ADVERTISEMENT

₹ 1,227 ಕೋಟಿ ಕೇಂದ್ರದಿಂದ ಬಾಕಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST
₹ 1,227 ಕೋಟಿ ಕೇಂದ್ರದಿಂದ ಬಾಕಿ
₹ 1,227 ಕೋಟಿ ಕೇಂದ್ರದಿಂದ ಬಾಕಿ   

ಬೆಂಗಳೂರು: ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಗೆ (ನರೇಗಾ) ಕೇಂದ್ರದಿಂದ ₹ 1,227 ಕೋಟಿ ಬಾಕಿ ಬಿಡುಗಡೆ ಆಗಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ವಿಧಾನಪರಿಷತ್ತಿನಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ  ಬಸನಗೌಡ ಪಾಟೀಲ ಯತ್ನಾಳ್‌ ಪ್ರಶ್ನೆಗೆ ಉತ್ತರಿಸಿ, ಅನುದಾನ ಬಿಡುಗಡೆಗೆ ಕೋರಿ ಪ್ರಸ್ತಾವನೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದರು.

2017 ರಲ್ಲಿ ರಾಜ್ಯದಲ್ಲಿ ಬರಗಾಲವಿತ್ತು. ಹಣ ಪಾವತಿ ತೊಂದರೆ ಆಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವೇ 2015–16 ರಲ್ಲಿ ₹ 750 ಕೋಟಿ, 2016–17 ಸಾಲಿನಲ್ಲಿ ₹ 1,425 ಕೋಟಿ ಮುಂಗಡವಾಗಿ ಬಿಡುಗಡೆ ಮಾಡಿತ್ತು. ಈ ಹಣ ಕೇಂದ್ರದಿಂದ ಮರು ಪಾವತಿ ಆಗಿಲ್ಲ ಎಂದು ದೇಶಪಾಂಡೆ ಅವರು ತಿಳಿಸಿದರು.

ADVERTISEMENT

2015–16 ರಲ್ಲಿ ಕೇಂದ್ರ ಸರ್ಕಾರ ₹ 996.78 ಕೋಟಿ, ರಾಜ್ಯ ಸರ್ಕಾರ ₹ 781.64 ಕೋಟಿ, 2016–17 ರಲ್ಲಿ ಕೇಂದ್ರ ಸರ್ಕಾರ ₹ 2,140.08 ಕೋಟಿ ಮತ್ತು ರಾಜ್ಯ ಸರ್ಕಾರ ₹ 1,086.98 ಕೋಟಿ ಬಿಡುಗಡೆ ಮಾಡಲಾಗಿತ್ತು. ನರೇಗಾ ಯೋಜನೆಯಡಿ ಕೂಲಿ ಮತ್ತು ಸಾಮಗ್ರಿ ವೆಚ್ಚಗಳನ್ನು 60:40 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ ಎಂದರು.

2,435 ಅವ್ಯವಹಾರ ಪ್ರಕರಣ:  ಕಳೆದ ನಾಲ್ಕು ವರ್ಷಗಳಲ್ಲಿ 28 ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ 2,435 ಅವ್ಯವಹಾರ ಪ್ರಕರಣಗಳು ದಾಖಲಾಗಿವೆ ಎಂದು ದೇಶಪಾಂಡೆ ತಿಳಿಸಿದರು.

ಈ ಪ್ರಕರಣಗಳ ಕುರಿತು ಓಂಬುಡ್ಸ್‌ಮನ್‌, ಸಾಮಾಜಿಕ ಪರಿಶೋಧನೆ, ಗುಣ ನಿಯಂತ್ರಣ ಉಸ್ತುವಾರಿ, ಇಲಾಖಾ ಅಧಿಕಾರಿಗಳ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಇವುಗಳ ಪೈಕಿ 660 ಪ್ರಕರಣಗಳು ಸಾಬೀತಾಗಿವೆ. ಈವರೆಗೆ ₹ 186.31 ಲಕ್ಷ ವಸೂಲಿಯಾಗಿದ್ದು, 408 ಪ್ರಕರಣಗಳಲ್ಲಿ ವಸೂಲಿ ಬಾಕಿ ಇದೆ ಎಂದು ಹೇಳಿದರು.

ಇವುಗಳಲ್ಲಿ 32 ಪ್ರಕರಣಗಳಲ್ಲಿ ಕಾಮಗಾರಿ ನಡೆಸದೇ ಹಣ ಮಂಜೂರಾತಿ ಮಾಡಲಾಗಿದೆ. 164 ಪ್ರಕರಣಗಳಲ್ಲಿ ಕಾಮಗಾರಿ ಮೊತ್ತಕ್ಕಿಂತ ಹೆಚ್ಚು ಹಣ ಬಳಕೆಯಾಗಿದೆ ಎಂದು ಅವರು ಹೇಳಿದರು.

₹2 ಕೋಟಿ ಅಕ್ರಮ: ಕ್ರಮಕ್ಕೆ ಆದೇಶ

ಬೆಂಗಳೂರು: ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿದೆ ಎನ್ನಲಾದ ₹2 ಕೋಟಿ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

2016–17ರಲ್ಲಿ ಕ್ರಿಯಾ ಯೋಜನೆಯಲ್ಲಿ ಸೇರಿರದ 130 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ₹1.80 ಕೋಟಿ ಮೊತ್ತವನ್ನು ಬ್ಯಾಂಕಿನಿಂದ ಪಡೆದು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಅಕ್ರಮ ನಡೆಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹಾಗಿದ್ದರೂ ಕ್ರಮ ಜರುಗಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಟೀಕಿಸಿದರು.

‘ಕ್ರಿಯಾ ಯೋಜನೆ ಬಿಟ್ಟು ಕಾಮಗಾರಿ ನಡೆಸಿರುವುದು ಗಂಭೀರ ಪ್ರಕರಣ. ಪಂಚಾಯಿತಿಯ ಅಸಹಾಯಕತನದಿಂದಾಗಿ ಇದು ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ನಿಮಗೆ ಅನುಮಾನ ಬೇಡ’ ಎಂದು ಕಾಗೋಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.