ADVERTISEMENT

ಅಭಿನಯ ವಿಮುಖಿ ಸೇವಾ ಮುಖಿ

ಪ್ರಜಾವಾಣಿ ವಿಶೇಷ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಮೆರಿಕದ ಕರಾವಳಿ ಪ್ರದೇಶದಲ್ಲಿ ತಂಪಾಗಿದ್ದ ಹದಿನೈದರ ಹುಡುಗಿ `ಮೈನೆ ಪ್ಯಾರ್ ಕಿಯಾ' ಹಿಂದಿ ಸಿನಿಮಾ ನೋಡಿದ್ದೇ ಬಾಲಿವುಡ್ ಮೋಹಿಯಾದಳು. ಆಗಿನ ಕಾಲದಲ್ಲಿ ಡಿವಿಡಿ, ವಿಸಿಡಿ ಇರಲಿಲ್ಲ. ಇದ್ದದ್ದು ದಪ್ಪ ವಿಸಿಆರ್ ಕ್ಯಾಸೆಟ್. ಮುಂಬೈನಲ್ಲಿದ್ದ ಪರಿಚಯಸ್ಥರಿಗೆ ಹೇಳಿ, ಹೇಗೋ ಆ ಚಿತ್ರದ ವಿಸಿಆರ್ ಕ್ಯಾಸೆಟ್ ತರಿಸಿಕೊಂಡಳು.

ಮತ್ತೆ ಮತ್ತೆ ಆ ಸಿನಿಮಾ ನೋಡಿದಳು. ಸಲ್ಮಾನ್ ಖಾನ್ ಮೇಲೆ ಅತೀವ ಪ್ರೀತಿ ಹುಟ್ಟಿತು. ಬಾಲಿವುಡ್ ನಟಿಯಾಗಬೇಕು ಎಂದು ಪಣ ತೊಟ್ಟಳು. ಶಾಲೆ ಬಿಟ್ಟಳು. ಸಲ್ಮಾನ್ ಖಾನ್ ಅವರನ್ನು ನೋಡಬೇಕೆಂಬ ಕನಸು ನನಸಾಯಿತು. ಸಲ್ಮಾನ್‌ಗೆ ಕಿರಿಕಿರಿ ಉಂಟುಮಾಡುವಷ್ಟು ಅವರ ಹತ್ತಿರ ಹೋಗಿ ನಿಲ್ಲುತ್ತಿದ್ದಳು. ಅವರನ್ನು ಪ್ರಚೋದಿಸುವಂತೆ ನೋಡುತ್ತಿದ್ದಳು.

ಇಬ್ಬರ ನಡುವೆ ಪ್ರೀತಿ ಮೂಡಿದೆ ಎಂದು ಪತ್ರಿಕೆಗಳು ಬರೆದವು. ಒಂದು ಪಾರ್ಟಿಯಲ್ಲಿ ಸಲ್ಮಾನ್ ಖಾನ್‌ಗೆ ಸಿಟ್ಟು ನೆತ್ತಿಗೇರಿ, ಅವಳ ತಲೆಯ ಮೇಲೆ ಕೋಕ್ ಸುರಿದುಬಿಟ್ಟರು. ಅದೂ ದೊಡ್ಡ ಸುದ್ದಿಯಾಯಿತು. ಹುಡುಗಿಗೆ ಮೂರು ದಿನ ನಿದ್ದೆ ಬರಲಿಲ್ಲ. ಮತ್ತೆ ಗಂಟೂಮೂಟೆ ಕಟ್ಟಿ ಅಮೆರಿಕಗೆ ಹೋದಳು. ಹತ್ತನೇ ಇಯತ್ತೆಯಲ್ಲಿ ಶಾಲೆ ತೊರೆದಿದ್ದ ಅವಳು ಅಲ್ಲಿಂದ ವಿದ್ಯಾಭ್ಯಾಸ ಮುಂದುವರಿಸಿದಳು.

ಈಗ ಆ ಹುಡುಗಿ ಅವಳಲ್ಲ, ಅವರು. ಹೆಸರು ಸೋಮಿ ಅಲಿ. `ನೋ ಮೋರ್ ಟಿಯರ್ಸ್‌' ಎಂಬ ಲಾಭ ಮಾಡದ ಸರ್ಕಾರೇತರ ಸಂಸ್ಥೆ ಕಟ್ಟಿದ್ದಾರೆ. ಪಾಕಿಸ್ತಾನಿ ಮೂಲದ ಈ ಹೆಣ್ಣುಮಗಳು ದೈಹಿಕ, ಮಾನಸಿಕ ಹಿಂಸೆ ಅನುಭವಿಸುವ ದಕ್ಷಿಣ ಏಷ್ಯಾದ ವಿವಿಧ ದೇಶಗಳ ಮಹಿಳೆಯರು, ಮಕ್ಕಳನ್ನು ರಕ್ಷಿಸಲು ಟೊಂಕಕಟ್ಟಿದ್ದಾರೆ.

ADVERTISEMENT

ಅಂದಹಾಗೆ, ಆ ಸಂಸ್ಥೆಗೆ ಸಲ್ಮಾನ್ ಖಾನ್ ಕೂಡ ನೈತಿಕ ಬೆಂಬಲ ಕೊಟ್ಟಿದ್ದಾರೆ. ಈಗಲೂ ಸಲ್ಮಾನ್ ಮೇಲೆ ಸೋಮಿಗೆ ಅಪಾರ ಗೌರವ. ಆ ನಟ ಎದುರು ಬಂದರೆ ಮೊದಲಿನಂತೆ ನುಂಗುವ ಹಾಗೆ ನೋಡುವುದಿಲ್ಲ. ಮದುವೆಯ ಚಿಂತೆಯಂತೂ ಇಲ್ಲವೇ ಇಲ್ಲ. ಮಿಥುನ್ ಚಕ್ರವರ್ತಿ, ಜಿತೇಂದ್ರ, ಗೋವಿಂದ, ಸುನಿಲ್ ಶೆಟ್ಟಿ, ಸೈಫ್ ಅಲಿ ಖಾನ್ ಹೀಗೆ ಭಿನ್ನ ವಯೋಮಾನದ ನಟರ ಜೊತೆ ಚಿಕ್ಕ ವಯಸ್ಸಿನಲ್ಲೇ ನಟಿಸಿದ್ದ ಸೋಮಿ ಪಾಕಿಸ್ತಾನಿ ಮೂಲದವರು.

ಮುರಿದ ಪ್ರೀತಿಯನ್ನು ಭಾರತದಲ್ಲೇ ಬಿಟ್ಟು, ಅಮೆರಿಕಕ್ಕೆ ಮರಳಿ ಅವರು ಅಧ್ಯಯನದ ಹೊರತು ಬೇರೇನನ್ನೂ ಮಾಡಲಿಲ್ಲ. ಸೈಕಾಲಜಿ ಓದಿದ ಮೇಲೆ ಪತ್ರಕರ್ತೆಯಾಗಿ ಒಂದಿಷ್ಟು ಓಡಾಡಿ ಮಾನವೀಯ ಮೌಲ್ಯದ ವರದಿಗಳನ್ನು ಪ್ರಕಟಿಸಿದರು. ನೊಂದ ಮಹಿಳೆಯರಿಗೆ ಏನಾದರೂ ಮಾಡಬೇಕು ಎಂದು ಎನಿಸಿದ್ದೇ ಆಗ. ಅತ್ಯಾಚಾರಕ್ಕೆ ಒಳಗಾದ ನಂತರವೂ ದಿಟ್ಟತನದಿಂದ ಬದುಕನ್ನು ಎದುರಿಸುತ್ತಿರುವ ಡಾ. ಶಾಜಿಯಾ ಖಾಲಿದ್, ಸೋನಿಯಾ ನಾಜ್, ಮುಖ್ತಾರನ್ ಬೀಬಿ ಕುರಿತು ಲೇಖನಗಳನ್ನು ಬರೆದರು.

ಇದುವರೆಗೆ ಅವರ ಸಂಸ್ಥೆ ದೈಹಿಕ, ಮಾನಸಿಕ ಹಿಂಸೆಗೆ ಒಳಗಾದ 278 ಮಹಿಳೆಯರನ್ನು, 620 ಮಕ್ಕಳನ್ನು ರಕ್ಷಿಸಿದೆ. ಎದೆಯಿಂದ ಹೊಟ್ಟೆಯ ಭಾಗದವರೆಗೆ ಹೆಂಡತಿಯ ದೇಹವನ್ನು ಸುಟ್ಟಿದ್ದ ಕಟುಕನಿಗೆ ತಕ್ಕ ಶಾಸ್ತಿ ಮಾಡಿದ, ಐದು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ರಷ್ಯನ್ ತಂದೆಗೆ ಬುದ್ಧಿ ಕಲಿಸಿದ ಸಮಾಧಾನ ಅವರಿಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ದೈಹಿಕ ಹಿಂಸೆ ಬಗೆಬಗೆಯಾಗಿ ಇದೆ ಎಂಬುದಕ್ಕೆ ಅವರಲ್ಲಿ ಅಸಂಖ್ಯ ಉದಾಹರಣೆಗಳಿವೆ.

ಇಷ್ಟಕ್ಕೂ ಸೋಮಿ ಅಭಿನಯ ಲೋಕ ತೊರೆದು, ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗಿದ್ದಾದರೂ ಯಾಕೆ? ಅವರು ಹೇಳುವುದಿಷ್ಟು: `ಬುದ್ಧಿ ಬರುವ ಮೊದಲೇ ನಾನು ನಟಿಯಾದೆ. ಶ್ರೀಮಂತಿಕೆಯ ಹಮ್ಮೂ ಇತ್ತು. ಇಷ್ಟಪಟ್ಟ ಸಲ್ಮಾನ್ ನನಗೆ ಸಿಕ್ಕೇಬಿಟ್ಟರು ಎಂದು ಭಾವಿಸಿದ್ದೆ. ಆಗ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ನನಗೆ ಗೊತ್ತಿರಲಿಲ್ಲ. ಹುಂಬಳಾಗಿದ್ದ ನನಗೆ ಒಮ್ಮೆ ಜ್ಞಾನೋದಯವಾಯಿತು.

ಹತ್ತನೇ ಕ್ಲಾಸಿಗೆ ಶಾಲೆ ಬಿಟ್ಟಿದ್ದ ನಾನು ಮತ್ತೆ ಕಷ್ಟಪಟ್ಟು ಅಲ್ಲಿಂದಲೇ ಓದಿದೆ. ಆಗೆಲ್ಲಾ ನಾನು ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಓದು ಅರಿವು ಮೂಡಿಸಿತು. ಅದರಿಂದ ಜಗತ್ತು ಕಾಣಿಸಿತು. ಪತ್ರಕರ್ತೆಯಾದರೆ ಇನ್ನಷ್ಟು ತಿಳಿದುಕೊಳ್ಳಬಹುದು ಎಂದು ಆ ವೃತ್ತಿ ಆರಿಸಿಕೊಂಡೆ. ನಿತ್ಯವೂ ಬದುಕಿನ ಹಲವು ಮುಖಗಳನ್ನು ಕಾಣುತ್ತಾ ಬಂದೆ. ಜಗತ್ತು ತುಂಬಾ ಚೆನ್ನಾಗಿದೆ. ಇಲ್ಲಿ ಒಳ್ಳೆಯವರಿದ್ದಾರೆ. ಕೆಟ್ಟವರೂ ಇದ್ದಾರೆ.

ಇಂಥ ಸಂಗತಿಗಳು ನಟಿಯಾಗಿದ್ದಾಗ ನನಗೆ ಗೊತ್ತಿರಲಿಲ್ಲ. ಅಭಿನಯ ಬಿಟ್ಟಿದ್ದಕ್ಕೆ ನನಗೆ ಬೇಸರವೂ ಇಲ್ಲ. ಸಲ್ಮಾನ್ ಖಾನ್ ತುಂಬಾ ಪ್ರಾಮಾಣಿಕ. ಅಷ್ಟು ಮಾತ್ರ ಹೇಳಬಲ್ಲೆ'. ಮುಂದೆ ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿರುವ ಸೋಮಿ ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗಲೂ ಸಿದ್ಧ.

ತಮ್ಮ ವಯಸ್ಸೆಷ್ಟು ಎಂಬುದನ್ನು ಮಾತ್ರ ಹೇಳಲು ಅವರಿಗೆ ಇಷ್ಟವಿಲ್ಲ. `ಕ್ರಿಶನ್ ಅವತಾರ್', `ಯಾರ್ ಗದ್ದಾರ್', `ತೀಸ್ರಾ ಕೌನ್', `ಆವೋ ಪ್ಯಾರ್ ಕರೇ', `ಆಂದೋಲನ್', `ಮಾಫಿಯಾ'- ಇವು ಸೋಮಿ ಅಲಿ ನಟಿಸಿದ ಚಿತ್ರಗಳು. ನೀವು ಬಣ್ಣದ ಹಚ್ಚಿದ ಪಾತ್ರಗಳ ಕುರಿತು ಏನನ್ನಿಸುತ್ತದೆ ಎಂದರೆ ಅವರು, `ನೆಕ್ಸ್ಟ್ ಕ್ವೆಶ್ಚನ್ ಪ್ಲೀಸ್' ಎಂದು ಮರುಪ್ರಶ್ನೆ ಎಸೆಯುತ್ತಾರಷ್ಟೆ.
-ಎನ್ವಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.