ADVERTISEMENT

ಕಿಲಾಡಿ ಕಿಟ್ಟಿಯ ಬ್ಯಾಟಿಂಗ್!

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST
ಕಿಲಾಡಿ ಕಿಟ್ಟಿಯ ಬ್ಯಾಟಿಂಗ್!
ಕಿಲಾಡಿ ಕಿಟ್ಟಿಯ ಬ್ಯಾಟಿಂಗ್!   

ಸಂಭ್ರಮದ ಕಳೆ ತುಂಬಿದ್ದ ಮುಖದೊಂದಿಗೆ `ಕಿಲಾಡಿ ಕಿಟ್ಟಿ~ ಚಿತ್ರತಂಡ ಸುದ್ದಿಮಿತ್ರರಿಗೆ ಎದುರಾಯಿತು. ಕಳೆದ ವಾರವಷ್ಟೇ ಹಾಡುಗಳ ಧ್ವನಿಸುರುಳಿ ಬಿಡುಗಡೆ ಮಾಡಿದ್ದ ಚಿತ್ರತಂಡ ಆ ದಿನದ ಖುಷಿಯನ್ನು ಮತ್ತೆ ಹಂಚಿಕೊಳ್ಳಲು ಕಾರಣವಿತ್ತು. `ಕಿಲಾಡಿ ಕಿಟ್ಟಿ~ಯ ಹಾಡುಗಳ ಸಿ.ಡಿ.ಯನ್ನು ಬಿಡುಗಡೆ ಮಾಡಿದ್ದು ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್.
 
ನಿರ್ಮಾಪಕ ಶಿವಕುಮಾರ್ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಜೊತೆ ಬ್ಯಾಟ್ ಹಿಡಿದು ಆಡಿದವರು. ಹೀಗಾಗಿ ಅವರ ಗೆಳೆತನದ ಸಂಪರ್ಕದ ಮೂಲಕ ಕ್ರಿಸ್ ಗೇಲ್‌ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರಿಗೆ ಸಾಧ್ಯವಾಗಿದ್ದು.

`ಕಿಲಾಡಿ ಕಿಟ್ಟಿ~ಯ ಚಿತ್ರೀಕರಣ ಪೂರ್ಣಗೊಂಡಿದ್ದು ಅಳಿದುಳಿದ ಕೆಲಸಗಳಷ್ಟೇ ಬಾಕಿ ಇದೆ. ಅದನ್ನೂ ಬೇಗನೆ ಪೂರ್ಣಗೊಳಿಸಿ ಇದೇ ತಿಂಗಳ ಕೊನೆಯ ವಾರದೊಳಗೆ ಕಿಟ್ಟಿಯ ಕಿಲಾಡಿತನವನ್ನು ಚಿತ್ರಮಂದಿರದಲ್ಲಿ ತೋರಿಸುವುದು ಚಿತ್ರತಂಡದ ಉದ್ದೇಶ.

ತೆಲುಗಿನ `ಬ್ಲೇಡ್ ಬಾಬ್ಜಿ~ಯ ಕನ್ನಡ ಅವತರಣಿಕೆ ಈ ಕಿಟ್ಟಿ. ಚಿತ್ರದಲ್ಲಿ ನಗಿಸುವ ಸನ್ನಿವೇಶಗಳೇ ತುಂಬಿದೆಯಂತೆ. ಮೈಸೂರು, ಮಲ್ಪೆ, ಹಂಪಿ, ಬೆಂಗಳೂರುಗಳಲ್ಲಿ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ತೆಲುಗಿನಲ್ಲಿ ಐದು ಪೈಸೆ ವಿಚಾರವನ್ನು ಇಪ್ಪತ್ತೈದು ಪೈಸೆಯಂತೆ ತೋರಿಸುತ್ತಾರೆ. ಆದರೆ ನಾವು ಹಾಗೆ ಮಾಡುವುದಿಲ್ಲ.

ಜನರಿಗೆ ಏನು ಬೇಕೋ ಅದನ್ನಷ್ಟೇ ನೀಡಿದ್ದೇವೆ ಎಂದ ನಾಯಕ ಶ್ರೀನಗರ ಕಿಟ್ಟಿ, ಇದೊಂದು ಪರಿಪೂರ್ಣ ಮನರಂಜನಾತ್ಮಕ ಸಿನಿಮಾ ಎಂದರು.

ಪರಭಾಷೆ ಚಿತ್ರಗಳಲ್ಲೇ ಹೆಚ್ಚು ಬಿಜಿಯಾಗಿರುವ ಕನ್ನಡತಿ ಹರಿಪ್ರಿಯಾಗೆ ಮೇ ಅತಿ ಸಂಭ್ರಮದ, ನಿರೀಕ್ಷೆಯ ಮತ್ತು ಉದ್ವೇಗ ಹೆಚ್ಚಿಸಿರುವ ತಿಂಗಳಂತೆ. ಕಾರಣ ಕಿಲಾಡಿ ಕಿಟ್ಟಿ ಸೇರಿದಂತೆ ಅವರ ಮೂರು ಚಿತ್ರಗಳು ಈ ಮಾಸದಂದು ಬಿಡುಗಡೆಯಾಗುತ್ತಿವೆ.

ಇದುವರೆಗಿನ ಚಿತ್ರಗಳಲ್ಲಿ ತಮಗಾಗುತ್ತಿದ್ದ ಬೇಸರ ಈ ಚಿತ್ರದಲ್ಲಿ ನಿವಾರಣೆಯಾಗಿದೆ ಎಂದು ಖುಷಿಯಿಂದ ಹೇಳಿಕೊಂಡರು. ಬೇರೆ ಚಿತ್ರಗಳಲ್ಲಿ ಉತ್ತಮ ಕೊರಿಯೊಗ್ರಾಫರ್ ಸಿಕ್ಕಿದರೆ ಹಾಡು ಚೆನ್ನಾಗಿರುತ್ತಿರಲಿಲ್ಲ. ಒಳ್ಳೆ ಹಾಡು ಸಿಕ್ಕರೆ ಕೊರಿಯೊಗ್ರಫಿ ಚೆನ್ನಾಗಿ ಇರುತ್ತಿರಲಿಲ್ಲ. ಆದರೆ ಈ ಚಿತ್ರದಲ್ಲಿ ತಾಳ ಮೇಳ ಎಲ್ಲವೂ ಕೂಡಿಬಂದಿದೆ ಎಂದು ನಕ್ಕರು.

ಸಂಗೀತ ನೀಡಿರುವ ಜೆಸ್ಸಿಗಿಫ್ಟ್ ಸಂಪೂರ್ಣ ಹಾಸ್ಯಮಯ ಚಿತ್ರಕ್ಕೆ ಸಂಗೀತ ನೀಡಿರುವುದು ಇದೇ ಮೊದಲು ಎಂದರು. ಚಿತ್ರೀಕರಣವನ್ನು ಎಂಜಾಯ್ ಮಾಡಿದ್ದಾಗ ನಟಿ ನಿವೇದಿತಾ ಹೇಳಿಕೊಂಡರು. ಚಿತ್ರದ ವಿವರಣೆ ನೀಡುವ ಹೊಣೆಯನ್ನು ಕಿಟ್ಟಿಗೆ ಒಪ್ಪಿಸಿದ್ದ ನಿರ್ದೇಶಕ ಅನಂತ ರಾಜು ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.