ADVERTISEMENT

ಪ್ರಮುಖರ ಆಸ್ತಿ ವಿವರ: ಪ್ರಕಾಶ್ ರಾಜ್ ₹31 ಕೋಟಿ ಆಸ್ತಿ ಒಡೆಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:15 IST
Last Updated 22 ಮಾರ್ಚ್ 2019, 20:15 IST
   

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಚಿತ್ರನಟ ಪ್ರಕಾಶ್ ರಾಜ್ ₹26.59 ಕೋಟಿ ಸ್ಥಿರಾಸ್ತಿ ಮತ್ತು ₹4.93 ಕೋಟಿ ಚರಾಸ್ತಿ ಹೊಂದಿದ್ದು, ಕಳೆದ ವರ್ಷ ₹2.40 ಕೋಟಿ ಆದಾಯ ಸಂಪಾದಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅವರು ಈ ವಿವರ ನೀಡಿದ್ದಾರೆ.

₹25,000 ನಗದು, ತಮಿಳುನಾಡು, ತೆಲಂಗಾಣ, ಕರ್ನಾಟಕದ ವಿವಿಧ ಬ್ಯಾಂಕ್‌ ಹಾಗೂ ಖಾಸಗಿ ಹೂಡಿಕೆ ‌ಸೇರಿ ₹2.94 ಕೋಟಿ ಇದೆ.

ADVERTISEMENT

ಬಿಎಂಡಬ್ಲ್ಯೂ 520 ಡಿ, ಇಸುಜು ವಿ ಕ್ರಾಸ್, ಆಡಿ ಕ್ಯೂ–3, ಮರ್ಸಿಡಸ್‌ ಬೆಂಜ್‌,ಟಯೊಟ ಇನ್ನೋವಾ ಕಾರುಗಳು, ಬೊಲೆರೊ ಮ್ಯಾಕ್ಸಿ ಟ್ರಕ್, ಸ್ಕೂಟರ್ ಸೇರಿ ₹1.88 ಕೋಟಿ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ.

ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ₹5.59 ಕೋಟಿ ಮೌಲ್ಯದ 30 ಎಕರೆಗೂ ಹೆಚ್ಚು ಕೃಷಿ ಜಮೀನು, ಫಾರ್ಮ್‌ ಹೌಸ್‌, ₹5 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಅವರ ಬಳಿ ಇದೆ. ₹3.83 ಕೋಟಿ ಸಾಲ, ವ್ಯಾಜ್ಯದಲ್ಲಿರುವ ₹4.25 ಕೋಟಿ ಸಾಲ ಇದೆ ಎಂದು ವಿವರಿಸಿದ್ದಾರೆ.

ಇವರ ಪತ್ನಿ ರಶ್ಮಿ ವರ್ಮಾ, 20.46 ಲಕ್ಷ ಮೌಲ್ಯದ ಚರಾಸ್ತಿ ಮತ್ತು 35 ಲಕ್ಷ ಮೌಲ್ಯದ ಸ್ಥಿರಾಸ್ತಿ,18 ಲಕ್ಷ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅಕ್ರಮ ಕೂಟ ರಚಿಸಿಕೊಂಡ ಶಾಂತಿ ಭಂಗ ಉಂಟು ಮಾಡಿದ ಆರೋಪದಲ್ಲಿ ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿ.ಸಿ. ಮೋಹನ್ ಬಳಿ ₹36.4 ಕೋಟಿ ಆಸ್ತಿ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌, ₹17.28 ಕೋಟಿ ಸ್ಥಿರಾಸ್ತಿ ಮತ್ತು ₹18.76 ಕೋಟಿ ಚರಾಸ್ತಿ ಹೊಂದಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಈ ವಿವರ ಘೋಷಿಸಿಕೊಂಡಿದ್ದಾರೆ. ₹15.19 ಕೋಟಿ ಸಾಲ ಮತ್ತು ₹48.14 ಲಕ್ಷ ವ್ಯಾಜ್ಯದಲ್ಲಿರುವ ಸಾಲವನ್ನೂ ಹೊಂದಿದ್ದಾರೆ. ₹17.50 ಲಕ್ಷ ಮೌಲ್ಯದ 500 ‌ಗ್ರಾಂ ಚಿನ್ನ, ₹1.50 ಲಕ್ಷ ಮೌಲ್ಯದ ಮೂರು ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ತಮ್ಮ ಮತ್ತು ಪತ್ನಿ ಶೈಲಾ ಮೋಹನ್ ಹೆಸರಿನಲ್ಲಿ ವಾಣಿಜ್ಯ ಕಟ್ಟಡಗಳು, ವಾಸದ ಮನೆಗಳನ್ನೂ ಹೊಂದಿದ್ದಾರೆ.

ಶೈಲಾ ಮೋಹನ್ ಹೆಸರಿನಲ್ಲಿ ಒಟ್ಟು ₹5.54 ಲಕ್ಷ ಮೌಲ್ಯದ ಚರಾಸ್ತಿ ಮತ್ತು ₹18.06 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ₹16.05 ಕೋಟಿ ಸಾಲ ಮತ್ತು ₹35.29 ಕೋಟಿ ಸರ್ಕಾರಿ ವ್ಯಾಜ್ಯದಲ್ಲಿರುವ ಸಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.