ADVERTISEMENT

ಗವಿಪುರಕ್ಕೆ ಬಿಡುಗಡೆ ಭಾಗ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST
ಗವಿಪುರಕ್ಕೆ ಬಿಡುಗಡೆ ಭಾಗ್ಯ
ಗವಿಪುರಕ್ಕೆ ಬಿಡುಗಡೆ ಭಾಗ್ಯ   

ಮಾತಿಗೆ ಇಳಿಯುತ್ತಿದ್ದಂತೆ ಭಾವುಕರಾದರು ನಿರ್ಮಾಪಕರ ಜಗನ್ನಾಥ ಹೆಗ್ಡೆ. ಕಣ್ಣುಗಳಲ್ಲಿ ಜಿನುಗುತ್ತಿದ್ದ ಹನಿಗಳನ್ನು ಒರೆಸಿಕೊಳ್ಳುತ್ತ ಮಾತು ಮುಂದುವರಿಸಿದ ಅವರ ಕಣ್ಣುಗಳಲ್ಲಿನ ತೇವ ಸುದ್ದಿಗೋಷ್ಠಿ ಮುಗಿದಾಗಲೂ ಆರಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಅವರು ಕಣ್ಣೀರಿಡಲು ಕಾರಣಗಳು ಸಾಕಷ್ಟಿದ್ದವು. ತಮ್ಮ ಮಹತ್ವಾಕಾಂಕ್ಷೆಯ `ಗವಿಪುರ~ ಚಿತ್ರವನ್ನು ತೆರೆಗಾಣಿಸಲು ಚಿತ್ರಮಂದಿರಗಳೇ ಸಿಗುತ್ತಿಲ್ಲ ಎಂಬ ದುಃಖ ಅವರದು. ಫೆ.10ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಒಂದು ವಾರ ತಡವಾಗಿ ತೆರೆಕಾಣುತ್ತಿದೆ.

ಯೋಜನೆಯಂತೆ ನಡೆದಿದ್ದರೆ ಕಳೆದ ವಾರ ಬಿಡುಗಡೆಯಾದ ಮೂರು ಚಿತ್ರಗಳ ಜೊತೆ `ಗವಿಪುರ~ವೂ ಇರಬೇಕಿತ್ತು. ಆದರೆ ಸೂಕ್ತ ಸಮಯಕ್ಕೆ ಚಿತ್ರಮಂದಿರ ದಕ್ಕಲಿಲ್ಲ. ಇನ್ನೂ ಅಂಬೆಗಾಲಿಡುತ್ತಿರುವ ಹೊಸ ಕಲಾವಿದರೇ ಚಿತ್ರದಲ್ಲಿ ಹೆಚ್ಚಾಗಿ ಇದ್ದಾರೆ ಎಂಬ ಹೇಳಿಕೆಗಳು ಎಲ್ಲೆಡೆ ಕೇಳಿಬರುತ್ತಿವೆ. ತಾವು ಹೊಸಬರು ಎಂಬ ಕಾರಣಕ್ಕೇ ಚಿತ್ರಮಂದಿರಗಳು ಸಿಗುತ್ತಿಲ್ಲ. ಹೊಸ ನಿರ್ಮಾಪಕರು ಇಂತಹ ಸಮಸ್ಯೆಗೆ ಸಿಕ್ಕಿಕೊಂಡಾಗ ವಾಣಿಜ್ಯ ಮಂಡಲಿಯೂ ಸಹಾಯಕ್ಕೆ ಬರುತ್ತಿಲ್ಲ ಎಂದು ಬೇಸರ ಹೊರಹಾಕಿದರು ಜಗನ್ನಾಥ ಹೆಗ್ಡೆ.

`ಗವಿಪುರ~ ಬಿಡುಗಡೆಯಾಗಬೇಕಿದ್ದ ಬಹುತೇಕ ಚಿತ್ರಮಂದಿರಗಳನ್ನು ಉಳಿದ ಮೂರು ಚಿತ್ರಗಳು ಆವರಿಸಿಕೊಂಡವು. ತಮ್ಮ ಕೈಗೆ ಸಿಕ್ಕಿದ್ದು 22 ಚಿತ್ರಮಂದಿರಗಳು ಮಾತ್ರ. ಹೀಗಾಗಿ ಅನಿವಾರ್ಯವಾಗಿ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಬೇಕಾಯಿತು ಎಂದರು ಜಗನ್ನಾಥ್. ಈಗ ಚಿತ್ರ ಬಿಡುಗಡೆಗೆ 50 ಚಿತ್ರಮಂದಿರಗಳು ಲಭ್ಯವಾಗಿದ್ದು, ಈ ವಾರ ಚಿತ್ರ ತೆರೆಕಾಣುವುದು ಖಚಿತ ಎಂದರು.

ತಮ್ಮ ಚೊಚ್ಚಿನ ಚಿತ್ರ ಬಿಡುಗಡೆಯಾಗುವ ಖುಷಿಯಲ್ಲಿದ್ದ ನಟ ಸೂರಜ್‌ಗೆ ಚಿತ್ರಮಂದಿರ ಕೊರತೆ ತಣ್ಣೀರೆರಚಿತಂತೆ. ಹೊಸಬರಿಗೆ ಚಿತ್ರರಂಗದಲ್ಲಿ ಪ್ರೋತ್ಸಾಹವೇ ಸಿಗುತ್ತಿಲ್ಲ ಎಂದವರು ನಿರ್ಮಾಪಕರ ಬೇಸರಕ್ಕೆ ದನಿಗೂಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.