ADVERTISEMENT

‘ಭದ್ರತೆ ಕೊಟ್ಟರೆ ಸಿ.ಡಿ ಬಿಡುಗಡೆ’ : ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:57 IST
Last Updated 8 ಫೆಬ್ರುವರಿ 2018, 8:57 IST
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗೋಷ್ಠಿ ವೇಳೆ ಕಣ್ಣೀರಿಟ್ಟ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗೋಷ್ಠಿ ವೇಳೆ ಕಣ್ಣೀರಿಟ್ಟ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ   

ಬಾಗಲಕೋಟೆ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಕೇರಳದ ದೇವಸ್ಥಾನವೊಂದರಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಅದರ ಸಿ.ಡಿ ನನ್ನ ಬಳಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಭದ್ರತೆ ನೀಡಿದರೆ ಅದನ್ನು ಬಿಡುಗಡೆ ಮಾಡುವೆ’ ಎಂದು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಶನಿವಾರ ಇಲ್ಲಿ ತಿಳಿಸಿದರು.

‘ಈ ಹಿಂದೆ ಸಿ.ಡಿ ಬಿಡುಗಡೆ ಮಾಡಲು ಮುಂದಾಗಿದ್ದೆ. ಆಗ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆಗಿನಿಂದಲೂ ಶೋಭಾ ಅವರಿಂದ ನನಗೆ ಜೀವಭಯವಿದೆ. ಹೆದರಿಕೆಯಿಂದ ಕಳ್ಳನಂತೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ಕಾರಿನಿಂದ ಕೆಳಗೆ ಇಳಿದರೆ ಯಾರಾದರೂ ತೊಂದರೆ ಮಾಡಿಯಾರು ಎಂಬ ಆತಂಕ ಕಾಡುತ್ತದೆ. ನನಗೆ ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಕುಟುಂಬದ ಗತಿ ಏನು’ ಎಂದು ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡ ಪದ್ಮನಾಭ ಕಣ್ಣೀರಿಟ್ಟರು.

‘ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದೆ. ಅವರಿಂದ ಉತ್ತರವೇ ಬಂದಿಲ್ಲ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶೋಭಾ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ಶೀಘ್ರ ಹುಬ್ಬಳ್ಳಿಯಲ್ಲಿ ಮನೆ

‘ಇಲ್ಲಿನ ತೇರದಾಳ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ನಾನೇ ಕೆಜೆಪಿ ಅಭ್ಯರ್ಥಿ. ರಾಜ್ಯದ 224 ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಶೀಘ್ರವೇ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.