ADVERTISEMENT

‘ಚಿಟ್ಟೆ’ಯ ರೆಕ್ಕೆಗೆ ಪಶ್ಚಾತ್ತಾಪದ ಲೇಪ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಯಶಸ್ ಸೂರ್ಯ ಮತ್ತು ಹರ್ಷಿಕಾ ಪೂಣಚ್ಚ
ಯಶಸ್ ಸೂರ್ಯ ಮತ್ತು ಹರ್ಷಿಕಾ ಪೂಣಚ್ಚ   

‘ತಪ್ಪು ಮಾಡುವುದು ಸಹಜ, ಅದನ್ನು ತಿದ್ದಿಕೊಂಡು ನಡೆಯುವವನೆ ಮನುಜ’ ಎಂದು ಹಿರಿಯರು ಹಾಡುಕಟ್ಟಿ ಹೇಳಿದ್ದಾರೆ. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಕೆಲವರು ತಿಳಿದೂ ತಿಳಿದೂ ತಪ್ಪು ಮಾಡುತ್ತಾರೆ. ಮತ್ತು ತಪ್ಪು ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರೂ ನಮ್ಮ ನಡುವೆ ಇದ್ದಾರೆ. ತಪ್ಪು ಮಾಡುವುದಕ್ಕಿಂತ ಅದನ್ನು ಸಮರ್ಥಿಸಿಕೊಳ್ಳುವುದು ಇನ್ನೂ ದೊಡ್ಡ ತಪ್ಪು.

ತಪ್ಪು ಮಾಡಿದವರಿಗೆ ಪಶ್ಚಾತ್ತಾಪವೊಂದೇ ಪರಿಹಾರವೇ? ಅದರ ಫಲವನ್ನೂ ಅವರು ಉಣ್ಣದೆ ಇರಬಹುದೇ? ಈ ಪ್ರಶ್ನೆಗಳನ್ನೇ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ಎಂ. ಎಲ್. ಪ್ರಸನ್ನ. ಚಂಚಲ ಮನಸ್ಸಿನ ಪ್ರತೀಕವಾಗಿ ಅದಕ್ಕೆ ‘ಚಿಟ್ಟೆ’ ಎಂಬ ಹೆಸರಿಟ್ಟಿದ್ದಾರೆ. ಇದು ಪಶ್ಚಾತ್ತಾಪದ ಕಥನ ಎನ್ನುವುದನ್ನು ಸೂಚಿಸುವಂಥ ‘ವಿಲವಿಲ ವಿಲಪಿಸಿದೆ ಹೃದಯ’ ಎಂಬ ಅಡಿಶೀರ್ಷಿಕೆಯೂ ಇದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು ‘ಇದು ಐದು ಪಾತ್ರಗಳ ಸುತ್ತ ಸುತ್ತುವ ಕತೆ’ ಎಂದಷ್ಟೆ ಹೇಳಿಕೊಂಡರು. ಯಶಸ್ ಸೂರ್ಯ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಎರಡು ಛಾಯೆಯುಳ್ಳ ಚಿಟ್ಟೆಯಂಥ ಹುಡುಗಿಯ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ನಾಗೇಶ್ ಕಾರ್ತಿಕ್, ದೀಪಿಕಾ, ಬಿ.ಎಂ. ಗಿರಿರಾಜ್‌ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ADVERTISEMENT

ಯಶಸ್‍ಸೂರ್ಯ ಚಿತ್ರಗಾರನಾಗಿ ನಾಯಕ, ಚಿಟ್ಟೆಯಂತೆ ಎಲ್ಲಾ ಕಡೆ ಓಡಾಡುತ್ತಾ ಎರಡು ಶೇಡ್ ಇರುವ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚ ನಾಯಕಿ. ಖಳನಟನಾಗಿ ನಾಗೇಶ್‍ ಕಾರ್ತಿಕ್, ಕಿರುತೆರೆ ನಟಿ ದೀಪಿಕಾ, ಹಾಗೂ ಮೈತ್ರಿ ಖ್ಯಾತಿಯ ನಿರ್ದೇಶಕ ಬಿ.ಎಂ.ಗಿರಿರಾಜ್ ಅಭಿನಯವಿದೆ. ನಿರ್ದೇಶಕ ಎಂ.ಎಲ್ ಪ್ರಸನ್ನ ಅವರೇ ಈ ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

ವಿಶ್ವಜಿತ್ ರಾವ್ ಛಾಯಾಗ್ರಹಣ, ಕೆಜೆಟನ್ ಡಯಾಸ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಸೆನ್ಸಾರ್‌ ಮಂಡಳಿ ಸದ್ಯದಲ್ಲಿಯೇ ವೀಕ್ಷಿಸಲಿದೆ. ಜೂನ್‌ನಲ್ಲಿ ‘ಚಿಟ್ಟೆ’ಯನ್ನು ತೆರೆಯ ಮೇಲೆ ಹಾರಿಬಿಡುವ ಆಲೋಚನೆ ತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.