ADVERTISEMENT

ಕೋಮಲ್ ವಾರೆನೋಟ!

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 10:15 IST
Last Updated 30 ಡಿಸೆಂಬರ್ 2010, 10:15 IST

ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುವುದನ್ನು ಬಿಟ್ಟಿರುವ ಕೋಮಲ್‌ಕುಮಾರ್‌ಗೆ ತುಸು ಆತಂಕ. ‘ಅಪ್ಪು ಪಪ್ಪು’ ತೆರೆಕಂಡ ಮೂರು ತಿಂಗಳ ನಂತರ ‘ವಾರೆವ್ಹಾ’ ತೆರೆಕಾಣುತ್ತಿರುವುದೇ ಇದಕ್ಕೆ ಕಾರಣ. ಪ್ರಚಾರದ ಅಬ್ಬರವಿಲ್ಲದೆ ಪ್ರತಿಭೆಯನ್ನು ಮಾತ್ರ ನೆಚ್ಚಿಕೊಂಡು ಈ ಸಿನಿಮಾ ಚಿತ್ರಮಂದಿರಗಳಿಗೆ ಬರುತ್ತಿದೆ. ತಾವಿಡುವ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಈ ಚಿತ್ರ ನಿರ್ಣಯಿಸಲಿದೆ ಎಂಬುದೇ ಕೋಮಲ್ ಆತಂಕಕ್ಕೆ ಕಾರಣ.
ಕೋಮಲ್ ಪ್ರಕಾರ ಈ ವರ್ಷ ಅವರು ನಟಿಸಿದ ‘ಆಪ್ತರಕ್ಷಕ’ ಹಾಗೂ ‘ಅಪ್ಪು ಪಪ್ಪು’ ಹಿಟ್ ಲಿಸ್ಟ್ ಸೇರಿಕೊಂಡವು. ‘ಲಿಫ್ಟ್ ಕೊಡ್ಲಾ’ ಕೂಡ ಸಮಾಧಾನಕರ ಗಳಿಕೆಯನ್ನು ತಂದುಕೊಟ್ಟಿತು. ಈಗ ‘ವಾರೆವ್ಹಾ’ ಸರದಿ. ಮಿಸ್ಟರ್ ಗರಗಸ ಶೈಲಿಯಲ್ಲೇ ಇರುವ ಈ ಚಿತ್ರ ಅದಕ್ಕಿಂತ ತುಸು ಹೆಚ್ಚೇ ಗ್ಲಾಮರಸ್ ಆಗಿದೆಯಂತೆ. ಕಾಮಿಡಿಯ ಜೊತೆಗೆ ಸೆಂಟೆಮೆಂಟ್ ಬೆರೆಸಿದ ಇದು ಮಹಿಳೆಯರಿಗೂ ಇಷ್ಟವಾಗುತ್ತದೆಂಬುದು ಅವರ ನಿರೀಕ್ಷೆ.

ಅವರದ್ದೇ ನಿರ್ಮಾಣದ ‘ಕಳ್ ಮಂಜ’ ಚಿತ್ರದ ರೀರೆಕಾರ್ಡಿಂಗ್ ನಡೆಯುತ್ತಿದ್ದು, ‘ವಾರೆವ್ಹಾ’ ಭವಿಷ್ಯ ನೋಡಿಕೊಂಡು ಅದನ್ನು ಯಾವಾಗ ಬಿಡುಗಡೆ ಮಾಡಬೇಕು ಎಂಬುದನ್ನು ಕೋಮಲ್ ನಿರ್ಧರಿಸಲಿದ್ದಾರೆ. ‘ಕಳ್ ಮಂಜ’ನ ನಂತರ ‘ಮರ್ಯಾದಾ ರಾಮಣ್ಣ’ನ ಸರದಿ. ‘ಒಳ್ಳೆಯ ಚಿತ್ರಗಳನ್ನು ಮಾಡುವುದಷ್ಟೆ ನನ್ನ ಉದ್ದೇಶ. ಆ ದಾರಿಯಲ್ಲೇ ಯಶಸ್ಸು ಸಿಗುವುದು ತಡವೇ ಆದರೂ ಚಿಂತೆ ಇಲ್ಲ. ಆದರೂ ಆಗೀಗ ಬೇಸರ ಮಾತ್ರ ಆಗುತ್ತಲೇ ಇರುತ್ತದೆ’ ಎನ್ನುವ ಕೋಮಲ್, ಬೇಸರ ಯಾಕೆ ಎಂಬುದನ್ನು ಮಾತ್ರ ಹೇಳಿಕೊಳ್ಳಲು ಸಿದ್ಧರಿಲ್ಲ. ಚಿತ್ರೋದ್ಯಮದ ಯಾರಿಗೂ ನೋವಾಗಕೂಡದೆಂಬುದು ಅವರ ಪಾಲಿಸಿ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.