ADVERTISEMENT

ಅಲೆಮಾರಿ ಯಶಸ್ಸಿನ ಬೆನ್ನೇರಿ...

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST
ಅಲೆಮಾರಿ ಯಶಸ್ಸಿನ ಬೆನ್ನೇರಿ...
ಅಲೆಮಾರಿ ಯಶಸ್ಸಿನ ಬೆನ್ನೇರಿ...   

ಸಂತು ನಿರ್ದೇಶನದ `ಅಲೆಮಾರಿ~ ಚಿತ್ರದಲ್ಲಿ ಅಪ್ರಬುದ್ಧ ವಯಸ್ಸಿನಲ್ಲಿ ಮಚ್ಚು ಲಾಂಗು ಹಿಡಿಯುವ ಹಂಬಲದ ಖಳನಾಯಕನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ರಾಕೇಶ್‌ಗೆ ಸಂತು ತಮ್ಮ ಮುಂದಿನ ಚಿತ್ರದಲ್ಲಿ ನಾಯಕನಾಗಿ ಬಡ್ತಿ ನೀಡಿದ್ದಾರೆ.

`ಅಲೆಮಾರಿ~ಗೆ ದೊರಕಿರುವ ಆರಂಭದ ಪ್ರತಿಕ್ರಿಯೆಯಿಂದ ಸಂಭ್ರಮದಲ್ಲಿ ತೇಲಾಡುತ್ತಿರುವ ಸಂತು ಮುಂದಿನ ಚಿತ್ರ `ಡವ್~ಗೆ ರಾಕೇಶ್ ಅಡಿಗ ನಾಯಕ. ಚಿತ್ರದ ಕಥೆ ಅತ್ಯಂತ ಸೂಕ್ಷ್ಮವಾದದ್ದು. ಚಿತ್ರಕ್ಕಾಗಿ ನಾಯಕ ಎರಡು ರೀತಿಯಲ್ಲಿ ದೇಹಾಕಾರವನ್ನು ಬದಲಿಸಿಕೊಳ್ಳಬೇಕು. ಇದಕ್ಕೆ ಸುಮಾರು ಆರೇಳು ತಿಂಗಳು ಬೇಕಾಗುವುದರಿಂದ ಈ ಅವಧಿಯಲ್ಲಿ ಬೇರೆ ಚಿತ್ರ ಒಪ್ಪಿಕೊಳ್ಳದೆ ತಮ್ಮ ಚಿತ್ರಕ್ಕೆ ಬದ್ಧರಾಗುವ ನಾಯಕನ ಹುಡುಕಾಟದಲ್ಲಿದ್ದ ನಿರ್ದೇಶಕ ಸಂತು ರಾಕೇಶ್‌ರನ್ನು ಆಯ್ಕೆ ಮಾಡಿದ್ದಾರೆ.

`ಜೋಶ್~ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ರಾಕೇಶ್ ಈಗಾಗಲೇ ಸುಮಾರು ಏಳೆಂಟು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. `ಪ್ರೀತಿಯಿಂದ~, `ಅಯೋಧ್ಯಪುರಂ~, `ಪ್ರೇಮಿಗಳ ದಿನ~ ಅವರ ಕೈಯಲ್ಲಿರುವ ಚಿತ್ರಗಳು. ಹಲವು ತಿಂಗಳ ಹಿಂದೆಯೇ ಸಿದ್ಧಗೊಂಡಿರುವ ಅವರ `ಮಂದಹಾಸ~ ಇನ್ನೂ ಬಿಡುಗಡೆ ಭಾಗ್ಯ ಕಂಡಿಲ್ಲ. ನಾನೊಬ್ಬ ನಟನಾಗಿ ಪರಿಪಕ್ವಗೊಳ್ಳಲು `ಡವ್~ ಕಾರಣವಾಗಲಿದೆ ಎಂಬುದು ರಾಕೇಶ್ ವಿಶ್ವಾಸ.

ಚಿತ್ರದ ಮೊದಲ ಭಾಗದಲ್ಲಿ ಮೂಳೆಗಳು ಕಾಣುವಷ್ಟು ಶರೀರವನ್ನು ಕೃಶಗೊಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಡಯಟ್ ಮೊರೆ ಹೋಗಲಿದ್ದಾರೆ. ಬಳಿಕ ದ್ವಿತೀಯಾರ್ಧದಲ್ಲಿ ಅವರ ದೇಹಾಕಾರ ಸಂಪೂರ್ಣ ಬದಲಾಗಲಿದೆ. ದೇಹವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲಿರುವ ರಾಕೇಶ್ ಈಗಾಗಲೇ ತರಬೇತಿ ಪಡೆಯಲು ಆರಂಭಿಸಿದ್ದಾರೆ. ಚಿತ್ರದಲ್ಲಿ ವಿಶಿಷ್ಟ ಹೇರ್‌ಸ್ಟೈಲ್, ಸಂಭಾಷಣೆ ಮತ್ತು ನಡೆದಾಡುವ ಶೈಲಿಯನ್ನು ರಾಕೇಶ್ ಪ್ರಸ್ತುತವಪಡಿಸಲಿದ್ದಾರಂತೆ.

`ಅಲೆಮಾರಿ~ಯಲ್ಲಿ ಖಳನಾಯಕನ ಪಾತ್ರ ಒಪ್ಪಿಕೊಂಡಾಗ ಹಲವರು ವಿರೋಧ ವ್ಯಕ್ತಪಡಿಸಿದರು. ನಾಯಕನಾಗಿ ನಟಿಸುತ್ತಿದ್ದವನು, ಖಳನಾಯಕನ ಪಾತ್ರಕ್ಕೆ ಮೀಸಲಾಗಿ ಬಿಡುತ್ತೀಯ ಎಂದು ಎಚ್ಚರಿಸಿದರು. ಆದರೆ ನನ್ನ ಪಾಲಿಗೆ ಇದೊಂದು ಪಾತ್ರವಷ್ಟೆ. ನನ್ನ ಅಭಿನಯ ಸಾಮರ್ಥ್ಯ ಪ್ರದರ್ಶಿಸುವ ಅವಕಾಶವಿರುವ ಪಾತ್ರಗಳನ್ನು ಮಾಡಲು ಸದಾ ಸಿದ್ಧ. ಈ ಪಾತ್ರ ನನಗೆ ಹೊಸ ಇಮೇಜ್ ತಂದುಕೊಟ್ಟಿದೆ~ ಎನ್ನುತ್ತಾರೆ ರಾಕೇಶ್.

ನಾನು ಚಿತ್ರರಂಗದಲ್ಲಿ ಇನ್ನೂ ಕಲಿಯುವ ಹಂತದಲ್ಲಿದ್ದೇನೆ. ನಾನು ದೊಡ್ಡ ಹೀರೋ ಅಲ್ಲ, ಸಾಮಾನ್ಯ ನಟನಷ್ಟೆ. ಚಿತ್ರರಂಗದಲ್ಲಿ ಮೊದಲು ನಾಯಕನ ಮಾರುಕಟ್ಟೆ ನೋಡುತ್ತಾರೆ. ನನಗೆ ಅಂತಹ ಸ್ಟಾರ್ ವ್ಯಾಲ್ಯೂ ಇಲ್ಲ. ಆದರೂ ಅವಕಾಶಗಳು ಅರಸಿ ಬರುತ್ತಿವೆ. ನಾನು ಪಾತ್ರಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂಬ ನಂಬಿಕೆ ಚಿತ್ರರಂಗದಲ್ಲಿ ಮೂಡಿದೆ. ನನಗೆ ಇಷ್ಟು ಸಾಕು ಎನ್ನುವ ವಿನಯವಂತಿಕೆ ಅವರದು.

ಲವರ್‌ಬಾಯ್ ಇಮೇಜ್ ಪಾತ್ರಗಳಿಂದ ಹೊರಬಂದು ಖಳನಾಯಕ ಪಾತ್ರ ಮಾಡಿರುವುದು ರಾಕೇಶ್‌ಗೆ ಇನ್ನೂ ಅನುಕೂಲವಾಗಿದೆಯಂತೆ. ಆ್ಯಕ್ಷನ್ ಪಾತ್ರಗಳನ್ನು ನಿರ್ವಹಿಸಬಲ್ಲ ಛಾತಿ ಈತನಿಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ. ಹೀಗಾಗಿ ಅವಕಾಶಗಳ ದಿಡ್ಡಿ ಬಾಗಿಲು ತೆರೆಯಲಿದೆ ಎನ್ನುವುದು ಅವರ ಭರವಸೆ.

`ಡವ್~ ಪಾತ್ರ ಸಾಕಷ್ಟು ಚಾಲೆಂಜಿಂಗ್ ಆಗಿದೆ. ಕಥೆಯೂ ಚೆನ್ನಾಗಿದೆ. ಹೀಗಾಗಿ ಈ ಚಿತ್ರ ಹೊಸ ಇಮೇಜ್ ತಂದುಕೊಡುವ ನಿರೀಕ್ಷೆ ಮೂಡಿಸಿದೆ ಎನ್ನುವಾಗ ರಾಕೇಶ್ ಕಣ್ಣುಗಳಲ್ಲಿ ಹೊಸ ಹೊಳಪು ಮೂಡುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.