ADVERTISEMENT

‘ರಾಯಣ್ಣ ಬ್ರಿಗೇಡ್‌’ ಮುಖಂಡನಿಗೆ ಕಾಂಗ್ರೆಸ್‌ ಗಾಳ?

ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರ * ಬಿಜೆಪಿ ಕೋಟೆಗೆ ಲಗ್ಗೆ ಹಾಕಲು ರಣತಂತ್ರ ಹೊಸೆದ ಆಡಳಿತ ಪಕ್ಷ

ಪ್ರವೀಣ ಕುಮಾರ್ ಪಿ.ವಿ.
Published 20 ಫೆಬ್ರುವರಿ 2018, 19:44 IST
Last Updated 20 ಫೆಬ್ರುವರಿ 2018, 19:44 IST
‘ರಾಯಣ್ಣ ಬ್ರಿಗೇಡ್‌’ ಮುಖಂಡನಿಗೆ ಕಾಂಗ್ರೆಸ್‌ ಗಾಳ?
‘ರಾಯಣ್ಣ ಬ್ರಿಗೇಡ್‌’ ಮುಖಂಡನಿಗೆ ಕಾಂಗ್ರೆಸ್‌ ಗಾಳ?   

ಬೆಂಗಳೂರು: ಬಿಜೆಪಿಯ ಭದ್ರಕೋಟೆ ಎನಿಸಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ‘ಪದ್ಮ’ ಅರಳದಂತೆ ಮಾಡಲು ಈ ಬಾರಿ ಕಾಂಗ್ರೆಸ್‌ ರಣತಂತ್ರ ಹೆಣೆಯುತ್ತಿದೆ. ಸತತ ಐದು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಕಮಲ ಪಾಳಯದ ಮುಖಂಡ ಆರ್‌.ಅಶೋಕ ವಿರುದ್ಧ, ಅವರ ಪಕ್ಷದ ರಾಜಕೀಯ ಪಟ್ಟುಗಳನ್ನು ಚೆನ್ನಾಗಿ ಬಲ್ಲ ಡಿ.ವೆಂಕಟೇಶಮೂರ್ತಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಚಿಂತನೆ ನಡೆದಿದೆ.

ಮಾಜಿ ಮೇಯರ್‌ ಕೂಡಾ ಆಗಿರುವ ವೆಂಕಟೇಶಮೂರ್ತಿ ರಾಯಣ್ಣ ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿ. ವರ್ಷದ ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ತೀವ್ರವಾಗಿದ್ದ ಸಂದರ್ಭದಲ್ಲಿ ಬ್ರಿಗೇಡ್‌ನ ಚಟುವಟಿಕೆಗಳು ರಾಜಕೀಯ ವಲಯದಲ್ಲಿ ಸದ್ದು ಮಾಡಿದ್ದವು. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಂಧಾನ ಮಾಡಿಸಿದ ಬಳಿಕ ಬ್ರಿಗೇಡ್‌ ಚಟುವಟಿಕೆ ನಿಲ್ಲಿಸಿತ್ತು. ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದ ಮೂರ್ತಿ ಪಕ್ಷದಲ್ಲಿ ಕ್ರಮೇಣ ಮೂಲೆಗುಂಪಾದರು.

ವೆಂಕಟೇಶಮೂರ್ತಿ 55ನೇ ವಾರ್ಡ್‌ನಲ್ಲಿ 1996ರಿಂದ 2001ರವರೆಗೆ ಪಾಲಿಕೆ ಸದಸ್ಯರಾಗಿದ್ದರು. ಈಗಿನ ಕುಮಾರಸ್ವಾಮಿ ಬಡಾವಣೆ, ಚಿಕ್ಕ ಕಲ್ಲಸಂದ್ರ, ಪದ್ಮನಾಭನಗರ, ಹೊಸಕೆರೆಹಳ್ಳಿ ವಾರ್ಡ್‌ಗಳು ಆಗ 55ನೇ ವಾರ್ಡ್‌ನಲ್ಲಿದ್ದವು. ನಂತರ ಶ್ರೀನಿವಾಸನಗರ ಹಾಗೂ ಕತ್ರಿಗುಪ್ಪೆ ವಾರ್ಡ್‌ಗಳಲ್ಲಿ ಕಾರ್ಪೊರೇಟರ್‌ ಆಗಿದ್ದರು. 2012ರಲ್ಲಿ ಮೇಯರ್‌ ಆದರು. 2013ರ ವಿಧಾನಸಭಾ ಚುನಾವಣೆಯಲ್ಲೇ ಅವರು ಪದ್ಮನಾಭನಗರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಅವರಿಗೆ ಶಾಂತಿನಗರ ಕ್ಷೇತ್ರದಲ್ಲಿ ಟಿಕೆಟ್‌ ನೀಡಿತ್ತು. ಅಲ್ಲಿ 10,920 ಮತ ಪಡೆದಿದ್ದ ಅವರು ಮೂರನೇ ಸ್ಥಾನ ಪಡೆದಿದ್ದರು.

ADVERTISEMENT

ಮೂರ್ತಿ ಬಿಜೆಪಿ ಸಖ್ಯ ತೊರೆದಿದ್ದಾರೆ. ರಾಜಕೀಯ ನೆಲೆಯನ್ನು ಗಟ್ಟಿಮಾಡಿಕೊಳ್ಳಲು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷರೂ ಆಗಿರುವ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ  ಒಪ್ಪಿದ್ದಾರೆ. ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ರಾಜ್ಯದ ಇತರ ಮುಖಂಡರಿಂದಲೂ ಹಸಿರು ನಿಶಾನೆಯೂ ಸಿಕ್ಕಿದೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ ಪ್ರಮುಖರೊಬ್ಬರು ತಿಳಿಸಿದರು.

‘ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚೆ ನಡೆದಿರುವುದು ನಿಜ’ ಎಂದು ಮೂರ್ತಿ ಒಪ್ಪಿಕೊಂಡರು.

‘ರಾಯಣ್ಣ ಬ್ರಿಗೇಡ್‌ ರಾಜಕೀಯ ಸಂಘಟನೆ ಅಲ್ಲ. ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ನಾನು ಕಾಂಗ್ರೆಸ್‌ ಸೇರಿದ ಬಳಿಕವೂ ಬ್ರಿಗೇಡ್‌ನ ಹುದ್ದೆಯಲ್ಲಿ ಮುಂದುವರಿಯುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ಈ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಅಶೋಕ ವಿರುದ್ಧ ಸೋತಿದ್ದ ಕಾಂಗ್ರೆಸ್‌ನ ಎಲ್‌.ಎಸ್‌.ಚೇತನ್‌ ಗೌಡ ಅವರ ತಂದೆ ಶಿವರಾಮಗೌಡ ಈಗ ಜೆಡಿಎಸ್‌ ಸೇರಿದ್ದಾರೆ. ಚೇತನ್‌ ಇನ್ನೂ ಕಾಂಗ್ರೆಸ್‌ನಲ್ಲಿದ್ದಾರೆ. ಈ ಬಾರಿ ಅವರೂ ಟಿಕೆಟ್‌ ಆಕಾಂಕ್ಷಿ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಗುರಪ್ಪ ನಾಯ್ಡು ಇನ್ನೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಆರ್‌. ಅಶೋಕ 2008ರಲ್ಲಿ ಜೆಡಿಎಸ್‌ನ ಎಂ.ವಿ.ಪ್ರಸಾದ್‌ಬಾಬು (ಕಬಡ್ಡಿ ಬಾಬು) ವಿರುದ್ಧ  32,276 ಮತಗಳ ಅಂತರದಿಂದ ಗೆದ್ದಿದ್ದರು. 2013ರಲ್ಲಿ ಕಾಂಗ್ರೆಸ್‌ನ ಎಲ್‌.ಎಸ್‌.ಚೇತನ್‌ ಗೌಡ ವಿರುದ್ಧ 20,123 ಮತಗಳಿಂದ ಜಯ ಗಳಿಸಿದ್ದರು.ಪುನರ್ವಿಂಗಡಣೆಗೆ ಮುನ್ನವೂ (ಆಗ ಈ ಕ್ಷೇತ್ರವು ಉತ್ತರಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಸೇರಿತ್ತು) ಮೂರು ಬಾರಿ ಗೆಲುವಿನ ನಗೆ ಬೀರಿದ್ದರು.

2015ರ ಬಿಬಿಎಂಪಿ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ಎಂಟು ವಾರ್ಡ್‌ಗಳ ಪೈಕಿ ಏಳರಲ್ಲಿ ಈ ಪಕ್ಷದ ಕಾರ್ಪೊರೇಟರ್‌ಗಳಿದ್ದಾರೆ.

‘ನಮ್ಮ ಶಾಸಕರು ಉತ್ತಮ ಅಭಿವೃದ್ಧಿ ಕಾರ್ಯ ಮಾಡಿಸಿದ್ದಾರೆ. ಪಕ್ಷದ ಸದಸ್ಯರು ಇರುವ ವಾರ್ಡ್‌ಗಳಲ್ಲೂ ಉತ್ತಮ ಕೆಲಸಗಳಾಗಿವೆ. ಹಾಗಾಗಿ ಬಿಜೆಪಿಯಿಂದ ಯಾರೇ ಇಲ್ಲಿ ಸ್ಪರ್ಧಿಸಿದರೂ ಗೆಲುವು ನಿಶ್ಚಿತ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಕುಮಾರಸ್ವಾಮಿ ಬಡಾವಣೆ ವಾರ್ಡ್‌ನ ಕಾರ್ಪೊರೇಟರ್‌ ಎಲ್‌.ಶ್ರೀನಿವಾಸ್‌.

2008ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಗೆ ನೇರ ಪೈಪೋಟಿ ಒಡ್ಡಿದ್ದು ಜೆಡಿಎಸ್‌. ಆದರೆ, ಕಳೆದ ಚುನಾವಣೆಯಲ್ಲಿ ಆ ಪಕ್ಷದ ಪ್ರಾಬಲ್ಯ ಕಡಿಮೆ ಆಗಿತ್ತು. ಪಕ್ಷದ ಅಭ್ಯರ್ಥಿ ಡಾ.ಎಂ.ಆರ್‌.ವಿ.ಪ್ರಸಾದ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಗುತ್ತಿಗೆದಾರರಾಗಿರುವ ಗೋಪಾಲ್‌ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದೆ. ಅವರು ವರ್ಷದ ಹಿಂದೆಯೇ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದರು.

ಈ ಕ್ಷೇತ್ರದಲ್ಲೂ ಸೀರೆ ಹಂಚುವುದು, ಮತದಾರರಿಗೆ ಕುಕ್ಕರ್‌ ಹಂಚುವ ಚಟುವಟಿಕೆಗಳು ಅಲ್ಲಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಕುಕ್ಕರ್‌ ದಾಸ್ತಾನು ಇಡಲಾಗಿದೆ ಎಂಬ ಶಂಕೆಯಿಂದ ಪಕ್ಷವೊಂದರ ಕಾರ್ಯಕರ್ತರು ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದರು. ಈ ಬಗ್ಗೆ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

***

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ

2013ರ ಚುನಾವಣೆಯ ಚಿತ್ರಣ

1.28 ಲಕ್ಷ – ಚಲಾಯಿತ ಮತಗಳು

15 – ಅಭ್ಯರ್ಥಿಗಳು ಕಣದಲ್ಲಿದ್ದರು

ಅಭ್ಯರ್ಥಿ, ಪಕ್ಷ, ಮತ, ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಆರ್‌.ಅಶೋಕ, ಬಿಜೆಪಿ, 53680   (41.82%)

ಎಲ್‌.ಎಸ್‌.ಚೇತನ್‌ ಗೌಡ (ಕಾಂಗ್ರೆಸ್‌) 33557 (26.14%)

ಡಾ.ಎಂ.ಆರ್‌.ವಿ.ಪ್ರಸಾದ್‌ (ಜೆಡಿಎಸ್‌) 26272 (20.47)

***

2008ರ ವಿಧಾನಸಭಾ ಚುನಾವಣೆಯ ಚಿತ್ರಣ

1.19 ಲಕ್ಷ – ಚಲಾಯಿತ ಮತಗಳು

18 – ಅಭ್ಯರ್ಥಿಗಳು ಕಣದಲ್ಲಿದ್ದರು

ಅಭ್ಯರ್ಥಿ, ಪಕ್ಷ, ಮತ, ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಆರ್‌.ಅಶೋಕ, ಬಿಜೆಪಿ, 61561, (51.87)

ಎಂ.ವಿ.ಪ್ರಸಾದ್‌ ಬಾಬು (ಕಬಡ್ಡಿ ಬಾಬು), ಜೆಡಿಎಸ್‌, 30285, (25.52)

ಡಾ.ಗುರಪ್ಪ ನಾಯ್ಡು, ಕಾಂಗ್ರೆಸ್‌, 22159, (18.67)

8 – ವಾರ್ಡ್‌ಗಳು ಈ ಕ್ಷೇತ್ರದಲ್ಲಿವೆ

7 – ವಾರ್ಡ್‌ಗಳ ಪಾಲಿಕೆ ಸದಸ್ಯರು ಬಿಜೆಪಿಯವರು

1 – ವಾರ್ಡ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಇದ್ದಾರೆ

***

ವಾರ್ಡ್‌ಗಳು: ಹೊಸಕೆರೆಹಳ್ಳಿ, ಗಣೇಶಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭನಗರ, ಚಿಕ್ಕ ಕಲ್ಲಸಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.