ADVERTISEMENT

17 ದಿನಗಳಲ್ಲಿ 25 ಸಾವಿರ ಪೋಸ್ಟರ್‌ ತೆರವು!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST

ಬೆಂಗಳೂರು: ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಪಾಟಿಕ್ ಸರ್ವೆಲೆನ್ಸ್ ಜಾಗೃತ ತಂಡಗಳು ಈವರೆಗೆ 25,642 ಪೋಸ್ಟರ್‌ಗಳು ಹಾಗೂ 10,254 ಬ್ಯಾನರ್‌ಗಳನ್ನು ತೆರವುಗೊಳಿಸಿವೆ.

‘ರಾಜ್ಯದಾದ್ಯಂತ ಸುಮಾರು 2,500 ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪೋಸ್ಟರ್, ಬ್ಯಾನರ್‌ ಮಾತ್ರವಲ್ಲದೆ 19,403 ಕಡೆ ಗೋಡೆ ಬರಹಗಳನ್ನೂ ಅಳಿಸಲಾಗಿದೆ. ‘ಕರ್ನಾಟಕ ಸಾರ್ವಜನಿಕ ಸ್ಥಳದ ರಕ್ಷಣೆ ಮತ್ತು ಅನಧಿಕೃತ ತೆರವು ಕಾಯ್ದೆ’ ಅಡಿ ಆರು ಪ್ರಕರಣಗಳು ದಾಖಲಾಗಿವೆ’ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

‘ಜಾಗೃತ ತಂಡಗಳ ಅಧಿಕಾರಿಗಳು ಹಾಗೂ ಪೊಲೀಸರು ನೀತಿ ಸಂಹಿತೆ ಜಾರಿಯಾದಾಗಿನಿಂದ (ಮಾರ್ಚ್ 27) ಇಲ್ಲಿಯವರೆಗೆ ₹ 22.34 ಕೋಟಿ ನಗದು, 7.5 ಕೆ.ಜಿ.ಚಿನ್ನ, 13.7 ಕೋಟಿ ಮೌಲ್ಯದ ಮದ್ಯ, 71 ವಾಹನಗಳು ಸೇರಿದಂತೆ ₹ 43 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ದಿನದ ಕಾರ್ಯಾಚರಣೆ: ಶನಿವಾರ ಒಂದೇ ದಿನ ರಾಜ್ಯದಲ್ಲಿ ₹ 9.03 ಕೋಟಿ ನಗದು, 200 ಗ್ರಾಂ ಚಿನ್ನ, 4.9 ಕೆ.ಜಿ ಬೆಳ್ಳಿ, 14 ವಾಹನಗಳು, ₹ 2 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಸಹ ವಿವಿಧೆಡೆ ಕಾರ್ಯಾಚರಣೆ ನಡೆಸಿ, 8,686 ಲೀಟರ್ ಐಎಂಎಲ್ ಹಾಗೂ ₹ 50 ಲಕ್ಷ ಮೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

**

92,494 ಶಸ್ತ್ರಾಸ್ತ್ರ ದಾಸ್ತಾನು

‘ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಂದ ಶಸ್ತ್ರಾಸ್ತ್ರಗಳನ್ನು ಸುಪರ್ದಿಗೆ ಪಡೆಯಲಾಗಿದೆ. ಸದ್ಯ 92,494 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದ್ದು, ಆ ಪೈಕಿ ಆರು ಮಂದಿಯ ಪರವಾನಗಿ ರದ್ದುಗೊಳಿಸಲಾಗಿದೆ. ಅ‍ಪರಾಧ ಹಿನ್ನೆಲೆವುಳ್ಳ 11,433 ಮಂದಿಯಿಂದ, ‘ಯಾವುದೇ ಅಪರಾಧ ಚಟುವಟಿಕೆ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.