ADVERTISEMENT

ಹಸನ್ಮುಖಿ ಹಿಂದೆ ಕಾರ್ಯಕರ್ತರು

ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಚಾರ

ಮಾನಸ ಬಿ.ಆರ್‌
Published 7 ಮೇ 2018, 20:06 IST
Last Updated 7 ಮೇ 2018, 20:06 IST
ಪ್ರಚಾರದ ವೇಳೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಗುವಿನ ಕೈಕುಲುಕಿದರು -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.
ಪ್ರಚಾರದ ವೇಳೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಗುವಿನ ಕೈಕುಲುಕಿದರು -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.   

ಬೆಂಗಳೂರು: ತಡವಾಗಿ ಬಂದರೂ ಕಾರ್ಯಕರ್ತರನ್ನು ಅಪ್ಪಿಕೊಂಡು, ‘ನಡೀರಿ... ಹೋಗೋಣ...’ ಎಂದು ಉತ್ಸಾಹದಿಂದಲೇ ಅವರು ಚುನಾವಣಾ ಪ್ರಚಾರ ಆರಂಭಿಸಿದರು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕಾರ್ಯಕರ್ತರನ್ನು ಹೆಜ್ಜೆ ಹೆಜ್ಜೆಗೂ ಹುರಿದುಂಬಿಸುತ್ತಾ ಗಲ್ಲಿ ಗಲ್ಲಿಯ ಮನೆಗಳಿಗೆ ತೆರಳಿ ಮತ ಕೇಳಿದರು.

ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಪ್ರಚಾರ ವೈಖರಿ ಇದು.

ಬೆಳಿಗ್ಗೆ 8.30ಕ್ಕೆ ಗಾಯತ್ರಿನಗರದ ಕೋದಂಡರಾಮ ದೇವಸ್ಥಾನದಲ್ಲಿ ಪ್ರಾರ್ಥಿಸಿ ಪ್ರಚಾರ ಆರಂಭಿಸಿದರು.

ADVERTISEMENT

ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಮೇಲಿನಿಂದ ಇಣುಕುತ್ತಿದ್ದವರಿಗೂ ಕೈ ಮುಗಿದು ನಕ್ಕು ಮುಂದೆ ಸಾಗಿದರು. ಪಾದರಸದಂತೆ ನಡೆಯುತ್ತಿದ್ದ ಅವರನ್ನು ಹಿಂಬಾಲಿಸಲು ಸಾಧ್ಯವಾಗದ ಕೆಲವು ಮಹಿಳಾ ಕಾರ್ಯಕರ್ತರು ಅಲ್ಲಲ್ಲಿ ನಿಂತು ಮುಂದಕ್ಕೆ ಹೋದರು.

ದಾರಿಯುದ್ದಕ್ಕೂ ನಿಂತಿದ್ದ ಅಭಿಮಾನಿಗಳು ಹಾಗೂ ಕ್ಷೇತ್ರದ ಜನರನ್ನು ನಗುತ್ತಲೇ ಕ್ಷೇಮ ವಿಚಾರಿಸಿದರು. ಗಲ್ಲಿಯ ಯುವಕರಿಗೆ ಕೈ ಮುಗಿದು, ವಯಸ್ಕರ ಕಾಲಿಗೆ ಬಿದ್ದು ನಮಸ್ಕರಿಸಿ ಮತ ಕೇಳಿದರು.

ವೇಗವಾಗಿ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರ ನಡುವೆ ಒಮ್ಮೆ ‘ಸರ್ಕಾರ ಬದಲಿಸಿ’ ಎನ್ನುವ ಬದಲು ‘ಬಿಜೆಪಿ ಬದಲಿಸಿ’ ಎನ್ನುವ ಕೂಗು ಕೇಳಿತು. ‘ಹಾಗೆ ಹೇಳಬೇಡ್ರಿ, ತಪ್ಪು ಅರ್ಥ ಬರುತ್ತದೆ’ ಎಂದು ತಮಾಷೆ ಮಾಡಿದ ಶಾಸಕ ಕಾರ್ಯಕರ್ತರನ್ನು ನಗೆಗಡಲಲ್ಲಿ ತೇಲಿಸಿದರು.

ಆಗ ತಾನೇ ಅಂಗಡಿಗಳನ್ನು ತೆರೆಯುತ್ತಿದ್ದ ಹೂವು, ಹಣ್ಣು ವ್ಯಾಪಾರಿಗಳನ್ನು ‘ದಯಮಾಡಿ ಮತಹಾಕಿ’ ಎಂದು ಕೇಳಿಕೊಂಡು ಮುಂದೆ ಸಾಗಿದರು. ಸುಬ್ರಹ್ಮಣ್ಯನಗರದ 66ನೇ ವಾರ್ಡ್‌ನ ಕಿರಿದಾದ ರಸ್ತೆಗಳು, ಅಲ್ಲಿಲ್ಲಿ ಬಿದ್ದಿದ್ದ ರಾಶಿ ಕಸಗಳ ನಡುವೆಯೇ ಕಾರ್ಯಕರ್ತರು ಹೆಜ್ಜೆ ಹಾಕಿದರು. ಈ ರಸ್ತೆಯಲ್ಲಿ ಸ್ಕೂಟಿಯಲ್ಲಿ ಬಂದ ಮಹಿಳೆಯೊಬ್ಬರು ‘ಇಲ್ಲಿ ಮಾತ್ರ ಪ್ರಚಾರ ಮಾಡುತ್ತೀರಿ. 65ನೇ ವಾರ್ಡ್‌ನಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲಿ ಎಷ್ಟೊಂದು ಸಮಸ್ಯೆಗಳು ಇವೆ. ಅಲ್ಲಿ ಯಾಕೆ ಪ್ರಚಾರ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಶಾಸಕರು, ‘ಖಂಡಿತಾ ಬರುತ್ತೇವೆ‘ ಎಂದು ಸಮಾಧಾನಪಡಿಸಿದರು.

ಹೆಚ್ಚು ಜನರು ಕಾಣಿಸಿದಲ್ಲಿ ಕಾರ್ಯಕರ್ತರ ಕೂಗು ಜೋರಾಗುತ್ತಿತ್ತು. ತಮ್ಮ ನಾಯಕ ಮಾತನಾಡಿಸದ ಜನರನ್ನು ತಾವೇ ವಿಚಾರಿಸಿಕೊಂಡು ಮನವೊಲಿಸಲು ಪ್ರಯತ್ನಿಸುತ್ತಿದ್ದರು. ‘ಬರ್ತಾರಣ್ಣ ಬರ್ತಾರಣ್ಣ.. ಅಶ್ವತ್ಥಣ್ಣ ಬರ್ತಾರಣ್ಣ’ ಎಂದು ಕೂಗು ಹಾಕುವ ಮೂಲಕ ಬೆಂಬಲಿಸಿದರು.

ಮನೆಗೆ ಬಂದ ಶಾಸಕರಿಗೆ ಕಾರ್ಯಕರ್ತರು ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ಗುಲಾಬಿ ಹೂವಿನ ದಳಗಳನ್ನು ಬಕೆಟ್‌ನಿಂದ ಸುರಿದ ಅಭಿಮಾನಿಯೊಬ್ಬರು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದರು.

ಮಗ್‌ನಲ್ಲಿ ನೀರು ಹಿಡಿದು ನಿಂತಿದ್ದ ಜನ

ಪ್ರಚಾರಕ್ಕೆ ಶಾಸಕರು ಬರಲಿದ್ದಾರೆ ಎಂದು ಮೊದಲೇ ಅರಿತುಕೊಂಡಿದ್ದ ಸುಬ್ರಹ್ಮಣ್ಯನಗರದ 66ನೇ ವಾರ್ಡ್‌ನ ಒಂದೆರಡು ಕುಟುಂಬದ ಸದಸ್ಯರು ಮಗ್‌ನಲ್ಲಿ ನೀರು ಹಿಡಿದುಕೊಂಡು ಕಾಯುತ್ತಿದ್ದರು. ಶಾಸಕರು ಬಂದು ಮತ ಕೇಳುತ್ತಿದ್ದಂತೆ ಮಗ್‌ ತೋರಿಸಿ ‘ಇದನ್ನು ಕುಡಿಯಲು ಸಾಧ್ಯವಿದೆಯಾ ನೀವೇ ನೋಡಿ. ಸ್ನಾನ ಮಾಡಲು ಕೂಡ ಆಗುವುದಿಲ್ಲ. ಗಬ್ಬು ವಾಸನೆ ಬರುತ್ತಿದೆ. ಕೊಳಚೆ ನೀರು ಕುಡಿಯುವ ನೀರಿಗೆ ಸೇರಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಶಾಸಕರು, ‘ಹಿಂದೆಯೂ ಈ ರೀತಿ ಆಗಿದ್ದನ್ನು ನಾವು ಸರಿಪಡಿಸಿದ್ದೇವೆ. ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಹೆಚ್ಚು ಹೇಳಲು ಸಾಧ್ಯವಿಲ್ಲ. ನಂಬಿ. ಇದು ನನ್ನ ಜವಾಬ್ದಾರಿ’ ಎಂದು ಹೇಳಿ ಮುಂದೆ ಹೆಜ್ಜೆ ಇಟ್ಟರು.

ಇದೇ ರೀತಿ ನೀರು ಹಿಡಿದು ಕಾಯುತ್ತಿದ್ದ ಇನ್ನೊಂದು ಮನೆಯ ಮುಂದೆ ಶಾಸಕರು ನಿಲ್ಲದೇ ಮುಂದೆ ಸಾಗಿದರು. ‘ವೋಟು ಕೇಳೋಕೆ ಮಾತ್ರ ಬರ್ತಾರೆ. ಕೆಲಸ ಮಾಡೋಕೆ ಆಗಲ್ಲ. ನೋಡಿದರೂ ನೋಡದೆ ಹೋಗುತ್ತಿದ್ದಾರೆ ನೋಡಿ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಕಾರ್ಯಕರ್ತರು ಸಮಾಧಾನಪಡಿಸಲು ಪ್ರಯತ್ನಿಸಿದರು.

ಕಾರ್ಯಕರ್ತರೊಂದಿಗೆ ಮಾತನಾಡಿದ ಶಾಸಕರು, ‘ಅವರು ಸರ್ಕಾರದ ಇಲಾಖೆಯಲ್ಲಿಯೇ ಕೆಲಸ ಮಾಡಿದ ವ್ಯಕ್ತಿ. ಅವರೇನು ಮಾಡಿದ್ದಾರೆ ಎಂದು ನಾವು ಕೇಳಬೇಕು. ಮಾತು ಎತ್ತಿದರೆ ಒರಟಾಗಿ ನಿಂದಿಸುತ್ತಾರೆ. ಅದಕ್ಕೆ ಆ ಮನೆ ಮುಂದೆ ನಿಲ್ಲಲಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಸಿಹಿಮುತ್ತಿಗೆ ನಾಚಿ ನೀರಾದ ಅಜ್ಜಿ!

ಪ್ರಚಾರ ಮಾಡುತ್ತಿದ್ದ ಕಾರ್ಯಕರ್ತರನ್ನು ಬಾಗಿಲಲ್ಲೇ ನಿಂತು ನೋಡುತ್ತಿದ್ದ ಅಜ್ಜಿಯನ್ನು ಅಪ್ಪಿಕೊಂಡ ಶಾಸಕರು ಸಿಹಿಮುತ್ತು ನೀಡಿ ಮತ ಕೇಳಿದರು. ಅನಿರೀಕ್ಷಿತವಾಗಿ ಸಿಕ್ಕ ಮುತ್ತಿಗೆ ನಾಚಿ ನೀರಾದ ಅಜ್ಜಿ, ತಲೆ ತಗ್ಗಿಸಿಕೊಂಡೇ, ‘ಖಂಡಿತಾ ಮತ ನೀಡುತ್ತೇನೆ’ ಎಂದು ಹೇಳಿ ಮನೆ ಒಳಗೆ ಸೇರಿಕೊಂಡರು.

‘ಪ್ರಚಾರದಿಂದ ಆರೋಗ್ಯ ವೃದ್ಧಿ’

ಚುನಾವಣೆ ಪ್ರಚಾರ ಮಾಡುವ ವೇಳೆ ಕೆಲವರು ಅನಾರೋಗ್ಯಕ್ಕೆ ಒಳಗಾದ ಸುದ್ದಿಗಳನ್ನು ಕೇಳಿದ್ದೇನೆ. ಆದರೆ, ನನಗೆ ಪ್ರಚಾರ ಆರಂಭಿಸಿದ ಮೇಲೆ ಆರೋಗ್ಯ ವೃದ್ಧಿಸಿದೆ. ಓಡಾಟ ಹೆಚ್ಚಾದರೆ ಒಳ್ಳೆಯದೇ ಅಲ್ವೇ?

ಬೆಳಿಗ್ಗೆ 6.30ಕ್ಕೆ ಏಳುತ್ತೇನೆ. 7.30ಕ್ಕೆ ಪ್ರಚಾರ ಆರಂಭಿಸಬೇಕಿತ್ತು. ಆದರೆ, ಮುಖಂಡರ ಜೊತೆ ಸಮಾಲೋಚನೆ ಮಾಡಬೇಕಾಗಿದ್ದ ಕಾರಣ ತಡ ಆಯಿತು. ನಾನು ನಡೆದುಕೊಂಡೇ ಎಲ್ಲಾ ಕಡೆ ಪ್ರಚಾರ ಮಾಡುತ್ತೇನೆ. ಯಾವುದೇ ವಾಹನ ಬಳಸಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.