ADVERTISEMENT

ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಶೀಘ್ರ ಕಾಂಗ್ರೆಸ್‌ ಸೇರ್ಪಡೆ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:52 IST
Last Updated 8 ಫೆಬ್ರುವರಿ 2018, 8:52 IST
ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಪಕ್ಕದಲ್ಲೇ ಕುಳಿತುಕೊಂಡ ಕೂಡ್ಲಿಗಿ ಶಾಸಕ ನಾಗೇಂದ್ರ
ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಪಕ್ಕದಲ್ಲೇ ಕುಳಿತುಕೊಂಡ ಕೂಡ್ಲಿಗಿ ಶಾಸಕ ನಾಗೇಂದ್ರ   

ಹೊಸಪೇಟೆ: ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರು ಶುಭ ಮುಹೂರ್ತದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದೇ 10ರಂದು ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಇನ್ನೂ ಕೆಲವು ಹಾಲಿ, ಮಾಜಿ ಶಾಸಕರು ನಮ್ಮ ಪಕ್ಷಕ್ಕೆ ಸೇರಲಿದ್ದಾರೆ. ಜೆಡಿಎಸ್‌ನ ಏಳು ಬಂಡಾಯ ಶಾಸಕರು ಸೇರಿದಂತೆ ಯಾರಿಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಖಚಿತವಾಗಿಲ್ಲ. ಎಲ್ಲರೂ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರಿದ್ದಾರೆ. ಪಕ್ಷದ ಸಂಘಟನೆಗೆ ಅವರು ಶ್ರಮಿಸುವ ಭರವಸೆ ಇದೆ’ ಎಂದರು.

ADVERTISEMENT

‘ಆನಂದ್ ಸಿಂಗ್, ಬಿ.ನಾಗೇಂದ್ರ ಮೇಲೆ ಯಾವುದೇ ಗಂಭೀರವಾದ ಆರೋಪಗಳಿಲ್ಲ. ಈಗ ಕೇಳಿಬಂದಿರುವ ಆರೋಪಗಳು ಇವರೆಗೂ ಸಾಬೀತಾಗಿಲ್ಲ. ಸಂತೋಷ್ ಲಾಡ್, ನನ್ನ ಮೇಲೆಯೂ ಆರೋಪ ಇತ್ತು. ಆದರೆ, ಅವುಗಳು ಸಾಬೀತಾಗಲಿಲ್ಲ. ಹಾಗಾಗಿ ಮತ್ತೆ ನಮ್ಮನ್ನು ಸಚಿವರನ್ನಾಗಿ ಮಾಡಲಾಯಿತು. ಜತೆಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯನಗರ ಸಾಮ್ರಾಜ್ಯದ ನೆಲ ಜಾತ್ಯತೀತತೆಗೆ ಹೆಸರಾಗಿದೆ. ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವೂ ಹೌದು. ಹಾಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸಪೇಟೆಯಿಂದ ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶದೊಂದಿಗೆ ಪ್ರಚಾರ ನಡೆಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.