ADVERTISEMENT

ಹೈಕೋರ್ಟ್‌ಗೆ ಆಯೋಗದ ಮರು ಮನವಿ

ಮೀಸಲು, ಕ್ಷೇತ್ರ ಮರುವಿಂಗಡಣೆ ಪಟ್ಟಿ ವಿಳಂಬ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಹೈಕೋರ್ಟ್‌ಗೆ ಆಯೋಗದ ಮರು ಮನವಿ
ಹೈಕೋರ್ಟ್‌ಗೆ ಆಯೋಗದ ಮರು ಮನವಿ   

ಬೆಂಗಳೂರು: ‘ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಪಟ್ಟಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಈ ದಿಸೆಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ತಕ್ಷಣ ನಿರ್ದೇಶನ ನೀಡಬೇಕು’ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಪುನಃ ಮನವಿ ಮಾಡಿದೆ.

ಈ ಕುರಿತಂತೆ ಆಯೋಗದ ಪರ ವಕೀಲರು ಸೋಮವಾರ ಮುಖ್ಯ‌ ನ್ಯಾಯಮೂರ್ತಿ ದಿನೇಶ್ ‌ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಮೌಖಿಕ ಮನವಿ ಮಾಡಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿದರು.

‘ಇದೇ ವರ್ಷದ ಸೆಪ್ಟೆಂಬರ್ ಹಾಗೂ 2019ರ ಫೆಬ್ರುವರಿ ಅಂತ್ಯದೊಳಗೆ ನಗರಸಭೆ, ಪಟ್ಟಣ ಪಂಚಾಯ್ತಿ, ಕಾರ್ಪೊರೇಷನ್ ಒಳಗೊಂಡಂತೆ 116 ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾಗಲಿದೆ. ಮುಂದಿನ ಚುನಾವಣೆಗೆ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಪರಿಷ್ಕೃತ ಪಟ್ಟಿಯನ್ನು ಆಯೋಗವು ಒಂದು ವರ್ಷಕ್ಕೂ ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಈ ಕುರಿತು ಆಯೋಗವು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಹಲವು ಬಾರಿ ಪತ್ರ ಬರೆದು ಕೋರಿಕೆ‌ ಸಲ್ಲಿಸಿದೆ’ ಎಂದು ಹೇಳಿದರು.

ADVERTISEMENT

‘ರಿಟ್‌ ಅರ್ಜಿ ಸಲ್ಲಿಕೆಯಾದ ನಂತರ ರಾಜ್ಯ ಸರ್ಕಾರ 2018ರ ಫೆಬ್ರುವರಿ 12ರಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಪಟ್ಟಿ ನೀಡುವುದಾಗಿ ತಿಳಿಸಿತ್ತು. ಆದರೆ ಈ ದಿಸೆಯಲ್ಲಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಯೋಗದಪರ ವಕೀಲರು ಅಕ್ಷೇಪಿಸಿದರು.

‘ನಿರ್ಧರಿತ ಸಮಯದಲ್ಲಿ ಚುನಾವಣೆ ನಡೆಸಬೇಕಿರುವುದು ಆಯೋಗದ ಕರ್ತವ್ಯ. ಒಂದು ವೇಳೆ ಚುನಾವಣೆ ನಡೆಸುವುದು ವಿಳಂಬವಾದರೆ,‌ ಅದು ಸಾಂವಿಧಾನಿಕ ಉಲ್ಲಂಘನೆಯಾಗಲಿದೆ. ಹೀಗಾಗಿ ಕೂಡಲೇ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ನಮಗೆ ಒದಗಿಸುವಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈಗಲೇ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತಂತೆ ನೀವು ಮಧ್ಯಂತರ ಅರ್ಜಿ ಸಲ್ಲಿಸಿ’ ಎಂದು ಆಯೋಗದ ಪರ ವಕೀಲರಿಗೆ ಸೂಚಿಸಿತು.

ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ 2013ರ ಮಾರ್ಚ್‌ನಲ್ಲಿ ಚುನಾವಣೆ ನಡೆದು, ಅದೇ ತಿಂಗಳ 11ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಅಧಿಕಾರವಧಿ ಐದು ವರ್ಷ.‌

‘ರಾಜ್ಯ ಸರ್ಕಾರ ಪಟ್ಟಿ ಬಿಡುಗಡೆಗೆ ವಿಳಂಬ ಮಾಡುತ್ತಿದೆ’ ಎಂದು ಆಕ್ಷೇಪಿಸಿ ಆಯೋಗವು 2018ರ ಫೆಬ್ರುವರಿ 5ರಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.