ADVERTISEMENT

ಗಜೇಂದ್ರನ ಘೀಳು

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಗಜೇಂದ್ರನ ಘೀಳು
ಗಜೇಂದ್ರನ ಘೀಳು   

ಸುಮಾರು ಒಂದು ವರ್ಷದ ಹಿಂದೆ `ಹೋರಿ~ಯಾಗಿ ಗುಟುರು ಹಾಕಿದ್ದ `ಮರಿ ಟೈಗರ್~ ವಿನೋದ್ ಪ್ರಭಾಕರ್ ಈಗ `ಗಜೇಂದ್ರ~ನಾಗಿ ಘೀಳಿಡಲು ಹೊರಟಿದ್ದಾರೆ. ಈ ಹಿಂದೆ ಅಂಬರೀಷ್ ಸಹ `ಗಜೇಂದ್ರ~ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು.

ಸ್ಲಂನಲ್ಲಿ ಹುಟ್ಟಿ ಬೆಳೆವ ಈ ಗಜೇಂದ್ರನಿಗೆ ಇಬ್ಬರು ನಾಯಕಿಯರು. ತಾನು ಹುಟ್ಟಿ ಬೆಳೆದ ಜಾಗವನ್ನು ಸಮಾಜ ವಿದ್ರೋಹಿಗಳಿಂದ ಉಳಿಸಿಕೊಳ್ಳಲು ನಾಯಕ ರಾಜಕೀಯ ರಂಗ ಪ್ರವೇಶಿಸುತ್ತಾನೆ. ಆತ ತುಂಬಾ ಪವರ್‌ಫುಲ್. ಕತೆಯಲ್ಲೂ ಅಷ್ಟೇ ಪವರ್ ಇದೆ.

ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆಯೇ ಸೂಕ್ತವೆನಿಸಿತು ಎಂದರು ನಿರ್ದೇಶಕ ಜೆ.ಜಿ. ಕೃಷ್ಣ. ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಕೃಷ್ಣ `ಪೊಲೀಸ್ ಸ್ಟೋರಿ~ಯ ಬಳಿಕ ಮತ್ತೆ ಗೆಲುವಿನ ಮುಖ ನೋಡಿಲ್ಲ. ಗಜೇಂದ್ರನಿಗೆ ಇದುವರೆಗಿನ ಕಹಿ ಮರೆಸಿ ಸಿಹಿ ಉಣಬಡಿಸುವ ಎಲ್ಲಾ ತಾಕತ್ತೂ ಇದೆ ಎನ್ನುವುದು ಅವರ ಭರವಸೆ.

`ಹೋರಿ~ ಬಳಿಕ ವಿನೋದ್ ಪ್ರಭಾಕರ್ `ಮರಿ ಟೈಗರ್~ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಆ ಚಿತ್ರ ಕಾರಣಾಂತರಗಳಿಂದ ತಡವಾಗುತ್ತಿದೆ. ಆಟೋ ಓಡಿಸುವ ಸಾಮಾನ್ಯ ವ್ಯಕ್ತಿ ತಾನು ವಾಸಿಸುವ ಪ್ರದೇಶವನ್ನು ರಕ್ಷಿಸಲು ರಾಜಕೀಯ ಪ್ರವೇಶಿಸಿ ಹೋರಾಡುತ್ತಾನೆ ಎಂದು ಅವರು ತಮ್ಮ ಪಾತ್ರದ ಬಗ್ಗೆ ಹೇಳಿದರು.

ಜೋಗಿ ಚಿತ್ರದಲ್ಲಿ ಮುಸ್ಲಿಂ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಆ ಚಿತ್ರದ ಬಳಿಕ 23ನೇ ಚಿತ್ರದಲ್ಲಿ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅವರು ಈ ಚಿತ್ರಕ್ಕಾಗಿ ಐಟಂ ಸಾಂಗ್ ಒಂದನ್ನು ಸಹ ಬರೆದಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ದ್ವಂದ್ವಾರ್ಥದ ಪದಗಳು ಅದರಲ್ಲಿ ಸಾಕಷ್ಟಿದೆ ಎಂದು ಗುರುರಾಜ್ ನಗು ಹರಿಸಿದರು.

ನಟ ಶೋಭರಾಜ್ ಚಿತ್ರದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿ. ಕೃಷ್ಣ ಅವರ ಕೆಲಸದ ವೇಗದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಡೈಸಿ ಷಾ ಸ್ಲಂನಲ್ಲಿ ಹುಟ್ಟಿ ಬೆಳೆಯುವ ಧೈರ್ಯಶಾಲಿ ಯುವತಿಯ ಪಾತ್ರ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕಿ ಸ್ವಾತಿಯದು ಗ್ಲಾಮರಸ್ ಪಾತ್ರ. ಅವರು ವಿನೋದ್ ಪ್ರಭಾಕರ್‌ಗೆ ಇಂಗ್ಲಿಷ್ ಕಲಿಸುವ ಟೀಚರ್.

ಅಂಬರೀಷ್ ಅವರ ಗಜೇಂದ್ರ ಚಿತ್ರದಲ್ಲಿ ಕೆಲಸ ಮಾಡಿದ್ದ ಬಸವರಾಜು ಈ ಚಿತ್ರದಲ್ಲೂ ತೊಡಗಿಕೊಂಡಿರುವುದು ವಿಶೇಷ. ಅಲ್ಲಿ ಅವರು ಸಹಾಯಕ ಮೇಕಪ್‌ಮ್ಯಾನ್ ಆಗಿದ್ದರು. ಚಿಕ್ಕಪಾತ್ರದಲ್ಲೂ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಹಣ ಹೂಡಿದ ಮೂವರಲ್ಲಿ ಒಬ್ಬರು. ನಿರ್ದೇಶಕ ಕೃಷ್ಣ ಹಾಗೂ ಕುಮಾರ್ ಗೌಡ್ರು ಸಹ ಬಂಡವಾಳ ಹೂಡಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.