ADVERTISEMENT

ಸೂಪರ್ ಮಾರುಕಟ್ಟೆ ಅಭಿವೃದ್ಧಿಯೇ ಧ್ಯೆಯ: ವಿನಯ ಕುಲಕರ್ಣಿ ಭರವಸೆ

ಮಾರುಕಟ್ಟೆ ಪ್ರದೇಶದಲ್ಲಿ ಓಡಾಡಾಟ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 13:34 IST
Last Updated 9 ಏಪ್ರಿಲ್ 2019, 13:34 IST
ಧಾರವಾಡದ ತರಕಾರಿ ಮಾರುಕಟ್ಟೆಯಲ್ಲಿ ಮಂಗಳವಾರ ಓಡಾಡಿದ ವಿನಯ ಕುಲಕರ್ಣಿ ಮತಯಾಚಿಸಿದರು
ಧಾರವಾಡದ ತರಕಾರಿ ಮಾರುಕಟ್ಟೆಯಲ್ಲಿ ಮಂಗಳವಾರ ಓಡಾಡಿದ ವಿನಯ ಕುಲಕರ್ಣಿ ಮತಯಾಚಿಸಿದರು   

ಧಾರವಾಡ: ‘ಸೂಪರ್ ಮಾರುಕಟ್ಟೆ ಅಭಿವೃದ್ಧಿಗೊಳಿಸಿ, ಅದೇ ಜಾಗದಲ್ಲಿ ಅತ್ಯಾಧುನಿಕ ಸೌಕರ್ಯ ಒಳಗೊಂಡ ಮಾರುಕಟ್ಟೆ ನಿರ್ಮಾಣ ಮಾಡುವುದು, ಬಡ ವ್ಯಪಾರಿಗಳಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೌಕರ್ಯ ಒದಗಿಸಿಕೊಡುವುದು ನನ್ನ ಧ್ಯೇಯ’ ಎಂದುಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಭರವಸೆ ನೀಡಿದರು.

ಸುಭಾಸ ರಸ್ತೆ, ತರಕಾರಿ ಮಾರುಕಟ್ಟೆ, ಹೂವಿನಂಗಡಿ ಸಾಲು, ಜವಳಿ ಸಾಲು, ಅಕ್ಕಿಪೇಟೆ ಭಾಗದಲ್ಲಿ ಮಂಗಳವಾರ ರೋಡ್‌ಶೋ ನಡೆಸಿ ಮತಯಾಚಿಸಿದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.‌

‘ಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನನ್ನು ಚುನಾಯಿಸುವ ಮೂಲಕ ಬಡವರ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಕೇಂದ್ರದಲ್ಲಿನ ಸರ್ವಾಧಿಕಾರಿ ಮೋದಿ ಸರ್ಕಾರ ಕಿತ್ತೊಗೆದರೆ ಬಡವರಿಗೆ ಬದುಕಲು ಸಾಧ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ ₹72 ಸಾವಿರ ರುಪಾಯಿ ನೀಡಲಾಗುವುದು. ಇದರಿಂದ ಅವರ ಬಡತನ ನಿಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಈ ಬಾರಿಯ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಮನವಿ ಮಾಡಿಕೊಂಡರು.

ADVERTISEMENT

‘ಧಾರವಾಡದಲ್ಲಿ ಲಿಂಗಾಯತ ಸಮಾಜದಲ್ಲಿನ ಪ್ರಬಲ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುವ ಕೆಲಸವನ್ನು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾಡಿಕೊಂಡೇ ಬಂದಿದ್ದಾರೆ. ಇದು ಆ ಪಕ್ಷದವರಿಗೂ ತಿಳಿದಿರುವ ಸಂಗತಿ. ನನ್ನ ಮೇಲೆ ಎಷ್ಟೇ ಆರೋಪಗಳು ಬಂದರು, ಜನರಿಗಾಗಿ ನನ್ನ ಕೆಲಸವನ್ನು ದ್ವಿಗುಣಗೊಳಿಸುತ್ತಲೇ ಹೋಗುತ್ತೇನೆ’ ಎಂದು

‘ಪ್ರತಿ ಚುನಾವಣೆ ಸಂದರ್ಭದಲ್ಲೂ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಕೊಂಡೇ ಬರುತ್ತಿದ್ದಾರೆ.ಯೋಗೀಶಗೌಡ ಕೊಲೆ ಪ್ರಕರಣದಲ್ಲಿದ್ದ 62 ಸಾಕ್ಷಿಗಳಲ್ಲಿ 59 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಆದರೆ ಚುನಾವಣೆ ಸಂದರ್ಭದವರೆಗೂ ಸುಮ್ಮನಿದ್ದ ಇವರು ಈಗ ಪ್ರಕರಣ ದಾಖಲಿಸಿದ್ದಾರೆ. ಪ್ರಹ್ಲಾದ ಜೋಶಿ ಎಡಬಲದಲ್ಲಿ ಕಾಣಿಸಿಕೊಳ್ಳುವ ಗುರುನಾಥಗೌಡ ಅವರನ್ನು ಮುಂದಿಟ್ಟುಕೊಂಡು ಇವರು ಇಂಥ ಕೆಲಸಗಳನ್ನು ಮಾಡುತ್ತಿದ್ದಾರೆ. ಇದು ಕ್ಷೇತ್ರದ ಜನರಿಗೂ ಅರ್ಥವಾಗಿದೆ’ ಎಂದರು.

‘ನನ್ನನ್ನು ಜಾತಿ ಒಡೆದವ ಎಂದು ಪ್ರಚಾರ ಮಾಡುತ್ತಾರೆ. ತಮ್ಮ ಲಾಭಕ್ಕಾಗಿ ನಮ್ಮ ನಮ್ಮ ನಡುವೆ ತಂದಿಟ್ಟು ಮನೆ ಒಡೆಯುವವರು ಇವರು. ಇವರನ್ನು ಮನೆಯೊಳಗೆ ಬಿಟ್ಟುಕೊಂಡರೆ ಕುಟುಂಬವನ್ನೇ ಒಡೆಯುವ ಕೆಲಸ ಮಾಡುತ್ತಾರೆ’ ಎಂದು ಪ್ರಹ್ಲಾದ ಜೋಶಿ ವಿರುದ್ಧ ಆರೋಪ ಮಾಡಿದರು.

‘ರಫೆಲ್ ಹಗರಣಕ್ಕೆ ಸಂಬಂಧಿಸಿದ ರಕ್ಷಣಾ ಇಲಾಖೆ ದಾಖಲೆ ಎಲ್ಲಿ ಹೋಯಿತು ಎನ್ನುವುದು ಗೊತ್ತಿಲ್ಲ. ಚೌಕಿದಾರ್ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರು ದಾಖಲೆ ಕಳುವಾಗುವಾಗ ಎಲ್ಲಿದ್ದರು. ಸಂಸತ್ತಿನಲ್ಲಿರುವ ದಾಖಲೆಗಳೇ ಕಳೆಯುತ್ತವೆ ಎಂದರೆ ಇನ್ನು ದೇಶವನ್ನು ಕಾಯುವವರು ಯಾರು? ಇದನ್ನು ಮೂರುಬಾರಿ ಸಂಸದರಾಗಿದ್ದ ಪ್ರಹ್ಲಾದ ಜೋಶಿ ಅವರೇ ಹೇಳಬೇಕು’ ಎಂದರು.

‘ಜಾತ್ರೆ ಕಾರ್ಯಕ್ರಮಗಳಿಗೆ ಹೋಗಿದ್ದಾಗ ರಂಭಾಪುರಿ ಸ್ವಾಮೀಜಿಗಳನ್ನು ಭೇಟಿ ಮಾಡಿದೆ. ನನ್ನ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಜನರೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಯಾವುದನ್ನೂ ಬಯಸದೆ ಜನ ಹಗಲಿರುಳು ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಜಯ ನಿಶ್ಚಿತ’ ಎಂದು ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇಸ್ಮಾಯಿಲ್ ತಮಟಗಾರ,ಪ್ರಕಾಶ್ ಘಾಟ್ಗೆ, ರಾಬರ್ಟ್ ದದ್ದಾಪುರಿ, ಬಸವರಾಜ ಮಲಕಾರಿ, ಸತೀಶ ತುರಮರಿ, ಪ್ರತಾಪ ಚೌಹಾಣ್, ಶಿವಶಂಕರ ಹಂಪಣ್ಣವರ, ವಸಂತ ಅರ್ಕಾಚಾರ, ಶ್ರೀಧರ ಶೇಟ್, ಪ್ರದೀಪ ಪಾಟೀಲ, ಮೆಹಬೂಬ್ ಮುಲ್ಲಾ, ಯಾಸೀನ್ ಹಾವೇರಪೇಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.