ADVERTISEMENT

ಅಂಧರ ಲೋಕದ ಅಂದದ ಪ್ರೇಮಕಥೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಮೇಘಶ್ರೀ
ಮೇಘಶ್ರೀ   

‘‘ಹರಿವು’, ‘ನಾನು ಅವನಲ್ಲ, ಅವಳು’ ಸಿನಿಮಾಗಳ ನಂತರ ಮತ್ತೊಂದು ಭಿನ್ನ ಪಾತ್ರದಲ್ಲಿ ನಟಿಸಬೇಕು ಎಂಬ ತುಡಿತ ಹೆಚ್ಚಾಗಿತ್ತು. ಆ ಸಮಯದಲ್ಲಿಯೇ ‘ಕೃಷ್ಣ ತುಳಸಿ’ಯ ಕಥೆ ಕೇಳಿದ್ದು. ಕಥೆಯ ನಾಯಕ ಅಂಧ ಎಂದು ತಿಳಿದಾಕ್ಷಣ ಮೈಯೆಲ್ಲ ಒಮ್ಮೆ ಕಂಪಿಸಿತು’ -ಹೀಗೆ ಮಾತಿಗೆ ಶುರುವಿಟ್ಟರು ಸಂಚಾರಿ ವಿಜಯ್. ತಮ್ಮೊಳಗಿನ ನಟನಾಪ್ರತಿಭೆಯನ್ನು ಸಾಬೀತುಗೊಳಿಸುವ ಮತ್ತೊಂದು ಪಾತ್ರಕ್ಕೆ ಜೀವತುಂಬಿರುವ ಧನ್ಯತೆ ಮತ್ತು ಪುಲಕ ಎರಡೂ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ಸುಕೇಶ್ ನಾಯಕ್ ನಿರ್ದೇಶನದ ‘ಕೃಷ್ಣ ತುಳಸಿ’ ಚಿತ್ರ ಈ ವಾರ (ಏ. 20) ತೆರೆಕಾಣುತ್ತಿದೆ.

ಈ ಚಿತ್ರದಲ್ಲಿ ಅವರು  ಪ್ರಾಚ್ಯವಸ್ತು ಇಲಾಖೆಯಲ್ಲಿ ಗೈಡ್‌ ಆಗಿ ಕೆಲಸ ಮಾಡುವ ತರುಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗತ್ತಿಗೆ ಕುರುಡನಾದರೂ ನಾಯಕಿಯ ಮನಸ್ಸಿನೊಳಗಿನ ಭಾವವನ್ನು ಸ್ಪಷ್ಟವಾಗಿಯೇ ಕಾಣುವ ಸೂಕ್ಷ್ಮತೆಯೂ ಇರುವ ಕುರುಡ ಅವನಂತೆ. ಹಾಗೆಯೇ ಅವಳ ಮುಖಾಂತರವೇ ಪ್ರಪಂಚವನ್ನು ನೋಡುತ್ತಿರುತ್ತಾನೆ. ‘ನಿರ್ದೇಶಕರು ಈ ಸಿನಿಮಾ ಮೂಲಕ ಅಂಧರ ಬದುಕನ್ನು ಅನಾವರಣ ಮಾಡುವ ಪ್ರಯತ್ನ ಮಾಡಿದ್ದಾರೆ. ನವಿರಾದ ಪ್ರೇಮಕಥೆಯ ಎಳೆಯೂ ಇದೆ‍’ ಎಂದು ಹೇಳಿಕೊಂಡರು ವಿಜಯ್. ಈ ಪಾತ್ರಕ್ಕಾಗಿಯೇ ಅವರು ವಿಶೇಷವಾಗಿ ಅಂಧರ ಶಾಲೆಗೆ ಹೋಗಿ ಅಲ್ಲಿನ ಮಕ್ಕಳ ಹಾವಭಾವಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರಂತೆ.

‘ಒಳ್ಳೆಯ ನಿರ್ಮಾಪಕ ಸಿಕ್ಕರೆ ಒಳ್ಳೆಯ ಚಿತ್ರ ಮಾಡಬಹುದು ಎಂಬುದಕ್ಕೆ ನಿದರ್ಶನ ‘ಕೃಷ್ಣ ತುಳಸಿ’ ಎಂದು ಚಿತ್ರದ ಶ್ರೇಯಸ್ಸೆಲ್ಲವನ್ನೂ ನಿರ್ಮಾಪಕರ ಹೆಗಲಿಗೆ ವರ್ಗಾಯಿಸಿದರು ನಿರ್ದೇಶಕ ಸುಕೇಶ್ ನಾಯಕ್. ‘ಈ ಸಿನಿಮಾದಲ್ಲಿ ಬಸ್‌ ಕೂಡ ಅಷ್ಟೇ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಬಸ್‌ನೊಳಗೆ ಟ್ರಾಲಿಗಳನ್ನು ಬಳಸಿಕೊಂಡು ಚಿತ್ರೀಕರಣ ನಡೆಸಿದ್ದೇವೆ. ಪ್ರೀತಿಯ ಕುರಿತಾದ ಒಂದು ಹಾಡನ್ನು ಮೈಸೂರು ಅರಮನೆ ಮುಂಭಾಗದಲ್ಲಿ, ಇನ್ನೊಂದು ಹಾಡನ್ನು ನಿಜವಾದ ಅಂಧರನ್ನು ಬಳಸಿಕೊಂಡು ಮಡಿಕೇರಿಯಲ್ಲಿ ಚಿತ್ರೀಕರಿಸಿದ್ದೇವೆ’ ಎಂದು ಅವರು ವಿವರಣೆ ನೀಡಿದರು. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಯು’ ಪ್ರಮಾಣಪತ್ರ ನೀಡಿದೆ.

ADVERTISEMENT

ಕಿರಣ್ ರವೀಂದ್ರನಾಥ್ ಅವರ ಸಂಯೋಜನೆಯ ಸಂಗೀತಕ್ಕೆ ಯೋಗರಾಜ ಭಟ್, ಜಯಂತ ಕಾಯ್ಕಣಿ, ಹೃದಯ ಶಿವ, ಧನಂಜಯ್ ಪದಗಳನ್ನು ಪೋಣಿಸಿದ್ದಾರೆ.

‘ನಾನು ಅಂದುಕೊಂಡಿರುವುಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ. ನಿರ್ದೇಶಕರು ಮಾತು ಉಳಿಸಿಕೊಂಡಿದ್ದಾರೆ. ಸ್ವಲ್ಪ ಮಟ್ಟಿಗೆ ಬಜೆಟ್ ಜಾಸ್ತಿ ಆದರೂ ದೃಶ್ಯಗಳು ಅದ್ಭುತವಾಗಿವೆ. ತೆಲುಗು ಚಿತ್ರರಂಗದವರು ಈಗಲೇ ಈ ಸಿನಿಮಾದ ಹಕ್ಕು ನೀಡಿ ಎಂದು ಕೇಳುತ್ತಿದ್ದಾರೆ’ ಎಂದು ಖುಷಿಯಿಂದಲೇ ಹೇಳಿಕೊಂಡರು ನಿರ್ಮಾಪಕ ಎಂ. ನಾರಾಯಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.