ADVERTISEMENT

‘ಕೀಪರ್ ನೋಡಿ ಮೋದಿ ಬ್ಯಾಟಿಂಗ್’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವ ಬಸವರಾಜ ರಾಯರಡ್ಡಿ ಇದ್ದಾರೆ. –ಪಿಟಿಐ ಚಿತ್ರ
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವ ಬಸವರಾಜ ರಾಯರಡ್ಡಿ ಇದ್ದಾರೆ. –ಪಿಟಿಐ ಚಿತ್ರ   

ಸಿಂಧನೂರು (ರಾಯಚೂರು ಜಿಲ್ಲೆ): ‘ಪ್ರಧಾನಿ ನರೇಂದ್ರ ಮೋದಿ ಅವರು ಬೌಲರ್‌ ನೋಡಿ ಬ್ಯಾಟಿಂಗ್ ಮಾಡುವ ಬದಲು ತಮ್ಮ ಹಿಂದೆ ಇರುವ ವಿಕೆಟ್ ಕೀಪರ್ ನೋಡಿ ಬ್ಯಾಟಿಂಗ್ ಮಾಡುತ್ತಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದರು.

‘ಸಚಿನ್ ತೆಂಡೂಲ್ಕರ್ ಅವರು ಇವರಂತೆ ಬ್ಯಾಟಿಂಗ್‌ ಮಾಡಿದ್ದರೆ ಅಷ್ಟು ಶತಕ ಬಾರಿಸಲು ಆಗುತ್ತಿರಲಿಲ್ಲ’ ಎಂದರು.

‘ಚೀನಾ ಸರ್ಕಾರ 24 ಗಂಟೆಗಳಲ್ಲಿ 50 ಸಾವಿರ ಉದ್ಯೋಗ ಸೃಷ್ಟಿ ಮಾಡಿದರೆ, ನಮ್ಮ ಪ್ರಧಾನಿ ಕೇವಲ 450 ಉದ್ಯೋಗ ಸೃಷ್ಟಿಸುತ್ತಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಮೋದಿ ಅವರೇ ಮಾತು ನಿಲ್ಲಿಸಿ: (ಕೊಪ್ಪಳ ವರದಿ) ‘ಪ್ರಧಾನಿ ಮೋದಿ ಅವರೇ, ನಿಮಗೆ ತುಂಬಾ ಕಡಿಮೆ ಸಮಯ ಇದೆ. ಮುಂದಿನ ವರ್ಷ ನಿಮ್ಮ ಐದು ವರ್ಷಗಳ ಸಾಧನೆಯನ್ನು ಜನರಿಗೆ ಹೇಳಬೇಕಿದೆ. ಭಾಷಣ ನಿಲ್ಲಿಸಿ. ಇನ್ನಾದರೂ ಕೆಲಸ ಮಾಡಿ’ ಎಂದು ರಾಹುಲ್ ಅವರು ಸಲಹೆ ನೀಡಿದರು.

ಕಾಯಕವೇ ಕೈಲಾಸ ಎಂಬ ಬಸವಣ್ಣನ ಮಾತನ್ನು ಉಲ್ಲೇಖಿಸಿದ ರಾಹುಲ್, ‘ಮೋದಿ ಅವರು ಬಸವಣ್ಣನ ಬಗ್ಗೆ ಮಾತನಾಡುತ್ತಾರೆ. ಆದರೆ ಕೆಲಸ ಮಾಡುವುದಿಲ್ಲ. ಬಸವಣ್ಣ ಹೇಳಿದ್ದನ್ನು ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ’ ಎಂದರು.

‘ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಮಾತನಾಡಿದಾಗ ಬಿಜೆಪಿಯವರು ಗೇಲಿ ಮಾಡಿದ್ದರು. ಆದರೆ ಇಂದು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಕರ್ನಾಟಕ ಇಡೀ ಜಗತ್ತಿನಲ್ಲಿ ಗುರುತಿಸಿಕೊಂಡು ತನ್ನ ಶಕ್ತಿ ಪರಿಚಯಿಸಿದೆ. ಇದಕ್ಕೆ ಶ್ರಮಿಸಿದ ಕರ್ನಾಟಕದವರಿಗೆ ಧನ್ಯವಾದ’ ಎಂದರು.

ಕಪ್ಪುಬಟ್ಟೆ ಪ್ರದರ್ಶನ: ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾನುವಾರ ಗಂಗಾವತಿಯ ಜುಲಾಯಿ ನಗರ ವೃತ್ತದ ಬಳಿ ಪ್ರತಿಭಟನಾಕಾರರು ಕಪ್ಪುಬಟ್ಟೆ ಪ್ರದರ್ಶಿಸಿದರು.

ರಾಹುಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆಯೇ ‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮೀಸಲಾತಿ ವರದಿ ಜಾರಿ ಹೋರಾಟ ಸಮಿತಿ’ಯವರು, ಮೀಸಲಾತಿ ವರದಿ ಜಾರಿಗೆ ಸರ್ಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಕಪ್ಪುಬಟ್ಟೆ ಪ್ರದರ್ಶನ ಮಾಡಿದರು. ಕಪ್ಪುಬಟ್ಟೆ ಪ್ರದರ್ಶಿಸಿದ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

ರಾಹುಲ್‌ ಅವರು ಯಲಬುರ್ಗಾ, ಬಂಡಿ ಕ್ರಾಸ್, ಕುಷ್ಟಗಿ, ತಾವರಗೇರಾ, ಕನಕಗಿರಿ, ಗಂಗಾವತಿಗಳಲ್ಲಿ ರೋಡ್ ಷೋ ನಡೆಸಿ, ಕಾರಟಗಿಯಲ್ಲಿ ಬಹಿರಂಗ ಸಭೆ ನಡೆಸಿದರು.

ಕನಕಾಚಲಪತಿಗೆ ಖಡ್ಗ ಅರ್ಪಣೆ

ಕಾರಟಗಿ ಸಮಾರಂಭದಲ್ಲಿ ಶಾಸಕ ಶಿವರಾಜ ತಂಗಡಗಿ ಅವರು ಉಡುಗೊರೆಯಾಗಿ ನೀಡಿದ ಬೆಳ್ಳಿ ಖಡ್ಗವನ್ನು ರಾಹುಲ್ ಅವರು ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಅರ್ಪಿಸಿದರು.

ಕನಕಾಚಲಪತಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಸುತ್ತು ಹಾಕಿದ ಅವರು ಒಂದೇ ಸ್ಥಳದಲ್ಲಿ ನಿಂತು ನೋಡಿದರೆ ಕಾಣುವ ಪಂಚ (ಐದು) ಕಳಸದ ಸ್ಥಳವನ್ನು ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದರು.

* ನಾವು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ. ಈ ವೇದಿಕೆಯಲ್ಲಿ ಹೇಳಿದ್ದನ್ನೇ ಮಾಡುತ್ತೇವೆ.

–ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.