ADVERTISEMENT

ಸೊರಬದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:51 IST
Last Updated 4 ಮೇ 2018, 11:51 IST
ಸೊರಬದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ: ಸಿದ್ದರಾಮಯ್ಯ
ಸೊರಬದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ: ಸಿದ್ದರಾಮಯ್ಯ   

ಸೊರಬ (ಶಿವಮೊಗ್ಗ): ಈ ಬಾರಿಯ ಚುನಾವಣೆಯಲ್ಲಿ ಸೊರಬ ತಾಲ್ಲೂಕಿನ ಮತದಾರರು ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳುವ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸೊರಬ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಎಂ.ತಲ್ಲೂರು ಅವರ ಪರವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂದಿಗೂ ಕುಟುಂಬ ರಾಜಕಾರಣ ವಿರೋಧಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಒಪ್ಪಿಕೊಂಡಾಗ ಚುನಾಯಿತ ಜನಪ್ರತಿನಿಧಿ ಜನರ ಸೇವಕನಾಗಿ ಕೆಲಸ ಮಾಡಬೇಕು. ಆದರೆ ಸೊರಬದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವುದು ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ನಿಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಜು ತಲ್ಲೂರು ಕೈ ಬಲಪಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ನಂಜುಂಡಪ್ಪ ವರದಿಯನ್ವಯ ತಾಲ್ಲೂಕು ಹಿದುಳಿಯಲು ಬಂಗಾರಪ್ಪ ಸೇರಿದಂತೆ ಅವರ ಮಕ್ಕಳು ಕಾರಣರಾಗಿದ್ದಾರೆ. ಇಲ್ಲಿನ ಶಾಸಕ ಮಧು ಬಂಗಾರಪ್ಪ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೋರಿ ಒಂದು ಬಾರಿಯೂ ನನಗೆ ಮನವಿ ಸಲ್ಲಿಸಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನನೆಗುದಿಗೆ ಬಿದ್ದಿರುವ ಮೂಡಿ–ಕುಣಿತೆಪ್ಪ, ಮೂಗೂರು,ಕಚವಿ ಏತ ನೀರಾವರಿ ಯೋಜನೆಗೆ ಬೆಕಾಗಿರುವ ₨ 150 ಕೋಟಿ ವೆಚ್ಚದಲ್ಲಿ ಆ ಭಾಗದ ರೈತರ 12ಸಾವಿರ ಎಕರೆ ಭೂಮಿಗೆ ನೀರಾವರಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತಿನಿಂದ ಬಡವರ ಹಸಿವು ನೀಗುವುದಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ ₨ 15 ಲಕ್ಷ ಜಮೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಅದು ಸುಳ್ಳಾಗಿದೆ. ಲೂಟಿ ಮಾಡಿ ಜೈಲಿಗೆ ಹೋದವರನ್ನು ಪಕ್ಕದಲ್ಲಿ ಇಟ್ಟುಕೊಂಡು ನಮ್ಮ ಸರ್ಕಾರವನ್ನು ತೆಗಳುವ ನೈತಿಕತೆ ನರೇಂದ್ರ ಮೋದಿಗಿಲ್ಲ ಎಂದ ಅವರು, ನೀರಜ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ಅವರು ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ತೆರಳಲು ನರೇಂದ್ರ ಮೋದಿ ಅವರ ಕುಮ್ಮಕ್ಕು ಕಾರಣ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.