ADVERTISEMENT

ಇವಿಎಂ ಮೇಲೆ ಅಭ್ಯರ್ಥಿ ಭಾವಚಿತ್ರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:05 IST
Last Updated 8 ಫೆಬ್ರುವರಿ 2018, 9:05 IST
ಇವಿಎಂ ಮೇಲೆ ಅಭ್ಯರ್ಥಿ ಭಾವಚಿತ್ರ
ಇವಿಎಂ ಮೇಲೆ ಅಭ್ಯರ್ಥಿ ಭಾವಚಿತ್ರ   

ಬೆಂಗಳೂರು: ಚುನಾವಣೆಗಳಲ್ಲಿ ಒಂದೇ ಹೆಸರಿನ ಹಲವರನ್ನು ಕಣಕ್ಕಿಳಿಸಿ ಮತದಾರರಲ್ಲಿ ಗೊಂದಲ ಮೂಡಿಸುವುದನ್ನು ತಡೆಯಲು ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಭಾವಚಿತ್ರಗಳನ್ನು ಮುದ್ರಿಸಲು ಆಯೋಗ ನಿರ್ಧರಿಸಿದೆ. ಈ ಪ್ರಯೋಗವನ್ನು ಈಗಾಗಲೇ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆಸಲಾಗಿದೆ.

‘ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಿಸುವುದರಿಂದ ಮತದಾರರಲ್ಲಿ ಗೊಂದಲ ಆಗುವುದಿಲ್ಲ. ಮತದಾರರ ಆತ್ಮವಿಶ್ವಾಸವೂ ಹೆಚ್ಚುತ್ತದೆ. ವಿದ್ಯುನ್ಮಾನ ಮತಯಂತ್ರದ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿದ್ದರಿಂದ ಚುನಾವಣಾ ಆಯೋಗ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ಪ್ರಯೋಗ ನಡೆಸಿತ್ತು’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಇವಿಎಂ ಮೇಲೆ ಅಭ್ಯರ್ಥಿಯ ಹೆಸರು, ಅವರ ಕಪ್ಪು–ಬಿಳುಪಿನ ಭಾವಚಿತ್ರ ಮತ್ತು ಪಕ್ಷದ ಚಿಹ್ನೆ ಇರುತ್ತದೆ. ಭಾವಚಿತ್ರದ ಗಾತ್ರ 2.5 ಸೆಂ.ಮೀ. ರಾಜ್ಯದಲ್ಲಿ ನಡೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಇವಿಎಂಗಳಲ್ಲಿ ಅಭ್ಯರ್ಥಿಗಳ ಚಿತ್ರವನ್ನು ಮುದ್ರಿಸಲಾಗಿತ್ತು.

‘ಇವಿಎಂಗಳಲ್ಲಿ ಕಪ್ಪು–ಬಿಳುಪಿನ ಚಿತ್ರಗಳ ಬದಲಿಗೆ ಅಭ್ಯರ್ಥಿಗಳ ಬಣ್ಣದ ಚಿತ್ರ ಬಳಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಇದರಿಂದ ಅಭ್ಯರ್ಥಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲಿಲ್ಲ. ಕಡಿಮೆ ವೆಚ್ಚದಲ್ಲಿ ಬಣ್ಣದ ಚಿತ್ರವನ್ನು ಬಳಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.

2013 ರ ಚುನಾವಣೆಯಲ್ಲಿ 2,948 ಅಭ್ಯರ್ಥಿಗಳ ಕಣದಲ್ಲಿದ್ದರು. ಪ್ರತಿ ಕ್ಷೇತ್ರದಲ್ಲಿ ಸರಾಸರಿ 13 ಅಭ್ಯರ್ಥಿಗಳ ಸ್ಪರ್ಧಿಸಿದ್ದರು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.