ADVERTISEMENT

‘ಕಾಲೇಜು ಕುಮಾರ’ನ ಹಾಡ ಹೊನಲು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ವಿಕ್ಕಿ ಮತ್ತು ಸಂಯುಕ್ತ ಹೆಗಡೆ
ವಿಕ್ಕಿ ಮತ್ತು ಸಂಯುಕ್ತ ಹೆಗಡೆ   

ಅದು ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೆಚ್ಚಾಗಿ ನಡೆಯುವ ಸಭಾಂಗಣ. ಆದರೆ ಅಂದು ಅಲ್ಲಿ ಕಾಲೇಜು ವಾತಾವರಣ ಏರ್ಪಟ್ಟಿತ್ತು. ಕಾಲೇಜು ಹುಡುಗರ ಹುರುಪು, ಮೇಷ್ಟ್ರುಗಳ ಪೀಕಲಾಟ, ಸುಂದರ ಹುಡುಗಿಯರು, ಪೋಲಿ ಹುಡುಗರ ಪಡೆ ಎಲ್ಲವೂ ಅಲ್ಲಿತ್ತು. ಅವರ ಉತ್ಸಾಹವನ್ನು ಹೆಚ್ಚಿಸಲು ಆಗಾಗ ಕೇಳಿಬರುತ್ತಿದ್ದ ಹಾಡು.

(ಶ್ರುತಿ)

ಅದು ‘ಕಾಲೇಜು ಕುಮಾರ’ ಚಿತ್ರದ ಆಡಿಯೊ ಸಿ.ಡಿ. ಬಿಡುಗಡೆ ಸಮಾರಂಭ. ಇಂಥ ಕಾರ್ಯಕ್ರಮಗಳಿಗೆ ಒಂದೋ ಎರಡೊ ಮುಖ್ಯ ಅತಿಥಿಗಳನ್ನು ಆಹ್ವಾನಿಸುವುದು ವಾಡಿಕೆ. ಆದರೆ ಅಲ್ಲಿ ಸಿನಿಮಾದ ಐದು ಹಾಡುಗಳನ್ನು ಬಿಡುಗಡೆ ಮಾಡಲು ಐದು ಜನ ಗಣ್ಯರನ್ನು ಆಹ್ವಾನಿಸಲಾಗಿತ್ತು. ಅದರ ಜತೆಗೆ ಒಂದೊಂದು ಹಾಡಿಗೂ ನೃತ್ಯಗಾರರು ಹೆಜ್ಜೆ ಹಾಕಿದರು. ಒಟ್ಟಾರೆ ಅಲ್ಲಿ ಯಾವುದೋ ಕಾಲೇಜಿನ ವಾರ್ಷಿಕೋತ್ಸವದ ಸಂಭ್ರಮ ಮನೆಮಾಡಿದಂತಿತ್ತು.

ADVERTISEMENT

‘ಹಾಡುಗಳೆಲ್ಲ ಚೆನ್ನಾಗಿ ಬಂದಿವೆ’ ಎಂದು ಹೇಳಿಕೊಂಡ ನಿರ್ದೇಶಕ ಅಲೆಮಾರಿ ಸಂತು ಆ ಎಲ್ಲ ಶ್ರೇಯವನ್ನು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರ ಹೆಗಲಿಗೆ ವರ್ಗಾಯಿಸಿದರು. ‘ಕಾಲೇಜು ಕುಮಾರ ಸಿನಿಮಾ ನಿರ್ಮಾಣವಾಗಲು ಕಾರಣರಾದವರೇ ಅರ್ಜುನ್‌ ಜನ್ಯ. ಈ ಕಥೆಯನ್ನು ಅವರ ಬಳಿ ಹೇಳಿಕೊಂಡಿದ್ದೆ. ಅದಕ್ಕೆ ಅವರೇ ನಿರ್ಮಾಪಕ ಪದ್ಮನಾಭ್‌ ಅವರ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದರು. ಅದರ ಪರಿಣಾಮವಾಗಿ ನಾವು ಇಲ್ಲಿಯವರೆಗೆ ಬಂದು ನಿಂತಿದ್ದೇವೆ’ ಎಂದು ಸ್ಮರಿಸಿಕೊಂಡರು.

(ಅರ್ಜುನ್‌ ಜನ್ಯ)

ತಂದೆ ಮತ್ತು ಮಗನ ನಡುವಿನ ಭಾವುಕ ಮತ್ತು ಸಂಘರ್ಷದ ಕಥೆಯನ್ನು ನಿರ್ದೇಶಕರು ಇಲ್ಲಿಹೇಳಹೊರಟಿದ್ದಾರಂತೆ. ‘ಒಂದು ಮನೆಗೆ ನಾಲ್ಕು ಮೂಲೆಗಳ ಎಷ್ಟು ಮುಖ್ಯವೋ ಅದೇ ರೀತಿ ನಮ್ಮ ಚಿತ್ರದಲ್ಲಿ ರವಿಶಂಕರ್‌, ಶ್ರುತಿ, ವಿಕ್ಕಿ ಮತ್ತು ಸಂಯುಕ್ತಾ ಹೆಗಡೆ ನಾಲ್ಕು ಸ್ತಂಭಗಳಂತಿದ್ದಾರೆ. ಇವರ ಪಾತ್ರಗಳ ಮೂಲಕವೇ ನಮ್ಮ ಕಥೆ ಬೆಳೆಯುತ್ತದೆ. ಚಿತ್ರದಲ್ಲಿ ಯಾರೂ ಹೀರೊ ಇಲ್ಲ. ಕಥೆಯೇ ಹೀರೊ’ ಎಂಬುದು ಅವರ ವಿವರಣೆ.

ಹಾಡುಗಳ ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ ಪದ್ಮನಾಭ ಅವರು ಅರ್ಜುನ್‌ ಜನ್ಯ ಅವರ ಸಂಯೋಜನೆಯ ಹಾಡುಗಳನ್ನು ಹೊಗಳುವುದಕ್ಕಾಗಿಯೇ ತಮ್ಮ ಮಾತುಗಳನ್ನು ಮೀಸಲಿಟ್ಟರು. ‘ಸಿನಿಮಾದ ತುಂಬೆಲ್ಲ ಅರ್ಜುನ್‌ ಜನ್ಯ ತುಂಬಿದ್ದಾರೆ. ಒಂದೊಂದು ಹಾಡೂ ಅದ್ಭುತವಾಗಿದೆ’ ಎಂದು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

(ಸಂತು)

ಯುವ ಗಾಯಕ ಸಂಚಿತ್‌ ಹೆಗ್ಡೆ ಈ ಚಿತ್ರ ಶೀರ್ಷಿಕೆ ಗೀತೆಗೆ ಧ್ವನಿಯಾಗಿದ್ದಾರೆ. ಈ ಹಾಡನ್ನು ವಿ. ನಾಗೇಂದ್ರಪ್ರಸಾದ್‌ ಬರೆದಿದ್ದಾರೆ.

ನಟಿ ಮಾಲಾಶ್ರೀ, ಧ್ರುವ ಸರ್ಜಾ, ಸಾ.ರಾ. ಗೋವಿಂದು, ಶ್ರುತಿ ಅವರ ತಂದೆ ಕೃಷ್ಣ ಎಲ್ಲರೂ ಒಂದೊಂದು ಹಾಡನ್ನು ಬಿಡುಗಡೆ ಮಾಡಿದರು. ನಿರ್ಮಾಪಕ ಪದ್ಮನಾಭ್‌ ಕೂಡ ವೇದಿಕೆಯ ಮೇಲೆ ಹೆಜ್ಜೆ ಹಾಕಿದರು. ಡೈಲಾಗ್‌ಗಳ ಮೂಲಕವೇ ಶಿಳ್ಳೆ ಗಿಟ್ಟಿಸಿಕೊಂಡರು ಧ್ರುವ ಸರ್ಜಾ.

(ರವಿಶಂಕರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.