ADVERTISEMENT

‘ಎಟಿಎಂ’ನಲ್ಲಿ ಪ್ರೀತಿಯ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಚಂದು ಬಿ. ಗೌಡ, ಶೋಭಿತಾ
ಚಂದು ಬಿ. ಗೌಡ, ಶೋಭಿತಾ   

‘ಇದು ನೈಜ ಘಟನೆ ಆಧಾರಿತ ಸಿನಿಮಾ. ಆದ್ರೆ ಚಿತ್ರದಲ್ಲಿ ಒಂದೂ ಕೊಲೆ ನಡೆಯುವುದಿಲ್ಲ. ಮಹಿಳೆಯ ಕೊಲೆ ಯತ್ನ ನಡೆಯುತ್ತದಷ್ಟೇ’ ಎಂದು ನಿರ್ದೇಶಕ ಅಮರ್ ಮಾತಿಗಿಳಿದರು.

ಅದು ‘ಎಟಿಎಂ’ ಚಿತ್ರದ ಸುದ್ದಿಗೋಷ್ಠಿ. ಮೊದಲ ಸಿನಿಮಾ ನಿರ್ದೇಶಿಸಿದ ಖುಷಿಯಲ್ಲಿದ್ದರು ಅಮರ್‌. ಮೂರ್ನಾಲ್ಕು ಕಿರುಚಿತ್ರ ನಿರ್ಮಿಸಿದ ಅನುಭವ ಅವರಿಗಿದೆ. ಎಟಿಎಂ ಚಿತ್ರದ ಸಂಕ್ಷಿಪ್ತ ರೂಪ ‘ಅಟೆಂಪ್ಟ್‌ ಟು ಮರ್ಡರ್‌’.

ಎಟಿಎಂನಲ್ಲಿ ಮಹಿಳೆಯ ಮೇಲೆ ನಡೆದ ಕೊಲೆ ಯತ್ನ ಆಧರಿಸಿ ಸಿನಿಮಾ ಮಾಡಲಾಗಿದೆಯೇ? ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ‘ಕಥೆಯ ಎಳೆ ಹೇಳಲು ಸಾಧ್ಯವಿಲ್ಲ. ಆದರೆ, ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯ ಎಳೆಯನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ’ ಎಂದಷ್ಟೇ ಉತ್ತರಿಸಿದರು.

ADVERTISEMENT

‘ಇದು ಭಿನ್ನವಾದ ಚಿತ್ರ. ರಕ್ತದ ಕಲೆಗಳು ಕಾಣಸಿಗುವುದಿಲ್ಲ. ಭಯ ಹುಟ್ಟಿಸುವ ದೃಶ್ಯಗಳಿಲ್ಲ’ ಎಂದ ಅವರ ಮಾತಿನಲ್ಲಿ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಇತ್ತು.

ಹಲವು ಧಾರಾವಾಹಿಗಳಲ್ಲಿ ನಟಿಸಿ ಸಿನಿಮಾ ಪ್ರವೇಶಕ್ಕೆ ಹಂಬಲಿಸುತ್ತಿದ್ದ   ಚಂದು ಬಿ. ಗೌಡ  ಅವರಿಗೂ ಇದು ಮೊದಲ  ಸಿನಿಮಾ.

‘ಎರಡು ವರ್ಷಗಳಿಂದಲೂ ಕಿರುತೆರೆಯಲ್ಲಿದ್ದೇನೆ. ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ’ ಎಂದು ಸಂತಸ ಹಂಚಿಕೊಂಡರು.

‘ಕ್ರೈಂ ಮತ್ತು ಪ್ರೀತಿಯನ್ನು ಒಟ್ಟಿಗೆ ಸೇರಿಸಿ ಸಿನಿಮಾ ನಿರ್ಮಿಸಲಾಗಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.

ನಾಯಕಿ ಶೋಭಿತಾ, ‘ಇದು ನನ್ನ ಮೊದಲ ಸಿನಿಮಾ. ಒಳ್ಳೆಯ ಪಾತ್ರ ಸಿಕ್ಕಿದೆ. ನಾನು ಐಟಿ ಕಂಪೆನಿಯ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಮಾತು ಮುಗಿಸಿದರು.

ಬೆಂಗಳೂರು, ಮೈಸೂರು, ಬನ್ನೇರುಘಟ್ಟದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್‌.ವಿ. ನಾರಾಯಣ ಮತ್ತು ಎಸ್‌.ವಿ. ಕೃಷ್ಣಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿದೇವ್ ಮತ್ತು ಜೀತ್‌ಸಿಂಗ್ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.