ADVERTISEMENT

ಉಮೇದುವಾರಿಕೆ ಸಲ್ಲಿಕೆಗೆ ತೆರೆ; 27ರಂದು ನಾಮಪತ್ರ ಪರಿಶೀಲನೆ

ಹಿಂಪಡೆಯಲು 29ರಂದು ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 13:26 IST
Last Updated 26 ಮಾರ್ಚ್ 2019, 13:26 IST
ಹಾಸನ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಬಿಎಸ್‌ಪಿ ಅಭ್ಯರ್ಥಿ ಕೆ.ಎಚ್‌. ವಿನೋದ್ ರಾಜ್‌ ಮೆರವಣಿಗೆಯಲ್ಲಿ ಬಂದರು.
ಹಾಸನ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಬಿಎಸ್‌ಪಿ ಅಭ್ಯರ್ಥಿ ಕೆ.ಎಚ್‌. ವಿನೋದ್ ರಾಜ್‌ ಮೆರವಣಿಗೆಯಲ್ಲಿ ಬಂದರು.   

ಹಾಸನ : ಏ. 18ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮಂಗಳವಾರ ಮುಕ್ತಾಯವಾಗಿದೆ.

ಲೋಕಸಭೆ ಪ್ರವೇಶ ಬಯಸಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಲಿದೆ. ಚುನಾವಣಾ ಕಣದಿಂದ ಹಿಂದೆ ಸರಿಯಬೇಕೆಂಬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಮಾ.29ರೊಳಗೆ ವಾಪಸ್‌ ಪಡೆಯಬಹುದು.

ಹಾಸನ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯಾಗಿ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಕೆ.ಎಚ್‌. ವಿನೋದ್ ರಾಜ್‌ ಉಮೇದುವಾರಿಕೆ ಸಲ್ಲಿಸಿದರು.

ADVERTISEMENT

ಇದಕ್ಕೂ ಮೊದಲು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ತಮ್ಮ ತಾಯಿ ಕಾಮಾಕ್ಷಿ, ತಂದೆ ಹನುಮಂತ್ಯಯ್ಯ, ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ರಾಜ್ಯ ಘಟಕದ ಅಧ್ಯಕ್ಷ ಹರಿರಾಮ್‌, ರಾಜ್ಯ ಕಾರ್ಯದರ್ಶಿ ಗಂಗಾಧರ್‌ ಬಹುಜನ್‌, ಜಿಲ್ಲಾಧ್ಯಕ್ಷ ಹರೀಶ್‌, ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜ್‌ ಸಾಥ್‌ ನೀಡಿದರು.

ಕಡೆ ದಿನ ಆರು ಮಂದಿ ಉಮೇದುವಾರಿಕೆ ಸಲ್ಲಿಸಿದರು. ಪಕ್ಷೇತರರಾಗಿ ರಾಮನಾಥಪುರ ಹೋಬಳಿಯ ವಡ್ಡರಳ್ಳಿಯ ಕೆಂಪಯ್ಯ, ಸಾಲಗಾಮೆ ಹೋಬಳಿಯ ರಾಮದೇವರಪುರದ ಆರ್.ಜಿ.ಸತೀಶ್, ಅರಕಲಗೂಡು ತಾಲ್ಲೂಕಿನ ಹೊನ್ನಾವರ ಗ್ರಾಮದ ಬಿ.ಪಿ ಕಾಳಪ್ಪ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಂ. ಮಹೇಶ್ ನಾಮಪತ್ರ ಸಲ್ಲಿಸಿದರು.

ಅಲ್ಲದೇ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ.ಮಂಜು ಅವರ ಪರವಾಗಿ ಸೂಚಕರಾದ ಸಲೀಂ ಅಹಮ್ಮದ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು ಹತ್ತು ಅಭ್ಯರ್ಥಿಗಳು 18 ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.