಜಾರಿ ಮಾಡಿದರೆ ಬಲಗೈ ಒಳಪಂಗಡ ಮತ್ತು ಇತರೆ ಸ್ಪೃಶ್ಯ ಪರಿಶಿಷ್ಟ ಜಾತಿಗಳ ಸಿಟ್ಟು ಎದುರಿಸಬೇಕಾದೀತು ಎಂಬ ಆತಂಕ ಸಿದ್ದರಾಮಯ್ಯ ಸರ್ಕಾರವನ್ನು ಕಾಡಿತ್ತು. ಈ ಮುನ್ನ ಅಧಿಕಾರದಲ್ಲಿದ್ದ
ಡಿ.ವಿ.ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಕೂಡ ಇದೇ ಕಾರಣದಿಂದ ವರದಿ ಕುರಿತು ತೀರ್ಮಾನ ತೆಗೆದುಕೊಳ್ಳಲಿಲ್ಲ.

ಸದಾಶಿವ ವರದಿ ಜಾರಿಯ ವಾದ- ವಿವಾದವು ಸಮ್ಮಿಶ್ರ ಸರ್ಕಾರವನ್ನು ಬಿಡದೆ ಕಾಡುವ ಎಲ್ಲ ಸೂಚನೆಗಳು ದಟ್ಟವಾಗಿವೆ.

ADVERTISEMENT

ತಮಗೆ ಶೇ 6ರಷ್ಟು ಒಳ ಮೀಸಲಾತಿ ಕಲ್ಪಿಸಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕಾರ್ಯರೂಪಕ್ಕೆ ಬರಬೇಕೆಂದು ಒತ್ತಾಯಿಸುವ ಆಂದೋಲನವನ್ನು ಮಾದಿಗ (ಎಡಗೈ) ಸಮುದಾಯ ಮುಂಬರುವ ದಿನಗಳಲ್ಲಿ ಇನ್ನಷ್ಟು ‘ಆಕ್ರಮಣಕಾರಿ’ಯಾಗಿ ಮುಂದುವರೆಸಲಿದೆ.

ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಹನುಮಂತಪ್ಪ ಬಳ್ಳಾರಿ ಮತ್ತು ಪ್ರಧಾನಕಾರ್ಯದರ್ಶಿ ಮುತ್ತಣ್ಣ ಬೆಣ್ಣೂರ ಅವರ ಪ್ರಕಾರ ಎಡಗೈ ಸಮುದಾಯದ ಹೋರಾಟ ಗುರಿ ಸೇರುವ ತನಕ ನಿಲ್ಲದೆ ನಡೆಯುವುದು.

ವಿಧಾನಸಭಾ ಚುನಾವಣೆಗಳಿಗೆ ಮುನ್ನ ಕಳೆದ ನವೆಂಬರ್-ಡಿಸೆಂಬರ್ನಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಭಾರೀ ಜಾಥಾ ನಡೆಸಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ತೀವ್ರ ಒತ್ತಡ ಹೇರಿತ್ತು. ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮಾದಿಗ ಹೋರಾಟವನ್ನು ವಿಧಾನಸಭೆಯಲ್ಲಿ ಬಲವಾಗಿ ಸಮರ್ಥಿಸಿದ್ದ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬಂದ ನಂತರ ಹಿಂದೆ ಸರಿದರು. ಅಷ್ಟೇ ಅಲ್ಲ, ಮತ್ತೊಂದು ಪ್ರಬಲ ‘ಅಸ್ಪೃಶ್ಯ’ ಒಳಪಂಗಡವಾದ ಹೊಲೆಯರಿಗೆ 18 ಟಿಕೆಟ್ ನೀಡಿದ ಕಾಂಗ್ರೆಸ್ ಪಕ್ಷ ಮಾದಿಗ ಜನಾಂಗಕ್ಕೆ ಕೇವಲ ಒಂಬತ್ತು ಟಿಕೆಟ್ ಗಳನ್ನು ನೀಡಿತು. ಅಸ್ತಿತ್ವಕ್ಕೆ ಬಂದಿರುವ ಮೈತ್ರಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಲಗೈ ಒಳಪಂಗಡಕ್ಕೆ ಮೂರು ಸ್ಥಾನಗಳನ್ನು ನೀಡಿದ್ದು, ಮಾದಿಗ ಜನಾಂಗಕ್ಕೆ ಪ್ರಾತಿನಿಧ್ಯ ನಿರಾಕರಿಸಿ ಘೋರ ಅನ್ಯಾಯ ಮಾಡಲಾಗಿದೆ ಎಂಬುದು ಸಮಿತಿಯ ಆಪಾದನೆ.

ಬಲಗೈ ಪಂಗಡಕ್ಕೆ ಡಾ.ಜಿ.ಪರಮೇಶ್ವರ (ಉಪಮುಖ್ಯಮಂತ್ರಿ) ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಎಡಗೈ ಒಳಪಂಗಡದ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಗೆದ್ದವರು ರೂಪಾ ಶಶಿಧರ್ ಮಾತ್ರ. ಮೇಲ್ಮನೆಯಲ್ಲಿ ಇದೇ ಜನಾಂಗಕ್ಕೆ ಸೇರಿದ ಆರ್.ಬಿ.ತಿಮ್ಮಾಪುರ ಹಾಗೂ ಆರ್.ಧರ್ಮಸೇನ ಇದ್ದಾರೆ. ಈ ಮೂವರ ಪೈಕಿ ಒಬ್ಬರನ್ನಾದರೂ ಮಂತ್ರಿ ಮಾಡಬಹುದಿತ್ತು. ನಮ್ಮ ಜನಾಂಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಕೆ.ಬಿ.ಶಾಣಪ್ಪ ಅವರನ್ನು ಮೊದಲು ಮಂತ್ರಿ ಮಾಡಿ ಆನಂತರ ಮೇಲ್ಮನೆಗೆ ಆರಿಸಿ ತಂದಿದ್ದರು ಅಂದಿನ ಜನತಾದಳ ಸರ್ಕಾರದ ಮುಖ್ಯಮಂತ್ರಿ ಜೆ.ಎಚ್.ಪಟೇಲ್. ಈಡಿಗರಿಗೆ ಪ್ರಾತಿನಿಧ್ಯ ಇಲ್ಲವೆಂದು ಮೇಲ್ಮನೆಯ ನಾಮಕರಣ ಸದಸ್ಯೆ ಜಯಮಾಲಾ ಅವರನ್ನು ಮಂತ್ರಿ ಮಾಡುವುದೇ ಆದರೆ, ನಮ್ಮ ಜನಾಂಗವನ್ನು ಕಡೆಗಣಿಸುವುದೇಕೆ ಎಂದು ಹನುಮಂತಪ್ಪ ಮತ್ತು ಮುತ್ತಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾದಿಗ ಜನಾಂಗದ ಸುಶಿಕ್ಷಿತ ಪ್ರಜ್ಞಾವಂತ ಸಮೂಹ ರಾಜಕೀಯ ಪ್ರಾತಿನಿಧ್ಯ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಒಳಮೀಸಲಾತಿ ಪಡೆಯುವುದೇ ಅಂತಿಮ ಗುರಿ ಎಂಬ ದೃಢ ಸಂಕಲ್ಪ ತೊಟ್ಟಿದೆ. ಈ ಬೇಡಿಕೆ ಈಡೇರಿಸದೆ ಹೋದರೆ ಮೈತ್ರಿ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂದು ಅವರು ‘ಪ್ರಜಾವಾಣಿ' ಗೆ ತಿಳಿಸಿದರು.

ವಿಶೇಷವಾಗಿ ಮಾದಿಗ ಜನಾಂಗದ ಮೇಲೆ ಸಹಾನುಭೂತಿ ನಟಿಸಿ 2013ರ ಚುನಾವಣೆಗಳಲ್ಲಿ ಬೆಂಬಲ ಪಡೆದ ಕಾಂಗ್ರೆಸ್ ಪಕ್ಷ ಆನಂತರ ಅನ್ಯಾಯ ಮುಂದುವರೆಸಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 13 ಸಲ ಅಧಿಕೃತ ಮಾತುಕತೆಗೆ ಕರೆದು ಕೇವಲ ಕಾಲಹರಣ ಮಾಡಿದರು. ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಒಳಪಂಗಡವು ಈ ಪಕ್ಷದಿಂದ ದೂರ ಉಳಿಯಿತು.ಇನ್ನು ಮುಂದಾದರೂ ಪಾಠ ಕಲಿಯದೆ ಹೋದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಸೋಲು ಕಾದಿದೆ. ಬಿಜೆಪಿ ನಮ್ಮನ್ನು ಯಾವ ರೀತಿ ಬೆಂಬಲಿಸಲಿದೆ ಎಂದು ಕಾದು ನೋಡಲಿದ್ದೇವೆ ಎಂಬುದು ಹನುಮಂತಪ್ಪ ನೀಡಿರುವ ಎಚ್ಚರಿಕೆ.

ಸದಾಶಿವ ಆಯೋಗವನ್ನು ವಿರೋಧ ಮಾಡಿದ ಶಕ್ತಿಗಳ ಕೈಯಲ್ಲಿದೆ ಹೊಸ ಸರ್ಕಾರ. ಅಡ್ಡಿ ಮಾಡಿದವರೆಲ್ಲ ಅಧಿಕಾರದಲ್ಲಿದ್ದಾರೆ. ಮಾದಿಗ ಯುವಕರು ರೋಷದಲ್ಲಿದ್ದಾರೆ. ಯಾವ ಪಕ್ಷವನ್ನೂ ನಂಬಲಾರದ ಸ್ಥಿತಿಗೆ ಬಂದಿದ್ದಾರೆ. ಎಲ್ಲ ಜಿಲ್ಲೆಗಳಿಂದ ಏಕಕಾಲಕ್ಕೆ ಪ್ರತಿಭಟನೆ ಮಾಡಬೇಕು ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಹಳ್ಳಿ ಪಂಚಾಯಿತಿ ತಾಲ್ಲೂಕು ಮಟ್ಟಗಳಲ್ಲಿ ಮಾದಿಗ ಜನಸಂಘಟನೆ ಮಾಡಿ ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕಿದೆ.

ಸಿದ್ದರಾಮಯ್ಯ ಬಲಗೈ ನಾಯಕರ ಮಾತು ಕೇಳಿ ಅದುಮಿಟ್ಟರು. ಸದಾಶಿವ ಆಯೋಗದ ವರದಿ ಜಾರಿ ಕುರಿತು ಖುದ್ದು ರಾಹುಲ್ ಗಾಂಧಿಯವರು ಭರವಸೆ ನೀಡಿದರೂ ಈಡೇರಲಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಎಡಗೈ ಒಳಪಂಗಡದ ಗೋವಿಂದ ಕಾರಜೋಳ ಮತ್ತು ನಾರಾಯಣಸ್ವಾಮಿ ಇಬ್ಬರಿಗೂ ಸಚಿವ ಸ್ಥಾನಗಳು ದೊರೆತಿದ್ದವು. ಇದ್ದಿದ್ದರಲ್ಲಿ ಬಿಜೆಪಿಯೊಂದೇ ನಮ್ಮ ಜನಾಂಗಕ್ಕೆ ನ್ಯಾಯ ಕೊಡುತ್ತಿದೆ ಎಂಬುವು ಕಾಂಗ್ರೆಸ್ ಪಕ್ಷದಲ್ಲಿರುವ ಮುತ್ತಣ್ಣ ಬೆಣ್ಣೂರ ಮಾತುಗಳು.

ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವ ಕುರಿತು ಎಡಗೈ ಒಳಪಂಗಡದ ಮಠಾಧೀಶ ಮಾದಾರ ಚೆನ್ನಯ್ಯ ಸ್ವಾಮೀಜಿ ಅಸಮಾಧಾನ ಪ್ರಕಟಿಸಿದ್ದಾರೆ. ಒಳಮೀಸಲಾತಿ ಜಾರಿ ಹೋರಾಟ ಮುಂದುವರಿಕೆ ಕುರಿತು ಮುಂಬರುವ ದಿನಗಳಲ್ಲಿ ಈ ವಿಷಯ ಕುರಿತು ಜನಾಂಗದ ಪ್ರಮುಖರೊಡನೆ ಸಮಾಲೋಚನೆ ನಡೆಸಿ, ಅಲ್ಲಿ ವ್ಯಕ್ತವಾಗುವ ಅಭಿಪ್ರಾಯದ ಪ್ರಕಾರ ಹೆಜ್ಜೆ ಇರಿಸಲಾಗುವುದು ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.
*
ವರದಿ ಜಾರಿಗೆ ಇತರೆ ಪರಿಶಿಷ್ಟರ ವಿರೋಧ
ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಮತ್ತು ಸಂವಿಧಾನಬಾಹಿರ ಎಂದು ಟೀಕಿಸಿರುವ ಸ್ಪೃಶ್ಯ' ಪರಿಶಿಷ್ಟ ಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಇತರೆ ಅಲೆಮಾರಿ ಜನಾಂಗಗಳು ಈ ವರದಿಯ ಜಾರಿಯನ್ನು ವಿರೋಧಿಸಿವೆ. ಗೋಪ್ಯತೆಯ ಮುಸುಕನ್ನು ಕಿತ್ತೆಸೆದು ವರದಿಯನ್ನು ಮೊದಲು ಸಾರ್ವಜನಿಕ ಚರ್ಚೆಗೆ ಇಡಬೇಕು ಎಂಬುದು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಅನಂತ ನಾಯಕ್ ಆಗ್ರಹ. ನಾವು ಎಡಗೈ ಒಳಪಂಗಡದ ವಿರುದ್ಧ ನಿಂತಿಲ್ಲ. ಅವರಿಗೆ ನ್ಯಾಯ ಸಿಗಲೇಬೇಕು. ಎಡಗೈ ಒಳಪಂಗಡ- ಬಲಗೈ ಒಳಪಂಗಡ ಮತ್ತು ಇತರೆ ಎಲ್ಲ ಪರಿಶಿಷ್ಟ ಜಾತಿಗಳ ಪ್ರತಿನಿಧಿಗಳು ಒಂದೆಡೆ ಸೇರಿ ವರದಿ ಕುರಿತು ಮುಖಾಮುಖಿ ಚರ್ಚೆ ನಡೆಸುವುದು ಅತ್ಯಗತ್ಯ. ವರದಿಯನ್ನು ಕತ್ತಲಲ್ಲಿ ಇರಿಸಿರುವುದೇ ಒಂದು ಬಹುದೊಡ್ಡ ಮೀಸಲಾತಿ ವಿರೋಧಿ ರಾಜಕಾರಣ. ದಲಿತರ ಒಗ್ಗಟ್ಟನ್ನು ಮುರಿದು ಅವರನ್ನು ಪರಸ್ಪರ ಎತ್ತಿ ಕಟ್ಟಲು ಈ ವರದಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ಒಕ್ಕೂಟದ ಆಪಾದನೆ.

ಸಂವಿಧಾನ ಕೊಡಮಾಡಿರುವ ಮೀಸಲಾತಿ ಸೌಲಭ್ಯಗಳು ಎಲ್ಲ ಪರಿಶಿಷ್ಟ ಜಾತಿಗಳಿಗೆ ಸಮನಾಗಿ ಸಿಕ್ಕಿವೆಯೇ, ಇಲ್ಲದೆ ಹೋದರೆ ಸಮಾನ ಹಂಚಿಕೆಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ವಿಷಯವನ್ನು ಪರಿಶೀಲಿಸಿದ ಸದಾಶಿವ ಆಯೋಗ, ಹೊಲೆಯರಿಗೆ (ಬಲಗೈ) ಶೇ 5ರಷ್ಟು, ಬೋವಿ, ಲಂಬಾಣಿ ಹಾಗೂ ಕೊರಮ ಕೊರಚರಿಗೆ ಶೇ 3ರಷ್ಟು ಹಾಗೂ ಇತರೆ ಪರಿಶಿಷ್ಟ ಜಾತಿಗಳಿಗೆ ಶೇ 1ರಷ್ಟು ಒಳಮೀಸಲಾತಿಯ ಶಿಫಾರಸು ಮಾಡಿದೆ.

ಪರಿಶಿಷ್ಟ ಜಾತಿಗಳ ಕುರಿತ ರಾಷ್ಟ್ರಪತಿಯವರ ಅಧಿಸೂಚನೆಯ ಪಟ್ಟಿಗೆ ಹೊಸದಾಗಿ ಯಾವುದೇ ಜಾತಿಯನ್ನು ಸೇರಿಸುವ ಅಥವಾ ಕೈಬಿಡುವ ಅಧಿಕಾರ ಇರುವುದು ಸಂಸತ್ಗೆ ಮಾತ್ರ. ನಿರ್ದಿಷ್ಟ ಜಾತಿಯ ಸೇರ್ಪಡೆ ಅಥವಾ ಕೈಬಿಡುವ ಇಲ್ಲವೇ ಪರಿಶಿಷ್ಟರಿಗೆ ಆಂತರಿಕ ಮೀಸಲು ಕಲ್ಪಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡಬಹುದೇ ವಿನಾ ತಾವೇ ಸ್ವತಂತ್ರವಾಗಿ ಆಂತರಿಕ ಮೀಸಲು ಕಲ್ಪಿಸುವ ಅಧಿಕಾರ ಅವುಗಳಿಗೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.