ADVERTISEMENT

ಅರ್ಜುನ ಪ್ರಸಾದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 19:30 IST
Last Updated 17 ಫೆಬ್ರುವರಿ 2011, 19:30 IST
ಅರ್ಜುನ ಪ್ರಸಾದ
ಅರ್ಜುನ ಪ್ರಸಾದ   

ಉಪ್ಪಿಟ್ಟು, ಕೇಸರಿ ಬಾತ್, ಜಹಾಂಗೀರ್ ರುಚಿ ಸವಿಯುತ್ತಿದ್ದ ಅರ್ಜುನ್ ಸರ್ಜಾ ದೀರ್ಘ ಅವಧಿಯ ನಂತರ ತಮ್ಮ ‘ಪ್ರಸಾದ್’ ಕನ್ನಡ ಸಿನಿಮಾ ಸಟ್ಟೇರುತ್ತಿರುವ ಸಂಗತಿಯನ್ನು ‘ಸಿನಿಮಾ ರಂಜನೆ’ ಎದುರು ಸ್ಫೋಟಿಸಿದರು.

‘ನೋಡಿ, ಎಲ್ಲಿಯೂ ಮಿಡಿಯಾದವರ ಮುಂದೆ ಬಾಯಿ ಬಿಟ್ಟಿರಲಿಲ್ಲ. ಇದೇ ಫಸ್ಟ್ ಈ ವಿಷಯ ಹೇಳ್ತಾ ಇದೀನಿ. ‘ಪ್ರಸಾದ್’ ಕಲಾತ್ಮಕ ಚಿತ್ರವೇನಲ್ಲ; ಅತ್ಯಂತ ರಿಯಲಿಸ್ಟಿಕ್ ಸಿನಿಮಾ’ ಎನ್ನುತ್ತಾ ಮುಗುಳುನಕ್ಕರು.

ಪಕ್ಕದಲ್ಲೆ ಕುಳಿತ್ತಿದ್ದ ರಂಗಾಯಣ ರಘು ಅವರತ್ತ ಮುಖ ಮಾಡಿ, ಇವರಿಗೂ ಅದರಲ್ಲೊಂದು ಪಾತ್ರವಿದೆ ಎಂದರು. ರಂಗಾಯಾಣ ರಘು ‘ಹೌದಾ ಸರ್’ ಎಂದು ಅಚ್ಚರಿ ವ್ಯಕ್ತಪಡಿಸಿದರು. ‘ಪ್ರಸಾದ್’ ಆಕ್ಷನ್, ಕಾಮಿಡಿಯ ಮಿಶ್ರಣದ ಚಿತ್ರ ಅಂದುಕೊಳ್ಳಲು ಅವರು ಕೊಟ್ಟ ಈ ಸುಳಿವೇ ಸಾಕು. ಕಥೆಯ ವಸ್ತುವೇನು, ಚಿತ್ರದ ನಾಯಕಿ ಯಾರು ಎನ್ನುವ ಗುಟ್ಟನ್ನು ಮಾತ್ರ ಅರ್ಜುನ್ ಬಿಟ್ಟುಕೊಡಲಿಲ್ಲ. ಮನೋಜ್ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಅಶೋಕ್ ಖೇಣಿ ನಿರ್ಮಾಪಕರು. ಇದೊಂದು ಬಹುಕೋಟಿ ವೆಚ್ಚದ ಸಿನಿಮಾ ಹೌದೆ ಎಂದು ಕೇಳಿದಾಗ, ಅವರು ಮೌನಂ ಸಮ್ಮತಿ ಲಕ್ಷಣಂ ಎಂಬಂತಾದರು.

ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಅರ್ಜುನ್‌ಗೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಇದ್ದೇ ಇದೆ. ಅದನ್ನು ಅವರು ಸ್ವತಃ ಒಪ್ಪಿಕೊಂಡರು. ಕನ್ನಡದ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಇದೆ. ಆದರೆ, ಸಮಯದ ಹೊಂದಾಣಿಕೆ ಕಷ್ಟಸಾಧ್ಯವಾಗುತ್ತಿದೆ. ಸಮಯದ ಅಭಾವದ ನಡುವೆಯೂ ‘ಪ್ರಸಾದ್’ ಕೈಗೆತ್ತಿಕೊಂಡಿದ್ದೇನೆ ಎನ್ನುತ್ತಾ, ತಮ್ಮನ್ನು ಕಾಣಲು ಬಂದ ನಟಿ ಡೈಸಿ ಬೋಪಣ್ಣ ಅವರೊಂದಿಗೆ ಉಭಯ ಕುಶಲೋಪರಿಗೆ ಎದ್ದುಹೋದರು.

ಅಂದಹಾಗೆ, ಇಷ್ಟೆಲ್ಲಾ ನಡೆದದ್ದು ತುಮಕೂರು ಜಿಲ್ಲಾ ಉತ್ಸವದಲ್ಲಿ. ಅರ್ಜುನ್ ಸನ್ಮಾನಕ್ಕೆ ಭಾಜನರಾದ ಸಂದರ್ಭದಲ್ಲಿ. ಸಮೀರ್ ನಿರ್ದೇಶನದ ‘ಕಾಂಟ್ರಾಕ್ಟ್’ ಎಂಬ ಕನ್ನಡ-ತೆಲುಗು ಭಾಷೆಯಲ್ಲಿ ಒಟ್ಟಾಗಿ ಸಿದ್ಧಗೊಳ್ಳುತ್ತಿರುವ ಚಿತ್ರದಲ್ಲೂ ಅರ್ಜುನ್ ಸರ್ಜಾ ನಟಿಸಿದ್ದಾರೆ. ಮತ್ತೊಮ್ಮೆ ಅವರು ಗಂಭೀರವಾಗಿ ಕನ್ನಡದತ್ತ ಮುಖ ಮಾಡುತ್ತಿರುವುದಕ್ಕೆ ಈ ಚಿತ್ರಗಳೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.