ADVERTISEMENT

ಅಂಗಾರಕ ಬರುವನೆಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

‘ಇದು ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನ ಸಂಘರ್ಷದ ಚಿತ್ರಣ’ ಎಂದರು ನಟ ಪ್ರಜ್ವಲ್‌ ದೇವರಾಜ್‌.

ನಿರ್ದೇಶಕರು ಮಾತಿಗಿಂತ ಮೌನವೇ ಲೇಸು ಎನ್ನುವ ಮಾತನ್ನು ಅನುಸರಿಸುವಂತೆ ಮೌನವಾಗಿದ್ದಾಗ ಚಿತ್ರದ ಬಗ್ಗೆ ವಿವರಣೆ ನೀಡುವ ಸಂಪೂರ್ಣ ಹೊಣೆ ಪ್ರಜ್ವಲ್‌ ದೇವರಾಜ್‌ ಮೇಲೆ ಬಿದ್ದಿತ್ತು. ಹಲವು ಕಾಲದಿಂದ ದೂರವಿರುವ ಗೆಲುವನ್ನು ‘ಅಂಗಾರಕ’ ತಂದುಕೊಡುತ್ತದೆ ಎಂಬ ನಂಬಿಕೆ ಅವರ ದನಿಯಲ್ಲಿತ್ತು.

ಪ್ರಜ್ವಲ್‌ ನಾಯಕರಾಗಿ ನಟಿಸಿರುವ ‘ಅಂಗಾರಕ’ ಮುಂದಿನ ವಾರ (ಜ. 10) ತೆರೆಕಾಣಲು ಸಿದ್ಧವಾಗಿದೆ. ನೂತನ ವರ್ಷದ ಆರಂಭವನ್ನು ಭರ್ಜರಿಯಾಗಿಯೇ ಶುರುಮಾಡುವ ಬಯಕೆ ಚಿತ್ರತಂಡದ್ದು. ಅದಕ್ಕಾಗಿಯೇ ಸುಮಾರು 175 ಚಿತ್ರಮಂದಿರಗಳಲ್ಲಿ ‘ಅಂಗಾರಕ’ನನ್ನು ತೆರೆಗಾಣಿಸಲು ಉದ್ದೇಶಿಸಿದೆ.

ಕಥೆ ಕೇಳಿ ಖುಷಿಪಟ್ಟ ಪ್ರಜ್ವಲ್‌ ಮರುಮಾತಾಡದೇ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದರಂತೆ. ಎಂದಿನ ಮನರಂಜನಾ ಸಿನಿಮಾದ ಸರಕುಗಳನ್ನೇ ಒಳಗೊಂಡಿದ್ದರೂ ಕೆಲವು ಗಂಭೀರ ವಿಷಯಗಳನ್ನೂ ಕಥೆ ಒಳಗೊಂಡಿದೆ. ನಂಬಿಕೆ ಮತ್ತು ಮೂಢನಂಬಿಕೆ ಎರಡರ ನಡುವಿನ ಸಂಘರ್ಷ, ಗೊಂದಲಗಳು ಕಥನದ ಹೂರಣ. ನಮ್ಮ ಸಂಪ್ರದಾಯಗಳನ್ನು ಮರೆಯಬಾರದು ಎಂಬ ಸಂದೇಶ ಚಿತ್ರದಲ್ಲಿ ಇದೆ ಎಂದರು ಪ್ರಜ್ವಲ್.

ನಿರ್ದೇಶಕ ಶ್ರೀನಿವಾಸ ಕೌಶಿಕ್‌, ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌, ಕಾಮಿಡಿಯ ಹೂರಣ ತಮ್ಮ ಚಿತ್ರ ಎಂದು ಹೇಳಿದರು. ಈ ಚಿತ್ರಕ್ಕೆ ಬಂಡವಾಳ ಹೂಡಿರುವವರು ಜಯಸುಧಾ ರಾಘವೇಂದ್ರ. ಪತ್ನಿಯ ಮೇಲಿನ ಪ್ರೀತಿಯಿಂದ ಅವರ ಹೆಸರಿನಲ್ಲಿ ಬಂಡವಾಳ ಹೂಡಿದ್ದಾರೆ ಎಲ್‌ ಆ್ಯಂಡ್‌ ಟಿ ಕಂಪೆನಿಯ ಉದ್ಯೋಗಿ ರಾಘವೇಂದ್ರ.

ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಮೊದಲನೇ ನಾಯಕಿ ಪ್ರಣೀತಾ ಬಂದಿದ್ದು ಸುದ್ದಿಗೋಷ್ಠಿ ಮುಗಿದ ಬಳಿಕ. ಮತ್ತೊಬ್ಬ ನಾಯಕಿ ಹಾರ್ದಿಕಾ ಶೆಟ್ಟಿ ಅವರಿಗೆ ಚಿತ್ರದ ಬಿಡುಗಡೆ ರೋಮಾಂಚನ ಉಂಟುಮಾಡಿದೆ. ಗೆಲುವಿನ ಮೂಲಕ ಹೊಸ ವರ್ಷದ ಖಾತೆ ತೆರೆಯುವ ಭರವಸೆ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.