ಕನಕಪುರ ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ಎರಡು ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವುಗಳಲ್ಲಿ ನಟ ಉಪೇಂದ್ರ ಕಥೆ, ಚಿತ್ರಕಥೆ ಬರೆದಿರುವ `ಟೋಪಿವಾಲ~ ಒಂದು. ಚಿತ್ರದ ಚಿತ್ರೀಕರಣ ಇದೇ ತಿಂಗಳ ಹನ್ನೆರಡರಿಂದ ಆರಂಭವಾಗಲಿದೆ. ಪಿ.ವಾಸು ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಇನ್ನೊಂದು ಚಿತ್ರಕ್ಕೆ ಜೂನ್‌ನಲ್ಲಿ ಚಿತ್ರೀಕರಣ ನಡೆಯಲಿದೆ.
ಆರು ವರ್ಷಗಳಿಂದ ಪುನೀತ್‌ಗಾಗಿ ಕಾದಿದ್ದ ಕನಕಪುರ ಶ್ರೀನಿವಾಸ್ ಅವರಿಗೆ ಈಗ ಕಾಲ್‌ಷೀಟ್ ದೊರಕಿರುವುದು ಸಂತಸ ತಂದಿದೆ. ಅವರ `ಮಯೂರ~ ಚಿತ್ರದಲ್ಲಿ ಪುನೀತ್ ಅಭಿನಯಿಸಬೇಕಿತ್ತು. ನಿರ್ದೇಶಕ ಶೋಭನ್ ಅವರ ಅಕಾಲಿಕ ಮರಣದಿಂದಾಗಿ ಈ ಚಿತ್ರ ಸ್ಥಗಿತಗೊಂಡಿತ್ತು. ಅಲ್ಲಿಂದ ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದ ನಿರ್ಮಾಪಕರಿಗೆ ಈಗ ಕಾಲ ಕೂಡಿ ಬಂದಿದೆ.
ಉಪೇಂದ್ರ ಅಭಿನಯದ `ಟೋಪಿವಾಲ~ ಚಿತ್ರವನ್ನು ಶ್ರೀನಿವಾಸ್(ಶ್ರೀನಿ) ನಿರ್ದೇಶಿಸುತ್ತಿದ್ದಾರೆ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಇವರಿಗೆ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವವೂ ಇದೆ. ಹಿರಿತೆರೆಯಲ್ಲಿ ಇದು ಚೊಚ್ಚಿಲ ಯತ್ನ. ಚಿತ್ರಕ್ಕೆ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.