ADVERTISEMENT

ಇನ್ನೆರಡೇ ನಕ್ಷತ್ರ!

ಅಮಿತ್ ಎಂ.ಎಸ್.
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST
ಇನ್ನೆರಡೇ ನಕ್ಷತ್ರ!
ಇನ್ನೆರಡೇ ನಕ್ಷತ್ರ!   

ನಾನು ಪಂಚಭಾಷಾ ತಾರೆ ಆಗ್ಬೇಕು!  ಮುಖವರಳಿಸಿದರು ನಟಿ ನಿಶಾ ಶೆಟ್ಟಿ. ಅದು ಅವರ ಬಹುಕಾಲದ ಕನಸು ಕೂಡ. ಈಗಾಗಲೇ ತ್ರಿಭಾಷಾ ನಟಿಯಾಗಿ ಗುರುತಿಸಿಕೊಂಡದ್ದಾಗಿದೆ.
 ಇನ್ನು ಎರಡು ನಕ್ಷತ್ರಗಳನ್ನು ಮುಡಿಗೇರಿಸಿಕೊಂಡರೆ ಪಂಚಭಾಷಾ ತಾರೆ! ಆ ದಿನ ದೂರವಿಲ್ಲ ಎನ್ನುವುದು ನಿಶಾ ಆತ್ಮವಿಶ್ವಾಸ. ಈಗಾಗಲೇ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಒಂದು ಹೆಜ್ಜೆ ಇಟ್ಟಿರುವ ಈ ಮಂಗಳೂರಿನ ಬೆಡಗಿ ಸದ್ಯ ಕನ್ನಡದಲ್ಲಿ ಅವಕಾಶಗಳಿಗೆ ಎದುರು ನೋಡುತ್ತಿದ್ದಾರೆ.

ನಿಶಾ ಕನ್ನಡದಲ್ಲಿ ಪ್ರಥಮ ಬಾರಿಗೆ ನಾಯಕಿಯಾಗಿ ನಟಿಸಿರುವ `ಪುನೀತ್~ ತೆರೆಕಾಣಲು ಸಿದ್ಧವಾಗಿದೆ. ಚಿತ್ರದಲ್ಲಿ ಪುಣ್ಯ ಎಂಬ ಮೃದು ಮತ್ತು ಸಂಕೋಚದ ಸ್ವಭಾವದ ಕಾಲೇಜು ಹುಡುಗಿಯ ಪಾತ್ರ ಆಕೆಯದು. ಅವರ ನೈಜ ಸ್ವಭಾವಕ್ಕೆ ಇದು ತದ್ವಿರುದ್ಧ ಪಾತ್ರವಂತೆ. ನಾಯಕಿಯಾಗಿ ಕನ್ನಡದಲ್ಲಿ ಇದು ಮೊದಲ ಚಿತ್ರವಾದರೂ ಕನ್ನಡಕ್ಕೆ ಹೊಸಬರೇನಲ್ಲ.

`ಉಡ~ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಿಶಾ, `ಸೈಲೆನ್ಸ್~ ಎಂಬ ಚಿತ್ರಕ್ಕೆ ನಾಯಕಿಯಾಗಿಯೂ ಆಯ್ಕೆಯಾಗಿದ್ದರು. ಆದರೆ ಚಿತ್ರ ಸೆಟ್ಟೇರಲೇ ಇಲ್ಲ. ಬಳಿಕ ಅವಕಾಶ ಬಂದಿದ್ದು `ಪುನೀತ್~ ಚಿತ್ರದಲ್ಲಿ. `ಗಲಾಟೆ~ ಚಿತ್ರದ ಇಬ್ಬರು ನಾಯಕಿಯರಲ್ಲಿ ನಿಶಾ ಕೂಡ ಒಬ್ಬರು.

ಇದರ ಮಧ್ಯೆಯೇ ನಿಶಾ ತೆಲುಗು - ತಮಿಳು ಚಿತ್ರರಂಗಕ್ಕೆ ಹಾರಿ ಬಂದದ್ದಾಗಿದೆ. `ಫೇಸ್‌ಬುಕ್~ ಎಂಬ ಚಿತ್ರ ತೆಲುಗು ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತೆರೆಕಾಣಲಿದೆ.

`ಹ್ಯಾಪಿ ಡೇಸ್~ ಚಿತ್ರದಂತೆಯೇ ಇದು ಕಾಲೇಜು ಮೆಟ್ಟಿಲೇರುವ ಯುವಜನಾಂಗದ ತುಡಿತಗಳನ್ನು ಬಿಂಬಿಸುವ ಚಿತ್ರವಂತೆ. ತಮಿಳಿನಲ್ಲಿ `ದಿವ್ಯ ಮೀದು ಕಾದಲ್~ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅದರಲ್ಲಿ ಅವರದು ಸಂಪ್ರದಾಯಸ್ಥ ಅಯ್ಯಂಗಾರಿ ಹುಡುಗಿಯ ಪಾತ್ರವಂತೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳನ್ನು ಬಲ್ಲ ನಿಶಾ ಸದ್ಯ ಮಲಯಾಳಂ ಕಲಿಯುತ್ತಿದ್ದಾರಂತೆ.

ಬಿ.ಕಾಂ ಅಂತಿಮ ವರ್ಷ ಓದುತ್ತಿರುವ ನಿಶಾಗೆ ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆ ಪದವಿ ಪೂರ್ಣಗೊಳಿಸಲು ಕಷ್ಟವಾಗುತ್ತಿದೆ. `ಚಿತ್ರರಂಗಕ್ಕೆ ಬರಬೇಕೆಂಬ ಮಹದಾಸೆಯೇನೂ ಇರಲಿಲ್ಲ. ತಂದೆಯ ಸ್ನೇಹಿತರೊಬ್ಬರು `ಉಡ~ ಚಿತ್ರದಲ್ಲಿ ನಟಿಸುವಂತೆ ಒತ್ತಾಯಿಸಿದರು. ಮನೆಯಲ್ಲೂ ಪ್ರೋತ್ಸಾಹ ಸಿಕ್ಕಿತು. ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಲೆ ಮತ್ತೆ ಹಿಂದಿರುಗಿ ನೋಡುವ ಪ್ರಮೇಯ ಬಂದಿಲ್ಲ~ ಎನ್ನುತ್ತಾರೆ.

ತಮ್ಮ ಮಾತೃಭಾಷೆಯಾದ ತುಳು ಚಿತ್ರವೊಂದರಲ್ಲಿ ನಿಶಾ ಬಣ್ಣಹಚ್ಚಲಿದ್ದಾರೆ. ಕೆ.ಮಂಜು ನಿರ್ಮಾಣದ ಚಿತ್ರವೊಂದರ ಕುರಿತೂ ಮಾತುಕತೆ ನಡೆಯುತ್ತಿದೆ.

ಕರ್ನಾಟಕದಲ್ಲೇ ಹುಟ್ಟಿ ಬೆಳೆದ ನಟಿಯರಿಗೆ ಅವಕಾಶಗಳು ಸರಿಯಾಗಿ ಸಿಗುತ್ತಿಲ್ಲ ಎನ್ನುವುದು ನಿಶಾ ಬೇಸರ. ಪರಭಾಷಾ ನಟಿಯರಿಗೆ ಇಲ್ಲಿ ಮಣೆಹಾಕಲಾಗುತ್ತದೆ. ಹೀಗಾಗಿ ನನ್ನಂಥ ನವ ನಟಿಯರು ಅನಿವಾರ್ಯವಾಗಿ ಬೇರೆ ಭಾಷೆ ಚಿತ್ರಗಳತ್ತ ಮುಖಮಾಡಬೇಕಾಗುತ್ತದೆ ಎಂದು ತುಸು ಕೋಪದಿಂದಲೇ ನುಡಿಯುತ್ತಾರೆ.

ಅಂದಹಾಗೆ ನಿಶಾ ನಟಿ ರಮ್ಯಾ ಅವರ ಪಕ್ಕಾ ಅಭಿಮಾನಿ. ರಮ್ಯಾ ಅವರಂತೆಯೇ ಚಿತ್ರರಂಗದಲ್ಲಿ ಬೆಳೆಯುವ ಬಯಕೆ ಅವರದು. ಯೋಗರಾಜ್ ಭಟ್, ಸೂರಿ, ನಾಗತಿಹಳ್ಳಿ ಚಂದ್ರಶೇಖರ್‌ರಂತಹ ನಿರ್ದೇಶಕರ ಚಿತ್ರದಲ್ಲಿ ನಟಿಸುವ ಆಸೆಯೂ ಇದೆ. ಗ್ಲಾಮರಸ್ ಪಾತ್ರಗಳಿಗೆ ಸೀಮಿತವಾಗದೆ ಕಲಾತ್ಮಕ ಚಿತ್ರಗಳಲ್ಲಿಯೂ ಹೆಸರು ಮಾಡಬೇಕು ಎಂಬುದು ಅವರ ಕನಸು. ಈ ಎಲ್ಲಾ ಬಯಕೆಗಳಿಗೆ `ಪುನೀತ್~ ಚಿತ್ರ ಅಡಿಗಲ್ಲು ಹಾಕಲಿದೆ. ಚಿತ್ರರಂಗ ತಮ್ಮನ್ನು ಗುರುತಿಸುತ್ತದೆ ಎಂಬ ಭರವಸೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.