ADVERTISEMENT

26 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 11 ಮೇ 2018, 20:20 IST
Last Updated 11 ಮೇ 2018, 20:20 IST
ವಿ.ಎಚ್‌.ಡಿ ಕೇಂದ್ರ ಗೃಹ ವಿಜ್ಞಾನ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಶುಕ್ರವಾರ ಗಸ್ತು ತಿರುಗಿದರು – ಪ್ರಜಾವಾಣಿ ಚಿತ್ರ
ವಿ.ಎಚ್‌.ಡಿ ಕೇಂದ್ರ ಗೃಹ ವಿಜ್ಞಾನ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಶುಕ್ರವಾರ ಗಸ್ತು ತಿರುಗಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಯನಗರ ಹಾಗೂ ರಾಜರಾಜೇಶ್ವರಿನಗರ ಹೊರತುಪಡಿಸಿ ನಗರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲೆಲ್ಲ ಬಿಗಿ ಭದ್ರತೆ ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಸಾಮಾನ್ಯವೆಂದು ವಿಂಗಡಿಸಿದ್ದೇವೆ. ಪ‍್ರತಿ 15ರಿಂದ 20 ಮತಗಟ್ಟೆಗಳನ್ನು ಒಂದು ವಲಯವಾಗಿ ಪರಿಗಣಿಸಿ, ಒಬ್ಬ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿದ್ದೇವೆ. ಅಂಥ ನಾಲ್ಕು ವಲಯಗಳ ಮೇಲ್ವಿಚಾರಣೆಯನ್ನು ಇನ್‌ಸ್ಪೆಕ್ಟರ್‌ ಮಾಡಲಿದ್ದಾರೆ’ ಎಂದರು.

‘ಮತಕ್ಷೇತ್ರಗಳ ಭದ್ರತೆಯ ಉಸ್ತುವಾರಿಯನ್ನು 18 ಡಿಸಿಪಿಗಳು, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು ವಹಿಸಿಕೊಂಡಿದ್ದಾರೆ. ಒಟ್ಟು 16,673 ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳುತ್ತಿ ದ್ದೇವೆ. ಯಾವುದಾದರೂ ಅವಘಢ ಸಂಭವಿಸಿದರೆ, ಆ ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ADVERTISEMENT

‘ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಮತಗಟ್ಟೆ ಬಳಿ ಮತದಾರರಿಗೆ ತೊಂದರೆ ಉಂಟು ಮಾಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ವಶಕ್ಕೆ ಪಡೆಯಲಿದ್ದೇವೆ’ ಎಂದರು.

7,518 ಶಸ್ತ್ರಾಸ್ತ್ರ ಠೇವಣಿ: ‘ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಇದುವರೆಗೂ 7,518 ಶಸ್ತ್ರಾಸ್ತ್ರಗಳನ್ನು ಠೇವಣಿ ಇಟ್ಟುಕೊಂಡಿದ್ದೇವೆ. 3,603 ಜನರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದೇವೆ’ ಎಂದು ಸುನೀಲ್‌ಕುಮಾರ್‌ ತಿಳಿಸಿದರು.

‘ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಧಕ್ಕೆ ತರುವ ಅನುಮಾನದಡಿ 3,473 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅದರಲ್ಲಿ 3,302 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದೇವೆ’ ಎಂದರು.

₹12.77 ಕೋಟಿ ನಗದು, 44 ಕೆ.ಜಿ ಚಿನ್ನ ಜಪ್ತಿ: ‘ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ 186 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ₹12.77 ಕೋಟಿ ನಗದು ಜಪ್ತಿ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

‘ಸೀರೆಗಳು, ಟೀ ಶರ್ಟ್‌ಗಳು, ಕ್ಯಾಪ್‌ಗಳು, ಕುಕ್ಕರ್‌, ನೀರಿನ ಕ್ಯಾನ್‌ಗಳು, ಮಿಕ್ಸಿ ಗ್ರೈಂಡರ್, 5 ಹೊಲಿಗೆ ಯಂತ್ರಗಳು ಹಾಗೂ 44 ಕೆ.ಜಿ ಚಿನ್ನದ ಆಭರಣ ಸೇರಿದಂತೆ  ₹19.10 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.