ADVERTISEMENT

180 ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ನಿರ್ಧಾರ

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸ್ವೀಪ್ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 14:04 IST
Last Updated 29 ಮಾರ್ಚ್ 2019, 14:04 IST
ಯಾದಗಿರಿಯ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕಚೇರಿಯಲ್ಲಿ ಶುಕ್ರವಾರ ಸ್ವೀಪ್ ಸಮಿತಿ ಕಾರ್ಯಚಟುವಟಿಕೆಗಳ ಕುರಿತು ನಡೆದ ಪೂರ್ವಭಾವಿ ಸಭೆ ನಡೆಯಿತು
ಯಾದಗಿರಿಯ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕಚೇರಿಯಲ್ಲಿ ಶುಕ್ರವಾರ ಸ್ವೀಪ್ ಸಮಿತಿ ಕಾರ್ಯಚಟುವಟಿಕೆಗಳ ಕುರಿತು ನಡೆದ ಪೂರ್ವಭಾವಿ ಸಭೆ ನಡೆಯಿತು   

ಯಾದಗಿರಿ: ‘ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಎರಡನೇ ಹಂತದಲ್ಲಿ ಏಪ್ರಿಲ್ 7ರಿಂದ16ರವರೆಗೆ 180 ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕಚೇರಿಯಲ್ಲಿ ಶುಕ್ರವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಸ್ವೀಪ್ ಸಮಿತಿ ಕಾರ್ಯಚಟುವಟಿಕೆಗಳ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಈ ಮೊದಲು ನಡೆದ ಸಭೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 40 ಸೇರಿದಂತೆ ಒಟ್ಟು 160 ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಭಾರತ ಚುನಾವಣಾ ಆಯೋಗವು ಯಾವುದೇ ಸಮುದಾಯ ಅಥವಾ ಅರ್ಹ ಮತದಾರ ಮತದಾನದಿಂದ ವಂಚಿತ ಆಗಬಾರದು ಎಂಬ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಅಲೆಮಾರಿ ಜನವಸತಿಗಳಲ್ಲಿಯೂ ಸಹ 20 ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸಬೇಕು. ಪ್ರತಿ ಕಲಾ ತಂಡಕ್ಕೆ 30 ಕಾರ್ಯಕ್ರಮಗಳನ್ನು ಹಂಚಿಕೆ ಮಾಡಬೇಕು’ ಎಂದು ನಿರ್ದೇಶಿಸಿದರು.

ADVERTISEMENT

ಪ್ರಾರಂಭದಿಂದ ಇಲ್ಲಿಯವರೆಗೆ ಜರುಗಿದ ವಿವಿಧ ಸ್ವೀಪ್ ಚಟುವಟಿಕೆಗಳ ಕುರಿತು ಡಿಡಿಪಿಐ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಂದ ಮಾಹಿತಿ ಪಡೆದ ಉಪ ಕಾರ್ಯದರ್ಶಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ, ಮುಖ್ಯರಸ್ತೆಯಿಂದ ಒಳಗಿರುವ ಹಾಗೂ ಅಲೆಮಾರಿ ಜನಾಂಗದ ಪ್ರದೇಶಗಳಲ್ಲಿ ಸ್ವೀಪ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವ ಪಟ್ಟಿಗೆ ಅನುಮೋದನೆ ನೀಡಿದರು.

ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿಯೊಬ್ಬ ಮತದಾರರಿಗೆ ವೋಟರ್ ಸ್ಲಿಪ್ ತೆಗೆ ಮತದಾನ ಮಾಡುವಂತೆ ಮನವಿ ಮಾಡಲು 10 ಲಕ್ಷ ಮನವಿ ಪತ್ರಗಳನ್ನು ಮತ್ತು ಸಿ-ವಿಜಿಲ್ ಆಪ್ ಕುರಿತ 10 ಸಾವಿರ ಭಿತ್ತಿಪತ್ರಗಳನ್ನು ಮುದ್ರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಪ್ಯಾರಾ ಗ್ಲೈಡರ್ ಮೂಲಕ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮಾರ್ಚ್ 30ರಂದು ಬೆಳಿಗ್ಗೆ 8ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಜಿಲ್ಲಾಧಿಕಾರಿಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸುವರು. ಅದೇ ರೀತಿ ಗುರುಮಠಕಲ್, ಶಹಾಪುರ, ಸುರಪುರ ವಿಧಾನಸಭಾ ಮತಕ್ಷೇತ್ರಗಳಲ್ಲಿಯೂ ಕೂಡ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

‘ಬರಗಾಲ ಹಿನ್ನೆಲೆಯಲ್ಲಿ ಹೆಚ್ಚಿನ ಜನ ದೂರದ ನಗರಪ್ರದೇಶಗಳಿಗೆ ಕೆಲಸ ಅರಸಿ ವಲಸೆ ಹೋಗುತ್ತಾರೆ. ಹಾಗಾಗಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೌಂಟರ್‌ಗಳನ್ನು ತೆರೆದು ಜನರು ವಲಸೆ ಹೋಗುವುದನ್ನು ತಡೆಯಲು ಪ್ರಯತ್ನಿಸಬೇಕು. ಈ ಪ್ರಯುಕ್ತ ಏಪ್ರಿಲ್ 7ರಿಂದ 21ರವರೆಗೆ ಮತದಾನದ ಮಹತ್ವ ಕುರಿತ ಮುದ್ರಿತ ಕರಪತ್ರಗಳನ್ನು ನೀಡಿ, ಏಪ್ರಿಲ್ 23ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವೊಲಿಸಬೇಕು’ ಎಂದರು.

ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳಿಗಾಗಿ ಜಿಲ್ಲಾ ಚುನಾವಣಾ ರಾಯಭಾರಿಗಳಾಗಿ ನೇಮಕರಾದ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಅವರು ಜಿಲ್ಲೆಯಾದ್ಯಂತ ಹೋಬಳಿಗೊಂದರಂತೆ ಒಟ್ಟು 16 ಕಾರ್ಯಕ್ರಮಗಳನ್ನು ನೀಡುವರು. ಇದುವರೆಗೆ ಮಹಾಮನಿ ಅವರು ನಡೆಸಿಕೊಟ್ಟ 5 ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಅದರಂತೆ ಉಳಿದ 11 ಕಾರ್ಯಕ್ರಮಗಳು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಇದೇ ಕಾರ್ಯಕ್ರಮದ 2ನೇ ಸುತ್ತಿನಲ್ಲಿ ಏಪ್ರಿಲ್ 15ರಿಂದ 20ರವರೆಗೆ ನೂತನ ತಾಲ್ಲೂಕುಗಳು ಸೇರಿದಂತೆ 6 ತಾಲ್ಲೂಕುಗಳ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಅವರಿಗೆ ಸೂಚಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುತಿಸಿದ ವಸತಿಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ (ಬೀದಿನಾಟಕ,ಜಾನಪದ, ಗೀಗೀಪದ)ಗಳನ್ನು ಹಮ್ಮಿಕೊಂಡು ಮತದಾನದ ಮಹತ್ವ ಕುರಿತು ವಿಶೇಷ ವರ್ಗದ ಮತದಾರರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನಿರ್ದೇಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೈಶೈಲ್ ಬಿರಾದಾರ, ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರದ ಅಧಿಕಾರಿ ಸಿದ್ಧಾರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ, ವನಜಾಕ್ಷಿ ಬೆಂಡಿಗೇರಿ, ಟಿ.ಪಿ.ದೊಡ್ಡಮನಿ, ಲಾಲ್‌ಸಾಬ್, ಡಿ.ಕೆ.ರಾಜರತ್ನ, ವಿಷಯ ನಿರ್ವಾಹಕ ಶಿವಾನಂದ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.