ADVERTISEMENT

ಗಲ್ಲನ ಪ್ರೀತಿಯ ಗಲ್ಲಿ...

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST
ಗಲ್ಲನ ಪ್ರೀತಿಯ ಗಲ್ಲಿ...
ಗಲ್ಲನ ಪ್ರೀತಿಯ ಗಲ್ಲಿ...   

‘ಅರೆ...ಸುಮ್ ಸುಮ್ನೆ ಹೇಗೆ, ಎಲ್ಲಿ ಕಾಣಿಸ್ಕೊಳ್ಳಲಿ? ಪದೇ ಪದೇ ಗಲ್ಲಕ್ಕೆ ಬರುತ್ತಿದ್ದ ಕೂದಲನ್ನು ಕಿವಿ ಹಿಂದೆ ತಳ್ಳಿ ಆಶ್ಚರ್ಯದಿಂದ ನಕ್ಕಳು ‘ಗಲ್ಲ’ನ ನಾಯಕಿ ಶ್ವೇತಾ. ‘ನಂದ ಲವ್ಸ್ ನಂದಿತಾ’ನಲ್ಲಿ ಅಚಾನಕ್ ಆಗಿ ಹೀರೋಯಿನ್ ಆಗ್ಬಿಟ್ಟೆ.ಆದರೆ ಮುಂದಿನ ದಿನಗಳಲ್ಲಿ ಯಾವ ರೀತಿ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕು ಏನು ಎತ್ತ... ಅಂತ ಇಷ್ಟು ದಿನ ಯೋಚಿಸ್ತಿದ್ದೆ.

ನಾಯಕಿಗೆ ಬೇಕಾದ ಎಲ್ಲ ರೀತಿಯ ಸಿದ್ಧತೆಯನ್ನು ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತ ಮನನ ಮಾಡಿಕೊಳ್ಳುತ್ತಿದ್ದೆ. ಸದ್ಯಕ್ಕೆ ‘ಗಲ್ಲ’ದೊಂದಿಗೆ ತಮಿಳು ಚಿತ್ರವೊಂದನ್ನೂ ಒಪ್ಪಿಕೊಂಡಿದ್ದೀನಿ. ಮುಂದಿನ ವಾರದಿಂದ ಶೂಟಿಂಗ್ ಶುರು ಆಗತ್ತೆ, ಚೆನ್ನೈಗೆ ಹೋಗಬೇಕು ಅಂತ ಜಿಂಕೆಮರಿ ಹೇಳುತ್ತಿರುವಾಗಲೇ ‘ಗಲ್ಲ’ ಅಲ್ಲಿಗೆ ಬಂದ.

‘ಪ್ರೀತಿ ಹೆಚ್ಚಾದಾಗ ಹುಚ್ಚಾಗತ್ತೆ...’ ಹಿಂದಿನ ದಿನವಷ್ಟೇ ಮುಹೂರ್ತ ಮುಗಿಸಿ ಬಂದ ‘ಗಲ್ಲ’ ಹೇಳಿದ್ದು ಹೀಗೆ. ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಗಲ್ಲ ಅಲಿಯಾಸ್ ಜಯಂತ್ ಈಗ ನಾಯಕ ಕಮ್ ನಿರ್ದೇಶಕರಾಗಿ ಫೀಲ್ಡಿಗಿಳಿದಿದ್ದಾರೆ.ಕೊರಳಲ್ಲಿ ಹಾರ ಹಾಕಿಕೊಂಡು ಕೈಯಲ್ಲಿ ಮಚ್ಚು ಹಿಡಿದಿರುವ ‘ಗಲ್ಲ’ನ ಟ್ಯಾಗ್ ಲೈನ್ ಪಕ್ಕಾ ಲೋಕಲ್ ಸ್ವಲ್ಪ ಪಾಗಲ್.

‘ಸಾಫ್ಟ್ ‘ಗಲ್ಲ’ಕ್ಕೆ ಮಾಸ್ ಅಪೀಲ್ ಕೊಡ್ತಿದೀನಿ. ‘ಜೋಗಿ’ ಪ್ರೇಮ್ ಬಳಿ ಈ ಚಿತ್ರದ ಕಥೆ ಬಗ್ಗೆ ಚರ್ಚೆ ಮಾಡಿದೆ. ಆಮೇಲೆ ಬೇರೆ ನಿರ್ದೇಶಕರನ್ನು ಹುಡುಕೋಣ ಅಂದುಕೊಂಡೆ. ಆದರೆ ಯಾರೂ ಸೆಟ್ ಆಗಲಿಲ್ಲ. ಅದಕ್ಕೆ ನಾನೇ ಡೈರೆಕ್ಟ್ ಮಾಡೋಣ ಅಂತ ನಿರ್ಧರಿಸಿದೆ. ಪುಣೆಯಲ್ಲಿ ಆರು ತಿಂಗಳ ಆ್ಯಕ್ಟಿಂಗ್ ಕೋರ್ಸ್ ಮಾಡಿದ್ದೀನಿ’ ಜಯಂತ್ ಮಾತಿಗೆ ಶುರುವಿಟ್ಟರು.

‘ಎರಡು ವರ್ಷಗಳಿಂದ ಸತ್ಯಪ್ಪ ಅವರಿಗೆ ಕಥೆ ಹೇಳುತ್ತಲೇ ಇದ್ದೆ. ನೋಡೋಣ ಅಂತಾನೇ ಇದ್ರು. ಆದರೆ ಈಗ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದಾರೆ. ಬಜೆಟ್ ರೂ. 3 ಕೋಟಿ. ಅನೂಪ್ ಸೀಳಿನ್ ಸಂಗೀತವಿದೆ. ಕವಿರಾಜ್, ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆಯಲು  ಒಪ್ಪಿಕೊಂಡಿದ್ದಾರೆ. ಸುದೀಪ್ ಟೈಟಲ್ ಸಾಂಗ್ ಹಾಡಲಿದ್ದಾರೆ’ ಮಾತು ಮುಗಿಸಿದರು ಜಯಂತ್.

ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಇತ್ಯಾದಿ ಬಿಜಿನೆಸ್ ಮಾಡಿಕೊಂಡಿದ್ದ ನಿರ್ಮಾಪಕ ಸತ್ಯಪ್ಪ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. 1980ರಲ್ಲಿ ‘ಅಬಲೆ’ ಕಪ್ಪು-ಬಿಳುಪು ಚಿತ್ರದಲ್ಲಿ ಅವರು ನಾಯಕರಾಗಿಯೂ ಅಭಿನಯಿಸಿದ್ದರಂತೆ.ಮಡಿಕೇರಿ, ಚಿಕ್ಕಮಗಳೂರು, ಹೈದರಾಬಾದ್, ಕೇರಳದಲ್ಲಿ ಚಿತ್ರೀಕರಣ ನಡೆಯಲಿದೆ.

ನಾಯಕಿ ಶ್ವೇತಾ, ‘ಈ ಚಿತ್ರದಲ್ಲಿ ಹೂ ಮಾರೋ ಸ್ಲಂ ಹುಡುಗಿ ಪಾತ್ರ. ಬಡ ಹುಡುಗಿಯಾದರೂ ರಫ್ ಅಂಡ್ ಟಫ್ ಅಷ್ಟೇ ಅಲ್ಲ ಸಿಕ್ಕಾಪಟ್ಟೆ ವಾಚಾಳಿ. ಈ ಚಿತ್ರದ ಹೋಂ ವರ್ಕ್‌ಗೆ ಅಂತಾನೇ ಪ್ರತೀ ದಿನ ಹೂ ಮಾರೋ ಹುಡುಗಿಯರನ್ನ ನೋಡ್ತಾ ಅವರ ಹಾವ-ಭಾವಗಳನ್ನು ಗಮನಿಸ್ತಾ ಇದ್ದೆ’ ಎಂದಿನಂತೆ ಪಾತ್ರದ ಬಗ್ಗೆ ಎಕ್ಸೈಟ್ ಆಗಿದ್ದೀನಿ ಅಂತ ಮಾತಿಗೆ ಫುಲ್‌ಪಾಯಿಂಟ್ ಇಟ್ಟು ಕಣ್ಣರಳಿಸಿದರು.

ಲಕ್ಷ್ಮೀ ‘ಗಲ್ಲ’ನ ಅಮ್ಮನಾದರೆ, ತಾರಾ ವಿಲನ್ ಪಾತ್ರದಲ್ಲಿ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಹಾಸಿನಿ ಶಿಕ್ಷಕಿಯಾಗಿ ಪಾಠ ಕಲಿಸಲಿದ್ದಾರಂತೆ. ರಂಗಾಯಣ ರಘು, ರವಿಶಂಕರ್ ಇತರರು ಗಲ್ಲನಿಗೆ ಸಾಥ್ ಕೊಡಲಿದ್ದಾರೆ. ಆರು ಹಾಡುಗಳೊಂದಿಗೆ ಆಗಾಗ ಮತ್ತೈದು ತುಣುಕು ಹಾಡುಗಳು ಕಿವಿ ತುಂಬಲಿವೆ. ಮೂವತ್ತು ಸೆಕೆಂಡಿನ ಆರು ಫೈಟ್‌ಗಳನ್ನು ಸ್ಟಂಟ್ ಮಾಸ್ಟರ್ ಶ್ರೀಧರ್ ನಿರ್ವಹಿಸಲಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸವಿದೆ. ಅನಿಲ್ ಸಂಭಾಷಣೆ ಬರೆಯಲು, ರವಿ ಚಿತ್ರೀಕರಿಸಲು ಉತ್ಸುಕರಾಗಿದ್ದನ್ನು ಅಲ್ಲಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.