ADVERTISEMENT

ಪ್ರಜ್ವಲ್‌ ನಾಮಪತ್ರ ಸಲ್ಲಿಕೆ: ತಾತ, ಚಿಕ್ಕಪ್ಪ ಸಾಥ್‌

ದಳಪತಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಹಾಸನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 16:53 IST
Last Updated 22 ಮಾರ್ಚ್ 2019, 16:53 IST
ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್‌ ಶೋ ನಡೆಸಿದರು.
ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್‌ ಶೋ ನಡೆಸಿದರು.   

ಹಾಸನ: ರಾಜ್ಯದ ಗಮನ ಸೆಳೆದಿರುವ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರ ಬೆಂಬಲ, ಜೈಕಾರದೊಂದಿಗೆ ಮೈತ್ರಿಕೂಟದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು

ತಾತನ ಬದಲಿಗೆ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ , ನಗರದ ಎನ್.ಆರ್.ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರೆದ ವಾಹನದಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ಪೋಷಕರ ಅಣತಿಯಂತೆ ಮಧ್ಯಾಹ್ನ 12.36ಕ್ಕೆ ಉಮೇದುವಾರಿಕೆ ಸಲ್ಲಿಸಿದರು.

ಈ ವೇಳೆ ಚಿಕ್ಕಪ್ಪ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಂದೆ ಹಾಗೂ ಸಚಿವ ಎಚ್.ಡಿ.ರೇವಣ್ಣ, ತಾಯಿ ಭವಾನಿ, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಇದ್ದರು.

ADVERTISEMENT

ತಾತ ದೇವೇಗೌಡರು ಬೆಂಗಳೂರಿನಿಂದ ಬಂದರಾದರೂ, ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಲಿಲ್ಲ. ಮಧ್ಯಾಹ್ನ 2.30ಕ್ಕೆ ಮತ್ತೊಮ್ಮೆ ಗೌಡರು, ಪ್ರಜ್ವಲ್‌, ಅವರ ಸಹೋದರ ಸೂರಜ್‌, ಎಚ್‌.ಡಿ.ರೇವಣ್ಣ, ಅವರೊಂದಿಗೆ ಬಂದು ಮತ್ತೊಂದು ಸೆಟ್‌ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಹೊಳೆನರಸೀಪುರ ತಾಲ್ಲೂಕಿನ 5 ಕಡೆ ಟೆಂಪಲ್ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ರಾಘವೇಂದ್ರ ಮಠ, ಎದುರು ಮುಖ ಗಣಪತಿ ದೇವಾಲಯ, ಕುಲದೇವರು ಹರದನಹಳ್ಳಿ ಈಶ್ವರ ಮತ್ತು ಬೆಟ್ಟದ ರಂಗನಾಥಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ನಾಮಪತ್ರದೊಂದಿಗೆ ಅರ್ಚನೆ ಮಾಡಿಸಿ, ಮಹಾ ಮಂಗಳಾರತಿ ನೆರವೇರಿಸಿದರು.

ದೇವೇಗೌಡರ ತವರು ಜಿಲ್ಲೆ ಹಾಸನ, ಇಂದು ಅಕ್ಷರಶಃ ದಳಪತಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ತಮ್ಮ ಕುಟುಂಬದ ಮೂರನೇ ತಲೆಮಾರು ಪ್ರಜ್ವಲ್ ರೇವಣ್ಣ, ನಾಮಪತ್ರ ಸಲ್ಲಿಕೆ ವೇಳೆ ಹಾಜರಾದ ಜೆಡಿಎಸ್‌ನ ಹಲವು ನಾಯಕರು ಪ್ರಜ್ವಲ್ ಬೆಂಬಲಿಸಿ ಎಂದರಲ್ಲದೆ, ಕಮಲ ನಾಯಕರ ವಿರುದ್ಧ ರಣ ಕಹಳೆ ಮೊಳಗಿಸಿದರು. ಈ ವೇಳೆ ಕಾಂಗ್ರೆಸ್ ನ ಹಲವು ನಾಯಕರು ಹಾಜರಿದ್ದರು, ಮೈತ್ರಿಯಲ್ಲಿ ಒಗ್ಗಟ್ಟಿದೆ ಎಂಬುದನ್ನು ಮನದಟ್ಟು ಮಾಡಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಕುಮಾರಸ್ವಾಮಿ, ‘ಪ್ರಜ್ವಲ್‌, ನಿಖಿಲ್‌ ಈ ಇಬ್ಬರೂ ಶೋಕಿ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಭವಿಷ್ಯದ ರಾಜಕೀಯಕ್ಕೆ ಇಬ್ಬರೂ ಶಕ್ತಿಯಾಗಲಿದ್ದಾರೆ . ಕಳೆದ 60 ವರ್ಷಗಳಿಂದ ದೇವೇಗೌಡರ ಮೇಲೆ ತೋರಿದ ಪ್ರೀತಿಯನ್ನು ಪ್ರಜ್ವಲ್ ಮೇಲೂ ತೋರಿ. ನಿಮ್ಮ ಮನೆಯ ಮಗ ಎಂದು ತಿಳಿದು ಬೆಂಬಲಿಸಿ’ ಎಂದು ವಿನಂತಿ ಮಾಡಿದರು.

ಬಳಿಕ ತಾಲ್ಲೂಕು ಕಚೇರಿ ಎದುರಿನ ಹೊಸ ರಸ್ತೆಯಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ನ ಬೃಹತ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಮೂಡಲಹಿಪ್ಪೆಯಲ್ಲಿ ದೇವೇಗೌಡರು ಕಣ್ಣೀರಿಟ್ಟಾಗ ಲಘುವಾಗಿ ಮಾತನಾಡಿದವರು ಮಾನವೀಯತೆ ಇಲ್ಲದವರು’ ಎಂದು ಟೀಕಿಸಿದರು.

‘ಹಾಸನಾಂಬೆ ಆಣೆಗೂ ನಮ್ಮ ಕುಟುಂಬದವರು ಹಾಸನ ಜನರಿಗೆ ಮೋಸ ಮಾಡಿಲ್ಲ. ನರೇಂದ್ರ ಮೋದಿಗೆ ಮತ ಎನ್ನುತ್ತಿರುವ ಯುವಕ-ಯುವತಿಯನ್ನು ಪ್ರಧಾನಿ ಹಾಸನಕ್ಕೆ ಏನು ಕೊಡುಗೆ ನೀಡಿದ್ದಾರೆ ಅರ್ಥ ಮಾಡಿಕೊಳ್ಳಿ. ಈ ಜಿಲ್ಲೆಯ ಬಗ್ಗೆ ನಮ್ಮ ರಕ್ತದಲ್ಲೇ ವಿಶೇಷ ಅಭಿಮಾನ ಇದೆ. ನಿಮಗಾಗಿ ಜೀವನ ಮುಡುಪಾಗಿಟ್ಟಿದ್ದೇವೆ. ಏನು ತಪ್ಪು ಮಾಡಿದ್ದರೂ ಹೇಳಿ ತಿದ್ದುಕೊಳ್ಳುತ್ತೇವೆ. ಜಾತಿಯ ವಿಷ ಬೀಜ ಬಿತ್ತಿ, ಅಪಪ್ರಚಾರ ಮಾಡುವ ರಾಜಕೀಯಕ್ಕೆ ಬಲಿಯಾಗಬೇಡಿ. ರಾಜ್ಯದ 28 ಸ್ಥಾನಗಳನ್ನೂ ಗೆಲ್ಲಿಸಿಕೊಡಿ’ ಎಂದು ಮನವಿ ಮಾಡಿದರು.

ನಿಮ್ಮ ಮಡಿಲಿಗೆ ಮೊಮ್ಮಗ

‘ದೇವೇಗೌಡ ‌ಸ್ಪರ್ಧಿಸುವುದಾದರೆ ಹಾಸನದಲ್ಲೇ ನಿಲ್ಲಬೇಕಾಗಿತ್ತು ಎನಿಸಬಹುದು. ಆದರೆ, ನಾನು ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ. ನನ್ನ‌ ಮೊಮ್ಮಗನನ್ನು ನಿಲ್ಲಿಸಿದ್ದೀನಿ ಎನ್ನುವ ಭಾವನೆ ಬೇಡ. ನಿಮ್ಮ ಮಡಿಲಿಗೆ ಹಾಕಿರುವೆ. ಈ ರಾಜ್ಯದ ಸಾಮಾನ್ಯ ಮಗನಾಗಿ ನೋಡಿ ಆಶೀರ್ವಾದ ಮಾಡಿ. ದಾರಿ ತಪ್ಪಿದರೆ ಕಿವಿ ಹಿಂಡಿ ಬುದ್ಧಿ ಹೇಳುವ ಶಕ್ತಿ ಇದೆ’ ಎಂದುಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.

‘ಇದೇ ವೇಳೆ ನಿಖಿಲ್ ರಾಜಕೀಯ ಪ್ರವೇಶ, ಪುತ್ರ ವ್ಯಾಮೋಹದಿಂದ ಅಲ್ಲ. ತಂದೆಯ ಅನಾರೋಗ್ಯದಿಂದಾಗಿ ನೆರವಾಗಲು ನಿಖಿಲ್ ರಾಜಕೀಯಕ್ಕೆ ಬಂದಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್– ಜೆಡಿಎಸ್‍ ಪರಸ್ಪರ ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ, ಈಗ ದೈವದ ಇಚ್ಛೆಯಂತೆ ಕೋಮುವಾದಿ ಪಕ್ಷ ಜಿಲ್ಲೆಯಲ್ಲಿ ಬೇರೂರದಂತೆ ಎಲ್ಲರೂ ಒಟ್ಟಾಗಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.