ADVERTISEMENT

ಕಾಡಿನ ಉಳಿವಿಗೆ ಕಿಚ್ಚು

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
‘ಕಿಚ್ಚು’ ಚಿತ್ರದಲ್ಲಿ ಅಭಿನಯ ಮತ್ತು ಧ್ರುವ ಶರ್ಮ
‘ಕಿಚ್ಚು’ ಚಿತ್ರದಲ್ಲಿ ಅಭಿನಯ ಮತ್ತು ಧ್ರುವ ಶರ್ಮ   

‘ಅರಣ್ಯ ಸಂರಕ್ಷಣೆ ಕುರಿತ ಚಿತ್ರ ಇದು. ಗಿರಿಜನರಲ್ಲಿ ಕಾಡಿನ ಬಗ್ಗೆ ಇರುವ ಕಾಳಜಿಯೂ ಇದರಲ್ಲಿ ಮಿಳಿತವಾಗಿದೆ’ ಎಂದು ಮಾತಿಗಿಳಿದರು ನಿರ್ದೇಶಕ ಪ್ರದೀಪ್‌ ರಾಜ್. ಕೆಲ ಕ್ಷಣದಲ್ಲಿಯೇ ಚಿತ್ರದ ನಾಯಕ ನಟ ಧ್ರುವ ಶರ್ಮ ಅವರನ್ನು ನೆನೆದು ಭಾವುಕರಾದರು.

ವಾಕ್‌ ಮತ್ತು ಶ್ರವಣದೋಷವುಳ್ಳ ನಟಿ ಅಭಿನಯ ಮತ್ತು ಧ್ರುವ ಶರ್ಮ ನಟಿಸಿರುವ ‘ಕಿಚ್ಚು’ ಚಿತ್ರ ಈ ವಾರ (ಮೇ 4) ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಭದ್ರಾ ಅರಣ್ಯ ಪ್ರದೇಶದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಧ್ರುವ ಮತ್ತು ಅಭಿನಯ ಅವರ ಸುತ್ತವೇ ಕಥೆ ಹೆಣೆಯಲಾಗಿದೆ. ಅವರ ಭಾವಕ್ಕೆ ತಕ್ಕಂತೆ ಅವರಿಂದಲೇ ಮಾತಿನ ಮರುಲೇಪನ ಕೂಡ ಮಾಡಿಸಲಾಗಿದೆ. ಕಾಡು ಉಳಿಸುವ ಕಥೆ ಇದು’ ಎಂದರು. ಪ್ರದೀಪ್‌ ರಾಜ್. ನಟ ಸುದೀಪ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ರಾಗಿಣಿ ದ್ವಿವೇದಿ ತೂಕ ಇಳಿಸಿಕೊಂಡಿದ್ದಾರಂತೆ.

ADVERTISEMENT

ಗ್ಲಾಮರ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಮೊದಲ ಬಾರಿಗೆ ಪ್ರಯೋಗಾತ್ಮಕ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಸುದೀಪ್ ಪಾತ್ರದ ಬಗ್ಗೆ ಚಿತ್ರತಂಡ ಸಸ್ಪೆನ್ಸ್‌ ಕಾಯ್ದುಕೊಂಡಿದೆ. ‘ಯಾವುದೇ ಚಿತ್ರದಲ್ಲಿ ನಟಿಸಿದರೂ ನನ್ನದು ರೆಬೆಲ್ ಮನಸ್ಥಿತಿ. ಈ ಚಿತ್ರದಲ್ಲಿಯೂ ಅಂತಹ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು ನಟಿ ರಾಗಿಣಿ.

ಮೊದಲ ಬಾರಿಗೆ ಪ್ರಯೋಗಾತ್ಮಕ ಪಾತ್ರವೊಂದರಲ್ಲಿ ಅಭಿನಯಿಸಿದ ಖುಷಿ ಅವರ ಮೊಗದಲ್ಲಿತ್ತು. ಅದನ್ನು ಅವರು ಖುಷಿಯಿಂದಲೇ ಹೇಳಿಕೊಂಡರು. ‘ಪಾತ್ರ ನಿರ್ವಹಣೆಗೆ ನಿರ್ದೇಶಕರು ಕೋರಿಕೊಂಡಾಗ ನನ್ನಿಂದ ಇಂತಹ ಪಾತ್ರ ನಿಭಾಯಿಸಲು ಸಾಧ್ಯವೇ ಎಂದು ಆತ್ಮವಿಮರ್ಶೆ ಮಾಡಿಕೊಂಡೆ. ಅಕ್ಷರಶಃ ಇದು ನನಗೆ ಸವಾಲಿನ ಪಾತ್ರ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

‘ನನ್ನದು ಈ ನೆಲದ ಸಂಸ್ಕೃತಿ ಬಿಂಬಿಸುವ ಪಾತ್ರ. ಗಿರಿಜನ ಮಹಿಳೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ತೃಪ್ತಿಯಿದೆ. ಚಿತ್ರದ ಮೂಲಕ ಕಾರ್ಮಿಕರ ಸಂಕಷ್ಟ ಅರಿಯಲು ಸಾಧ್ಯವಾಯಿತು’ ಎಂದರು.

ಸಾಯಿಕುಮಾರ್, ಸುಚೇಂದ್ರ ಪ್ರಸಾದ್ ತಾರಾಗಣದಲ್ಲಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಕೈಲಾಶ್‌ ಖೇರ್, ವಿಜಯ ಪ್ರಕಾಶ್‌, ಶ್ರೇಯಾ ಘೋಷಾಲ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.