ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: ಯುಗಾದಿ ನಂತರ ಕಳೆಗಟ್ಟುವುದೇ ಪ್ರಚಾರದ ಭರಾಟೆ

ಕಾಂಗ್ರೆಸ್‌– ಬಿಜೆಪಿ ನಡುವೆ ಈವರೆಗೆ ಕಾಣಿಸದ ಜಿದ್ದಾಜಿದ್ದಿ

ಬಾಲಕೃಷ್ಣ ಪಿ.ಎಚ್‌
Published 7 ಏಪ್ರಿಲ್ 2019, 19:45 IST
Last Updated 7 ಏಪ್ರಿಲ್ 2019, 19:45 IST
ಜಿ.ಎಂ.ಸಿದ್ದೇಶ್ವರ
ಜಿ.ಎಂ.ಸಿದ್ದೇಶ್ವರ   

ದಾವಣಗೆರೆ: ಚುನಾವಣೆಗೆ ಎರಡೂವರೆ ವಾರವಷ್ಟೇ ಉಳಿದಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಇನ್ನೂ ಕಳೆಗಟ್ಟಿಲ್ಲ. ಭರ್ಜರಿ ಪ್ರಚಾರ ಸಭೆಗಳು ಕಾಣಸಿಕ್ಕಿಲ್ಲ.

ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪರ್ಧಿಸುವುದು ಮೊದಲೇ ಖಚಿತವಾಗಿತ್ತಾದರೂ ಎದುರಾಳಿ ಯಾರು ಎಂಬುದು ಗೊತ್ತಾಗದೇ ಇದ್ದಿದ್ದರಿಂದ ಬಿಜೆಪಿ ತನ್ನ ಪಾಡಿಗೆ ಜನರನ್ನು ಸಂಪರ್ಕಿಸುತ್ತಾ ಬಂದಿತ್ತೇ ಹೊರತರು ದೊಡ್ಡಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳಲಿಲ್ಲ. ಹಮ್ಮಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಲಿಲ್ಲ.

ಕಾಂಗ್ರೆಸ್‌ನಿಂದ ಈ ಬಾರಿ ಕಳೆದ ಹದಿನೈದು ದಿನಗಳಿಂದ ಚುನಾವಣೆ ಪ್ರಚಾರದ ಬದಲು ಅಭ್ಯರ್ಥಿ ಯಾರು ಎಂಬ ಚರ್ಚೆಯೇ ದೊಡ್ಡದಾಗಿ ನಡೆಯಿತು. ಯಾರನ್ನು ಅಭ್ಯರ್ಥಿಯನ್ನಾಗಿ ಇಳಿಸುವುದು ಎಂಬುದು ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಇರುವವರೆಗೂ ಗೊತ್ತಾಗದೇ ಇದ್ದಿದ್ದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದರು. ಈಗ ಎಚ್‌.ಬಿ. ಮಂಜಪ್ಪ ಅವರು ಅಭ್ಯರ್ಥಿಯಾಗಿದ್ದರೂ ಇನ್ನೂ ಪ್ರಚಾರದ ಹುರುಪು ಕಾಣಿಸಿಕೊಂಡಿಲ್ಲ.

ADVERTISEMENT

ಅಮಾವಾಸ್ಯೆ, ಯುಗಾದಿ ಹಬ್ಬ ಮುಗಿದ ಮೇಲೆ ಪ್ರಚಾರ ಆರಂಭಿಸಲಾಗುವುದು ಎಂದು ಪಕ್ಷದ ನಾಯಕರೇ ಹೇಳಿಕೊಂಡಿದ್ದಾರೆ. ಹಾಗಾಗಿ ಹಬ್ಬ ಮುಗಿದ ಮೇಲಾದರೂ ಪ್ರಚಾರ ಗರಿಗೆದರಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ.

ಕಣದಲ್ಲಿ 26 ಅಭ್ಯರ್ಥಿಗಳು ಸದ್ಯಕ್ಕಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಸೋಮವಾರದವರೆಗೆ ಅವಕಾಶ ಇರುವುದರಿಂದ ಕೆಲವರು ನಾಮಪತ್ರ ವಾಪಸ್‌ ಪಡೆಯಬಹುದು. ಕಣದಲ್ಲಿ ಎಷ್ಟೇ ಮಂದಿ ಉಳಿದರೂ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿ ನಡುವೆಯೇ ನೇರ ಸ್ಪರ್ಧೆ ಏರ್ಪಡಲಿದೆ ಎಂಬುದು ಜಗಜ್ಜಾಹೀರು.

ಹಾಗಾಗಿ 15 ವರ್ಷಗಳಿಂದ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ ಮತ್ತು ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಎಚ್‌.ಬಿ. ಮಂಜಪ್ಪ ಅವರೇ ಈ ಚುನಾವಣೆಯ ಕೇಂದ್ರಬಿಂದುಗಳಾಗಿದ್ದಾರೆ.

ಯುಗಾದಿ ಕಳೆದ ಮೇಲೆ ರಾಜ್ಯ, ರಾಷ್ಟಮಟ್ಟದ ನಾಯಕರು ಭಾಗಿಯಾಗುವ ಸಮಾವೇಶಗಳು, ಟೀಕೆ–ಪ್ರತಿಟೀಕೆಗಳು, ಜಿದ್ದಾಜಿದ್ದಿನ ಹೇಳಿಕೆಗಳು ಕಾಣಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.