ADVERTISEMENT

ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ ಎದುರು ನೋಡುತ್ತಿದ್ದೇವೆ: ಗುಲಾಂನಬಿ ಆಜಾದ್

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:48 IST
Last Updated 16 ಮೇ 2018, 10:48 IST
ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ ಎದುರು ನೋಡುತ್ತಿದ್ದೇವೆ: ಗುಲಾಂನಬಿ ಆಜಾದ್
ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ ಎದುರು ನೋಡುತ್ತಿದ್ದೇವೆ: ಗುಲಾಂನಬಿ ಆಜಾದ್   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದಾರೆ. ನಾವು ರಾಜ್ಯಪಾಲರ ಆಹ್ವಾನಕ್ಕೆ ಎದುರು ನೋಡುತ್ತಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಗೆ ಅಗತ್ಯ ಶಾಸಕರ ಸಂಖ್ಯೆ ಇದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂನಬಿ ಆಜಾದ್‌ ಹೇಳಿದರು.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮಗೆ ಸಂಖ್ಯಾಬಲ ಇದೆ. ಆದರೆ, ಬಿಜೆಪಿಗೆ ಸಂಖ್ಯಾಬಲದ ಶಾಸಕರ ಕೊರತೆ ಇದೆ. ಸುಪ್ರೀಂ ಕೋರ್ಟ್ ಆದೇಶದಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಬಹುದು. ಹೀಗಾಗಿ ಸಮಯ ವ್ಯರ್ಥ ಮಾಡದೇ ಸರ್ಕಾರ ರಚನೆಗೆ ಅವಕಾಶ ಕೊಡಬೇಕು. ಕುದರೆ ವ್ಯಾಪಾರ ನಡೆಯಲು ಬಿಡಬಾರದು ಎಂದು ಅವರು ಒತ್ತಾಯಿಸಿದರು.

ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ಕೂಡಲೇ ಸರ್ಕಾರ ರಚನೆ ಮಾಡಲು ಅವಕಾಶ ಕೊಡಬೇಕು. ಸರ್ಕಾರ ರಚನೆಗೆ ಅವಕಾಶ ನೀಡದಿದ್ದರೆ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯಪಾಲರ ವಿರುದ್ಧ ಕಾಂಗ್ರೆಸ್, ಜೆಡಿಎಸ್‌ ಮುಖಂಡರು, ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ADVERTISEMENT

ರಾತ್ರಿಯವರೆಗೂ ರಾಜ್ಯಪಾಲರ ನಡೆಯನ್ನು ಕಾದು ನೋಡಲಿರುವ ಉಭಯ ಪಕ್ಷಗಳ ನಾಯಕರು, ಸರ್ಕಾರ ರಚನೆಗೆ ಆಹ್ವಾನ ನೀಡದಿದ್ದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದಾರೆ. ಪ್ರತಿಭಟನೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಸಾಥ್ ನೀಡುವರು. ಪ್ರತಿಭಟನೆಯಲ್ಲಿ ಜೆಡಿಎಸ್‌ನ ಎಲ್ಲಾ ನಾಯಕರು ಕೂಡ ಭಾಗಿ ಆಗಲಿದ್ದಾರೆ ಎಂದು ತಿಳಿಸಿದರು.

ಈ ಮೂಲಕ ರಾಜ್ಯಪಾಲರ ಮೇಲೆ ಕಾಂಗ್ರೆಸ್-ಜೆಡಿಎಸ್ ಒತ್ತಡ ತರಲು ಮುಂದಾಗಿದ್ದಾರೆ. ಇತ್ತ, ಕಾನೂನತ್ಮಕ ಹೋರಾಟಕ್ಕೂ ಕಾಂಗ್ರೆಸ್‌ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.