ADVERTISEMENT

ಭಾವಲೋಕದಲ್ಲಿ ಕ್ರೌರ್ಯದ ಕಥನ

ವಿಶಾಖ ಎನ್.
Published 25 ಜನವರಿ 2017, 19:30 IST
Last Updated 25 ಜನವರಿ 2017, 19:30 IST
ಭಾವಲೋಕದಲ್ಲಿ ಕ್ರೌರ್ಯದ ಕಥನ
ಭಾವಲೋಕದಲ್ಲಿ ಕ್ರೌರ್ಯದ ಕಥನ   

ಕಾಬಿಲ್ (ಹಿಂದಿ)

ನಿರ್ಮಾಪಕ:ರಾಕೇಶ್ ರೋಷನ್
ನಿರ್ದೇಶಕ: ಸಂಜಯ್ ಗುಪ್ತ
ತಾರಾಗಣ: ಹೃತಿಕ್ ರೋಷನ್, ಯಾಮಿ ಗೌತಮ್‌, ರೋನಿತ್ ರಾಯ್, ರೋಹಿತ್ ರಾಯ್, ನರೇಂದ್ರ ಝಾ.

ಜಿಗಿತ ಬಯಸದೆ ಇರುವ ಮಾದರಿಯಲ್ಲೇ ರಂಜನೆಯ ಹುಡುಕಾಟ ನಡೆಸುವ ಚಿತ್ರಕರ್ಮಿಗಳಿದ್ದಾರೆ. ಸುರಕ್ಷಿತವೂ ಇದ್ದುದರಲ್ಲೇ ಕೊಂಚ ಭಿನ್ನವೂ ಆದ ಅಂಥವರ ನಿಲುವಿಗೆ ಉದಾಹರಣೆ 'ಕಾಬಿಲ್'.

1989ರಲ್ಲಿ ತೆರೆಕಂಡಿದ್ದ ಇಂಗ್ಲಿಷ್ ಚಿತ್ರ 'ಬ್ಲೈಂಡ್ ಫ್ಯೂರಿ' ಹಾಗೂ ಎರಡು ವರ್ಷಗಳ ಹಿಂದಿನ ಕೊರಿಯಾ ಸಿನಿಮಾ 'ಬ್ರೋಕನ್'ನ ಸ್ಫೂರ್ತಿ ಢಾಳಾಗಿ ಇರುವ 'ಕಾಬಿಲ್'ಗೆ ಮಹತ್ವಾಂಕಾಂಕ್ಷೆ ಇಲ್ಲ. ಸರಳ ಮನರಂಜನೆಯಾಗಿ ಅದು ನೋಡಿಸಿಕೊಳ್ಳುತ್ತದಷ್ಟೆ.

ಚಿತ್ರದ ನಿರೂಪಣೆಯಲ್ಲಿಯೂ ವೃಥಾ ಕಸರತ್ತುಗಳಿಲ್ಲ. ಅಂಧರಿಬ್ಬರು ಬಾಳಸಂಗಾತಿಗಳಾಗುವ, ಅವರ ಸುಂದರ ಕನವರಿಕೆಗಳ ನವಿರಾದ ಲೋಕ ಕಣ್ಣಲ್ಲಿ ನೀರು ಜಿನುಗಿಸುವಂತೆ ಮಾಡುವುದರಿಂದ ಸಿನಿಮಾ ಶುರುವಾಗುತ್ತದೆ. ಬಲು ಬೇಗ ನಾಯಕಿಯ ಮೇಲೆ ಅತ್ಯಾಚಾರ ನಡೆಯುವ ಮೂಲಕ ಕ್ರೌರ್ಯದ ಮಗ್ಗಲಿಗೆ ತಿರುಗುವ ಕಥಾನಕ ಆಮೇಲೆ ಕಟ್ಟುಬೀಳುವುದು ಸೇಡಿನ ಸೂತ್ರಕ್ಕೆ.

ಅಂಧ ನಾಯಕ ಸಾಕ್ಷಿಗಳನ್ನೇ ಉಳಿಸದೆ ಕ್ರೂರಿಗಳ ಪ್ರಾಣಾಪೋಷನ ತೆಗೆದುಕೊಳ್ಳುವ ಕಥೆಯಲ್ಲಿ ಕ್ರೀಡೆ ಕೊಡುವಂಥ ಕುತೂಹಲವಿದೆ.
ಸಿನಿಮಾದ ಇನ್ನೊಂದು ಗುಣಾತ್ಮಕ ಅಂಶ ಸಂಯಮ. ಬುದ್ಧಿವಂತಿಕೆಯ ದೃಶ್ಯಗಳನ್ನು ಉತ್ಪ್ರೇಕ್ಷೆ ಇಲ್ಲದೆ ತೋರಿರುವುದನ್ನು ನಿರ್ದೇಶಕರ ಜಾಣ್ಮೆ ಎಂದೇ ಭಾವಿಸಬೇಕು.

ಹೃತಿಕ್ ರೋಷನ್ ಅವರದ್ದು ಹೃದ್ಯ ಅಭಿನಯ. ಕುರುಡನಾಗಿ ಭಾವ ತುಳುಕಿಸುವುದು ತಮಾಷೆಯಲ್ಲ. ಅವರ ನೃತ್ಯ ಲಾಲಿತ್ಯ ಪೋಷಿಸಿರುವ ರೀತಿಯೂ ಮೆಚ್ಚುಗೆಗೆ ಅರ್ಹ. ಯಾಮಿ ಗೌತಮ್‌ ಕೂಡ ಅಭಿನಯ ಪಾಠ ಕಲಿತಿರುವುದು ಒಳ್ಳೆಯ ಬೆಳವಣಿಗೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನರೇಂದ್ರ ಝಾ ಇಷ್ಟವಾಗುತ್ತಾರೆ. ರೋನಿತ್ ರಾಯ್ ಅತಿ ತಣ್ಣಗೆ ನಟಿಸಲು ಹೋಗಿರುವುದು ಫಲ ನೀಡಿಲ್ಲ.

ಸಂದೀಪ್ ಚಟರ್ಜಿ, ಅಯಾಂಕಾ ಬೋಸ್ ಹೆಚ್ಚು ‘ಕ್ಲೋಸಪ್ ಶಾಟ್ಸ್’ ಸೆರೆಹಿಡಿದಿರುವುದು ಸಿನಿಮಾದ ಸೌಂದರ್ಯ ಹೆಚ್ಚಿಸಿದೆ. ವಿಷಾದದಲ್ಲೂ ಹೃತಿಕ್ ಅವರನ್ನು ಚೆಂದಗಾಣಿಸಿರುವುದನ್ನು ಪಕ್ಕಕ್ಕೆ ಇಡಬೇಕು. ಸೇಡಿನ ಕಥಾನಕಗಳು ಮತ್ತೆ ಮತ್ತೆ ಮೂಡುತ್ತಿರುತ್ತವೆ; ಕಪ್ಪು-ಬಿಳುಪು ಧೋರಣೆಯೂ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.