ADVERTISEMENT

‘ಕಾಜಲ್‌’ ಗೌರವಕ್ಕೆ ಧೂಮಪಾನ ಬಿಟ್ಟವರು!

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಸಿಮ್ರನ್‌
ಸಿಮ್ರನ್‌   

ಸುಮಂತ್‌ ಕ್ರಾಂತಿ ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸಾಹದಿಂದಲೇ ಮಾತನಾಡುತ್ತಿದ್ದರು. ಪಕ್ಕದಲ್ಲಿ ಕೂತಿದ್ದ ಸಿಮ್ರಾನ್‌ ತಮ್ಮ ಕುರಿತಾಗಿಯೇ ಮಾತನಾಡುತ್ತಿದ್ದರೂ ಒಂದಕ್ಷರವೂ ಅರ್ಥವಾಗದೇ ಪಿಳಿಪಿಳಿ ಕಣ್ಣುಮಿಟುಕಿಸಿಕೊಂಡು ಕೂತಿದ್ದರು. ನಾಯಕ ನಟ ಸಂತೋಷ್‌ ಆಗಾಗ ಕಿವಿಯಲ್ಲಿ ಉಸುರಿದಾಗ ಮಾತ್ರ ಅವರ ಮುಖದಲ್ಲಿ ತೆಳುವಾಗಿ ನಗು ಅರಳುತ್ತಿತ್ತು.

ಆ ಹುಡುಗಿಯ ಮುಖವನ್ನು ಎಲ್ಲೋ ನೋಡಿದ ನೆನಪು. ಮೈಕ್‌ ಹಿಡಿದುಕೊಂಡು ಎದ್ದು ನಿಂತು ಒಮ್ಮೆ ಸುತ್ತಲೂ ಕಣ್ಣಾಡಿಸಿದಾಗ ಒಮ್ಮೆಲೇ ಬೆಳಕು ಹೊತ್ತಿಕೊಂಡಂತೆ ನೆನಪಾಯ್ತು. ಪ್ರತಿ ಸಿನಿಮಾ ನೋಡುವಾಗಲೂ ಚಿತ್ರಮಂದಿರದಲ್ಲಿ ‘ನೋ ಸ್ಮೋಕಿಂಗ್‌’ ಜಾಹೀರಾತನ್ನು ನೋಡಿಯೇ ಇರುತ್ತೇವೆ. ತಂದೆ, ಮಗಳ ಮುಖ ನೋಡಿ ಕೈಯಲ್ಲಿದ್ದ ಸಿಗರೇಟ್‌ ಎಸೆಯುವ ಜಾಹೀರಾತೊಂದಿದೆಯಲ್ಲ. ಅದರಲ್ಲಿನ ಪುಟಾಣಿ ಹುಡುಗಿಯೇ ಈ ಸಿಮ್ರಾನ್‌!

(ಸುಮಂತ್‌ ಕ್ರಾಂತಿ)

ADVERTISEMENT

ಅದು ‘ಕಾಜಲ್‌’ ಸಿನಿಮಾ ಪತ್ರಿಕಾಗೋಷ್ಠಿ. ಆನೇಕಲ್‌ ಬಾಲರಾಜ್‌ ತಮ್ಮ ಮಗನ ಮತ್ತೊಂದು ಸಿನಿಮಾವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದುವರೆಗೆ ಮಾಸ್‌ ಲುಕ್‌ನಲ್ಲಿಯೇ ಕಾಣಿಸಿಕೊಂಡಿದ್ದ ಸಂತೋಷ್‌ ಈಗ ಲವರ್‌ಬಾಯ್‌ ಆಗಿ ಬದಲಾಗುವ ಹಂಬಲದಲ್ಲಿದ್ದಾರೆ. ಅವರ ಇಮೇಜ್‌ ಬದಲಾಯಿಸುವ ಹೊಣೆಗಾರಿಕೆಯನ್ನು ನಿರ್ದೇಶಕ ಸುಮಂತ್‌ ಕ್ರಾಂತಿ ಹೊತ್ತುಕೊಂಡಿದ್ದಾರೆ.

‘ಈ ಚಿತ್ರದ ನಾಯಕಿ ಸಿಗರೇಟು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಕುರಿತು ಸಾಮಾಜಿಕ ಜಾಗೃತಿಯ ಜಾಹೀರಾತು ಮಾಡಿದವರು. ಅವರಿಗೆ ಗೌರವ ಸೂಚಿಸಲು ಚಿತ್ರತಂಡದ ಎಲ್ಲರೂ ಚಿತ್ರೀಕರಣ ಸಂದರ್ಭದಲ್ಲಿ ಸಿಗರೇಟು ಸೇದುವುದಿಲ್ಲ ಎಂದು ನಿರ್ಧರಿಸಿದ್ದೇವೆ’ ಎಂದೂ ಅವರು ಘೋಷಿಸಿದರು.

ಸೈಕಲ್‌, ಕತ್ತೆ, ಕೋಳಿಗಳ ಜತೆಗೆ ನಾಯಕ, ನಾಯಕಿ ಇರುವ ಪೋಸ್ಟರ್‌ ಒಂದನ್ನು ವೇದಿಕೆಯ ಪಕ್ಕದಲ್ಲಿ ಇರಿಸಲಾಗಿತ್ತು. ಅದನ್ನು ಇಟ್ಟುಕೊಂಡೇ ಮಾತಿಗಿಳಿದರು ಸುಮಂತ್‌.

(ಗುರುಕಿರಣ್‌)

‘ಇದೊಂದು ಪ್ರೇಮಕಥೆ. ತುಂಬ ಭಿನ್ನವಾಗಿದೆ. ವಿದೇಶದಿಂದ ಹಳ್ಳಿಗೆ ಬಂದ ನಾಯಕಿಗೆ ಕತ್ತೆಮರಿ ಎಂದರೆ ಪ್ರಾಣ. ಅದನ್ನು ನಾಯಕ ಅವಳಿಗೆ ತಂದುಕೊಟ್ಟಿರುತ್ತಾನೆ. ಚಿತ್ರದಲ್ಲಿ ಕತ್ತೆಗೊಂದು ಮಹತ್ವದ ಪಾತ್ರವಿದೆ’ ಎಂದು ಅವರು ತಮಾಷೆಯ ಧ್ವನಿಯಲ್ಲಿಯೇ ವಿವರಿಸಿದರು. ಬಹುತೇಕ ಚಿತ್ರೀಕರಣವನ್ನು ಹೊನ್ನಾವರದಲ್ಲಿಯೇ ಚಿತ್ರೀಕರಿಸಲು ಯೋಜಿಸಿಕೊಂಡಿದ್ದಾರೆ.

ನಾಯಕ ಸಂತೋಷ್‌ ಅವರ ಮಾತಿನಲ್ಲಿ ತಮ್ಮ ಹಳೆಯ ಮಾಸ್‌ ಇಮೇಜ್‌ನಿಂದ ಕಳಚಿಕೊಳ್ಳುವ ಹಂಬಲ ಎದ್ದು ಕಾಣುತ್ತಿತ್ತು. ‘ಇದು ನನ್ನ ಐದನೇ ಸಿನಿಮಾ. ಹಿಂದಿನ ಎಲ್ಲ ಸಿನಿಮಾಗಳಲ್ಲಿಯೂ ಮಾಸ್‌ ಲುಕ್‌ನಲ್ಲಿಯೇ ಕಾಣಿಸಿಕೊಂಡಿದ್ದೆ. ಈ ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರ. ಇದರಲ್ಲಿಯೂ ಎರಡು ಫೈಟ್‌ಗಳು ಇವೆ. ಆದರೆ ಇದು ಪೂರ್ತಿಯಾಗಿ ಪ್ರೇಮಕಥೆ. ಹೊಸ ರೀತಿಯ ಪಾತ್ರಕ್ಕೆ ನನ್ನನ್ನು ನಿರ್ದೇಶಕರು ಸಜ್ಜುಗೊಳಿಸುತ್ತಿದ್ದಾರೆ’ ಎಂದರು.

‘ಕತ್ತೆ, ಕೋಳಿಗಳ ಜತೆ ಫೋಟೊಶೂಟ್‌ ಮಾಡಿಸಿಕೊಂಡ ಅನುಭವ ಚೆನ್ನಾಗಿತ್ತು’ ಎಂದರು ನಾಯಕಿ ಸಿಮ್ರಾನ್‌.

ಸಂತೋಷ್‌ ನಾಯಕ್‌ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅವಿಕಾ ರಾಠೋಡ್‌ ಎಂಬ ಪುಟಾಣಿ, ನಾಯಕಿಯ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುರುಕಿರಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

(ಸಂತೋಷ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.