ADVERTISEMENT

ಅಲೆಯಲು ಹೊರಟ ಅಲೆಮಾರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಅದು `ಅಲೆಮಾರಿ~ ಚಿತ್ರದ ಕೊನೆಯ ಪತ್ರಿಕಾಗೋಷ್ಠಿ. ಹಾಗೆಂದು ಘೋಷಿಸಿಕೊಂಡರು ಚಿತ್ರದ ನಿರ್ಮಾಪಕ ಬಿ.ಕೆ.ಶ್ರೀನಿವಾಸ್. ಉಳಿದ ಪತ್ರಿಕಾಗೋಷ್ಠಿಗಳ ಸರದಿ ಚಿತ್ರ ಬಿಡುಗಡೆಯಾದ ನಂತರವಂತೆ.

ಅಂದಹಾಗೆ, ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಭರ್ಜರಿ ತಯಾರಿ ಕೂಡ ನಡೆದಿದೆ. ಆಡಿಯೊ ಸೀಡಿ ಖರೀದಿಸಿದರೆ ಅಲೆಮಾರಿ ಚಿತ್ರದ ನಿರ್ಮಾಣ ಕುರಿತ ಸೀಡಿ ಉಚಿತ ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಈವರೆಗೆ ಸುಮಾರು 25 ಸಾವಿರ ಧ್ವನಿಮುದ್ರಿಕೆಗಳು ಖರ್ಚಾಗಿವೆಯಂತೆ.

ಪ್ರಚಾರದ ಮತ್ತೊಂದು ಭಾಗವಾಗಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು. ರಾಜ್ಯದ ಸುಮಾರು 250 ಚಿತ್ರಮಂದಿರಗಳಲ್ಲಿ ಹದಿನೈದು ದಿನಗಳ ಕಾಲ ಈ ಟ್ರೇಲರ್ `ಅಲೆಮಾರಿ ಬರುವ~ ಎಂಬ ಸೂಚನೆ ನೀಡಲಿವೆಯಂತೆ. ಹೋರ್ಡಿಂಗ್, ಪೋಸ್ಟರ್‌ಗಳಿಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸಲಾಗಿದೆಯಂತೆ. ರಿಂಗ್‌ಟೋನ್ ಪಡೆದವರಲ್ಲಿ ಹತ್ತು ಮಂದಿ ಅದೃಷ್ಟಶಾಲಿಗಳಿಗೆ ಉಡುಗೊರೆಯನ್ನು ನೀಡಲು ಕೂಡ ಚಿಂತಿಸಲಾಗಿದೆ.

ಚಿತ್ರದ ಪ್ರಚಾರ ಕುರಿತಂತೆ ಸುದೀರ್ಘವಾಗಿ ಮಾತನಾಡಿದ ಶ್ರೀನಿವಾಸ್ ವಿಷಯಕ್ಕೆ ಬಂದರು. `ಟೀವಿ ಧಾರಾವಾಹಿ ನೋಡಬೇಡಿ, ಕೇವಲ ಸಿನಿಮಾ ನೋಡಿ ಎಂದು ಕರೆ ನೀಡುವವನು ನಾನಲ್ಲ. ಚಿತ್ರ ನಿಜಕ್ಕೂ ಚೆನ್ನಾಗಿದ್ದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಅಲೆಮಾರಿಯ ಮೊದಲ ಪ್ರತಿ ಲಭಿಸಿದೆ.

ಶನಿವಾರದ ವೇಳೆಗೆ ಸೆನ್ಸಾರ್ ಅನುಮತಿ ದೊರೆಯಲಿದೆ~ ಎಂದರು. ಚಿತ್ರವನ್ನು ತಾವೇ ಬಿಡುಗಡೆ ಮಾಡಬೇಕೋ ಅಥವಾ ವಿತರಕರಿಗೆ ಒಪ್ಪಿಸಬೇಕೋ ಎಂಬ ಬಗ್ಗೆ ನಿರ್ಮಾಪಕರು ಇನ್ನೂ ನಿರ್ಧರಿಸಿಲ್ಲ.

ಮಾತು ಶ್ರೀನಿವಾಸ್ ಅವರೇ ನಿರ್ಮಿಸಿರುವ `ಭಾಗೀರತಿ~ ಚಿತ್ರದೆಡೆಗೆ ಹೊರಳಿತು. ಅಲೆಮಾರಿಗಿಂತಲೂ ಮೊದಲೇ ಬಿಡುಗಡೆಯಾಗಬೇಕಿದ್ದ ಚಿತ್ರವದು. ವಿಳಂಬಕ್ಕೆ ಕಾರಣ ಹುಡುಕಲು ಹೊರಟ ಪತ್ರಕರ್ತರಿಗೆ ಅವರಿಂದ ಸಿಕ್ಕ ಉತ್ತರ: ಭಾಗೀರತಿ ಕೇವಲ ಒಂದು ವಾರ ಓಡುವ ಚಿತ್ರವಲ್ಲ. ಅದರಲ್ಲಿ ಒಂದು ವಿಶೇಷವಿದೆ. ಚಿತ್ರವನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡುವ ಆಸೆ ಇದೆ. ಹೀಗಾಗಿ `ಅಲೆಮಾರಿ~ ಬಿಡುಗಡೆಯಾದ ಚಿತ್ರಮಂದಿರಗಳಲ್ಲೇ ಅದನ್ನೂ ಪ್ರದರ್ಶಿಸಲಾಗುವುದು.

ನಿರ್ದೇಶಕ ಸಂತು ಧ್ವನಿಮುದ್ರಿಕೆಗೆ ಸಿಕ್ಕ ಪ್ರತಿಕ್ರಿಯೆಯ ಖುಷಿಯಲ್ಲಿದ್ದರು. `ಧ್ವನಿಮುದ್ರಿಕೆ ಹಾಗೂ ನಿರ್ಮಾಣ ಪ್ರಕ್ರಿಯೆಯ ಸೀಡಿ ಬಗ್ಗೆ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಕಲಾವಿದರು ಕೂಡ ಉತ್ತಮ ಬೆಂಬಲ ನೀಡುತ್ತಿದ್ದಾರೆ~ ಎಂದರು.

ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಕರ ಬೆನ್ನು ತಟ್ಟಿದರು. `ಚಿತ್ರ ನೋಡಿದರೆ ಸಂತು ಅವರ ಚೊಚ್ಚಿಲ ನಿರ್ದೇಶನದ ಚಿತ್ರ ಇದು ಅನ್ನಿಸದು. ಮೊದಲ ನಿರ್ದೇಶನದಲ್ಲಿಯೇ ಟ್ರೆಂಡ್ ಸೆಟ್ಟರ್ ಸಿನಿಮಾವನ್ನು ರೂಪಿಸಿದ್ದಾರೆ. ವಿಶೇಷವಾಗಿ ಚಿತ್ರದ ರಿ-ರೆಕಾರ್ಡಿಂಗ್ ನಡೆದಿದೆ~ ಎಂದರು.

ನಟಿ ರಾಧಿಕಾ ಪಂಡಿತ್ ಅವರು ಕೂಡ ಗೀತೆಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರು. `ಚಿತ್ರವೊಂದು ಯಶಸ್ವಿಯಾಗುವುದು ಅದರ ಹಾಡುಗಳ ಮೂಲಕ. ಅಲೆಮಾರಿಯ ಧ್ವನಿಮುದ್ರಿಕೆ ಮಾರಾಟ ನೋಡಿದರೆ ಚಿತ್ರ ಯಶಸ್ಸು ಗಳಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ನಾನು ಕೂಡ ಚಿತ್ರ ಬಿಡುಗಡೆಯ ಬಗ್ಗೆ ಕಾತುರಳಾಗಿದ್ದೇನೆ~ ಎಂದು ಸಂಭ್ರಮ ವ್ಯಕ್ತಪಡಿಸಿದರು.

ಚಿತ್ರದಲ್ಲಿ ರಾಕೇಶ್ ಅವರಿಗೆ ಹೊಸ ಇಮೇಜ್ ಸೃಷ್ಟಿಸಿದ ಪಾತ್ರವಿದೆ. ಅವರು ತಮ್ಮ ಪಾತ್ರಕ್ಕಿಂತಲೂ ಹೆಚ್ಚು ಚಿತ್ರದ ಪ್ರಚಾರದ ಕುರಿತು ಮಾತನಾಡಿದರು. `ಚಿತ್ರದ ಪ್ರಚಾರದ ಬಗ್ಗೆ ನಿರ್ದೇಶಕರು ನಿರ್ಮಾಪಕರ ಜತೆ ಚರ್ಚಿಸುತ್ತಿದ್ದೇನೆ. ಕಾಲೇಜುಗಳಿಗೆ ಚಿತ್ರತಂಡ ತೆರಳಿದರೆ ಉತ್ತಮ ಪ್ರತಿಕ್ರಿಯೆ ದೊರೆಯಬಲ್ಲದು~ ಎಂದು ಹೇಳಿದರು. ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸಿರುವ ನಯನಾ ತಮ್ಮ ಅನುಭವಗಳನ್ನು ಹಂಚಿಕೊಂಡರು.   
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT