ADVERTISEMENT

ಅಮಿತ್‌ ಶಾ ಒಬ್ಬ ಹೇಡಿ: ದಿನೇಶ್ ಗುಂಡೂರಾವ್

ಯುವ ಕಾಂಗ್ರೆಸ್‌ನ ‘ನನ್ನ ಕರ್ನಾಟಕ'ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:33 IST
Last Updated 9 ಫೆಬ್ರುವರಿ 2018, 20:33 IST
ದಿನೇಶ್ ಗುಂಡೂರಾವ್, ಯಡಿಯೂರಪ್ಪ
ದಿನೇಶ್ ಗುಂಡೂರಾವ್, ಯಡಿಯೂರಪ್ಪ   

ಬೆಂಗಳೂರು: ‘ವಿರೋಧ ಪಕ್ಷಗಳನ್ನು ಮಟ್ಟ ಹಾಕಲು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಾ ಒಬ್ಬ ಹೇಡಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಯುವ ಸಮೂಹವನ್ನು ಕಾಂಗ್ರೆಸ್‌ನತ್ತ ಸೆಳೆಯುವ ಉದ್ದೇಶದಿಂದ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ‘ನನ್ನ ಕರ್ನಾಟಕ’ ಹೆಸರಿನಲ್ಲಿ‌ ಹಮ್ಮಿಕೊಳ್ಳಲಿರುವ ಸಂವಾದ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ಕಾಂಗ್ರೆಸ್ ನಾಯಕರಿಗೆ ಹಿಂಸೆ ಕೊಡುವ ಹೀನಾಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶದ ಇತಿಹಾಸದಲ್ಲೇ ಇಂಥ ಹೇಡಿತನದ ಕೆಲಸ ಯಾರೂ ಮಾಡಿಲ್ಲ’ ಎಂದರು.

ADVERTISEMENT

‘ನನ್ನ ಕರ್ನಾಟಕ’ ಕಾರ್ಯಕ್ರಮದ ಮೂಲಕ ಯುವ ಪೀಳಿಗೆ ಬಯಸುವ ಭವಿಷ್ಯದ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು. ಪಕ್ಷದ ಯುವ ನಾಯಕರು ಈ ಕಾರ್ಯಕ್ರಮ ರೂಪಿಸಿದ್ದಾರೆ’ ಎಂದು ಅವರು ಹೇಳಿದರು.

ಸುಳ್ಳನ್ನೇ ನೂರು ಬಾರಿ ಹೇಳುತ್ತಾರೆ: ‘ಚುನಾವಣೆ ಕಾರಣಕ್ಕೆ ಮೋದಿಗೆ ಬಸವಣ್ಣ ನೆನಪಾಗಿದ್ದಾರೆ.‌ ಸುಳ್ಳು ಹೇಳಬೇಡಿ ಎಂದು ಬಸವಣ್ಣ ಹೇಳಿದ್ದಾರೆ. ಆದರೆ, ಮೋದಿ ಆದಿಯಾಗಿ ಬಿಜೆಪಿಯ ಎಲ್ಲ ನಾಯಕರು ಸುಳ್ಳನ್ನೇ ನೂರು ಬಾರಿ ಹೇಳುತ್ತಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

‘ನನ್ನ ತಂದೆ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಭವಿಷ್ಯ ನಿರ್ಧರಿಸುವವರು ಕ್ಷೇತ್ರದ ಮತದಾರರು. ಲೋಕಸಭೆಯಲ್ಲಿ ಖರ್ಗೆಯವರ ಕೊನೇ ಭಾಷಣ ಎಂದು ಹೇಳಲು ಮೋದಿ ಯಾರು’ ಎಂದೂ ಅವರು ಹರಿಹಾಯ್ದರು.

ಸಚಿವ ವಿನಯ ಕುಲಕರ್ಣಿ, ಶಾಸಕ ಪ್ರಿಯಾಕೃಷ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ ಇದ್ದರು.

**

ದಿನೇಶ್‌ ಅಯೋಗ್ಯ, ಮೂರ್ಖ: ಯಡಿಯೂರಪ್ಪ

‘ಅಮಿತ್ ಶಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ದಿನೇಶ್ ಗುಂಡೂರಾವ್‌ ಸಾರ್ವಜನಿಕ ಜೀವನದಲ್ಲಿ ತಾನು ಎಷ್ಟು ಅಯೋಗ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಶಾ ಬಗ್ಗೆ ನೀಡಿರುವ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ. ದಿನೇಶ್‌ರಂತಹ ಮೂರ್ಖ ಮುಖಂಡರನ್ನು ಹಿಂದೆ ಈ ರಾಜ್ಯ ಕಂಡಿರಲಿಲ್ಲ’ ಎಂದರು.

‘ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿ ಕೆಲಸ ಮಾಡುತ್ತದೆ. ಇದರ ಹಿಂದೆ ಕೈವಾಡ ಇರುವುದನ್ನು ಶಂಕಿಸುವುದು ಹೊಣೆಗೇಡಿತನ. ಜನಪ್ರತಿನಿಧಿಯಾಗಿರುವ ದಿನೇಶ್ ಜವಾಬ್ದಾರಿಯಿಂದ ವರ್ತಿಸುವುದನ್ನು ಬಿಟ್ಟು ಅಪ್ರಬುದ್ಧರಂತೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.