ADVERTISEMENT

ರಾಜಕೀಯ ದೇಣಿಗೆ ವ್ಯವಸ್ಥೆ ಸುಧಾರಣೆ: ಸಲಹೆಗಳಿಗೆ ಕೇಂದ್ರ ಆಹ್ವಾನ

ಪಿಟಿಐ
Published 8 ಫೆಬ್ರುವರಿ 2018, 8:59 IST
Last Updated 8 ಫೆಬ್ರುವರಿ 2018, 8:59 IST

ನವದೆಹಲಿ: ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿರುವ ದೇಣಿಗೆ ಮತ್ತು ಚುನಾವಣಾ ಖರ್ಚುವೆಚ್ಚಗಳಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರುವ ಸಂಬಂಧ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಮುಕ್ತವಾಗಿ ಸ್ವೀಕರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

ರಾಜಕೀಯ ಪಕ್ಷಗಳಿಗೆ ಗೋಪ್ಯವಾಗಿ ಹರಿದು ಬರುತ್ತಿರುವ ದೇಣಿಗೆ ಮತ್ತು ಚುನಾವಣಾ ವೆಚ್ಚಗಳಿಗೆ ಚುನಾವಣಾ ಬಾಂಡ್‌ ಯೋಜನೆಯಿಂದ ಕಡಿವಾಣ ಬೀಳಲಿದೆ. ಇದರ ಜತೆಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಸಾರ್ವಜನಿಕರು ಸೂಚಿಸಿದರೆ ಅಳವಡಿಸಿಕೊಳ್ಳಲು ಸಿದ್ಧ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಸಾರ್ವಜನಿಕರ ಎಲ್ಲ ಸಲಹೆ, ಸೂಚನೆಗಳನ್ನೂ ಸರ್ಕಾರ ಪರಿಗಣಿಸಲಿದೆ. ಸಾಧ್ಯವಾದಷ್ಟು ಅವು ವಾಸ್ತವಕ್ಕೆ ಹತ್ತಿರವಾಗಿರಲಿ’ ಎಂದು ಅವರು ಫೇಸ್‌ಬುಕ್‌ನಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ದಾನಿಗಳ ಹೆಸರನ್ನು ಗೋಪ್ಯವಾಗಿ ಇಡುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನು ಆಡಳಿತದಲ್ಲಿರುವ ಪಕ್ಷಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸಂದೇಹ ವ್ಯಕ್ತಪಡಿಸಿದೆ. ಈ ಆರೋಪವನ್ನು ಜೇಟ್ಲಿ ತಳ್ಳಿ ಹಾಕಿದ್ದಾರೆ.

ಚುನಾವಣಾ ಬಾಂಡ್ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಕಳೆದ ವಾರ ಅಧಿಸೂಚನೆ ಹೊರಡಿಸಿದೆ. ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ಬರುವ ದೇಣಿಗೆ ತಡೆಗಟ್ಟಲು ಪರಿಚಯಿಸಲಾಗುತ್ತಿರುವ ಪ್ರಸ್ತಾವಿತ ಬಾಂಡ್‌ಗಳು ವಾಯಿದೆ ಪತ್ರದ (ಸಾಲ ಪತ್ರ) ರೂಪದಲ್ಲಿ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.