ADVERTISEMENT

ಸಿದ್ದೇಶ್ವರ ಮುಖಕ್ಕೆ ಬೆಲೆ ಇಲ್ಲವೇ ?: ಡಿ. ಬಸವರಾಜ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 13:06 IST
Last Updated 7 ಏಪ್ರಿಲ್ 2019, 13:06 IST
ಡಿ. ಬಸವರಾಜ್‌
ಡಿ. ಬಸವರಾಜ್‌   

ದಾವಣಗೆರೆ: ಮೋದಿ ಮುಖ ನೋಡಿ ಮತ ನೀಡಿ ಎಂದು ಬಿಜೆಪಿ ಕೇಳುತ್ತಿದೆ. ಜಿ. ಎಂ. ಸಿದ್ದೇಶ್ವರರದ್ದು ಬೆಲೆ ಇಲ್ಲದ ಮುಖವೇ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಪ್ರಶ್ನಿಸಿದರು.

15 ವರ್ಷ ಸಂಸದರಾಗಿ ಯಾವುದೇ ಕೆಲಸ ಮಾಡದೇ ಕಾಲ ಹರಣ ಮಾಡಿದ್ದಾರೆ. ವಿಮಾನಯಾನ ಸಚಿವರಾಗಿ ಒಂದು ವಿಮಾನ ನಿಲ್ದಾಣ ತರಲಿಲ್ಲ. ಕೈಗಾರಿಕಾ ಸಚಿವರಾಗಿ ಒಂದುಇ ಕೈಗಾರಿಕೆ ತರಲಿಲ್ಲ. ಜವಳಿ ಕಾರ್ಖಾನೆಗಾಗಿ 150 ಎಕರೆ ಭೂಮಿ ಮೀಸಲಿಡಲಾಗಿತ್ತು. ಅದರಲ್ಲಿ 28 ಎಕರೆ ಭೂಮಿಯನ್ನು ಸಂಸದರು ತಮ್ಮ ಕುಟುಂಬದ ಟ್ರಸ್ಟ್‌ಗೆ ಮಾಡಿಸಿದರು. ಸ್ವಂತಕ್ಕಾಗಿ ಹಾಕಿದ ಶ್ರಮವನ್ನು ವಿಮಾನ ನಿಲ್ದಾಣ ತರಲು ಹಾಕಿದ್ದರೆ ಅದೂ ನಿರ್ಮಾಣಗೊಳ್ಳುತ್ತಿತ್ತು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳಲ್ಲಿ ಒಂದು ದಿನವೂ ಸುಸ್ಥಿರ ಆಡಳಿತ ನೀಡಲಿಲ್ಲ. ಜಾತ್ಯತೀತ ಪರಿಕಲ್ಪನೆಗೆ ಮಾರಕವಾಗಿದ್ದಾರೆ. ಸಂವಿಧಾನಕ್ಕೆ ರಕ್ಷಣೆ ಇಲ್ಲದಂತಾಗಿದೆ. ಸಂವಿಧಾನ ಬದಲಾಯಿಸುವುದಾಗಿ ಹೇಳಿದ ಕೇಂದ್ರ ಸಚಿವ ಅನಂತಕುಮಾರ್‌ಗೆ ಮತ್ತೆ ಟಿಕೆಟ್‌ ನೀಡಿ ಪ್ರಚೋದಿಸಿದ್ದಾರೆ. ಅಂಬೇಡ್ಕರ್‌ ಪ್ರತಿಮೆಗಳನ್ನು ಪುಡಿ ಮಾಡಬೇಕು ಎಂದು ಹೇಳಿರುವ ತೇಜಸ್ವಿ ಸೂರ್ಯನಿಗೆ ಟಿಕೆಟ್‌ ನೀಡಿದ್ದಾರೆ. ಆರ್‌ಎಸ್‌ಎಸ್‌ ಅಜೆಂಡಾಗಳನ್ನು ಜಾರಿ ಮಾಡುವುದೇ ಇವರ ಉದ್ದೇಶ ಎಂದು ಹೇಳಿದರು.

ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಇರುವ 16 ಲಕ್ಷ ಮತದಾರರಲ್ಲಿ 11 ಲಕ್ಷಕ್ಕೂ ಅಧಿಕ ಮತದಾರರು ಮೋದಿ ವಿರೋಧಿಗಳಾಗಿದ್ದಾರೆ. ಜೆಡಿಎಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷಗಳ ಬೆಂಬಲದಿಂದ ಕಾಂಗ್ರೆಸ್‌ಗೆ ಆನೆಬಲ ಬಂದಿದೆ. ಕಡುಬಡವರಿಗೆ ವರ್ಷಕ್ಕೆ ₹ 72 ಸಾವಿರ ಕನಿಷ್ಠ ಖಾತರಿ, ವರ್ಷಕ್ಕೆ 24 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಶೇ 33 ಮೀಸಲಾತಿ ಸಹಿತ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಿಂದಾಗಿ ಪಕ್ಷದ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಲಿಯಾಕತ್‌ ಅಲಿ, ಬಿ.ಎಚ್‌. ಉದಯಕುಮಾರ್‌, ಎ.ಅಬ್ದುಲ್‌ ಜಬ್ಬಾರ್‌, ಎಚ್‌. ಹರೀಶ್‌, ಖಾಜಿ ಖಲೀಲ್‌, ಡಿ. ಶಿವಕುಮಾರ್‌ ಇದ್ದರು.

‘₹ 50 ಕೋಟಿ ಡಂಪ್‌’

‘ಜಿ.ಎಂ. ಸಿದ್ದೇಶ್ವರ ಅವರು ₹ 50 ಕೋಟಿ ಅಲ್ಲಲ್ಲಿ ಡಂಪ್‌ ಮಾಡಿದ್ದು, ಮತದಾರರಿಗೆ ಹಂಚುತ್ತಿದ್ದಾರೆ ಎಂದು ಇಂದು ಬೆಳಿಗ್ಗೆ ವಾಯು ವಿಹಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿಯವರ ಮೇಲೆ ಐಟಿ, ಇಡಿ ರೈಡ್‌ಗಳು ಆಗುತ್ತಿಲ್ಲ. ಆಗಿದ್ದರೆ ಇದೆಲ್ಲ ಸಿಗುತ್ತಿತ್ತು’ ಎಂದು ಡಿ. ಬಸವರಾಜ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.