ADVERTISEMENT

ಚಿಟ್ಟೇಸ್ವಾಮಿಗೆ ಬಂಪರ್!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

`ಮೈ ನೇಮ್ ಈಸ್ ಚಿಟ್ಟೆ ಸ್ವಾಮಿ...' ದೇವ್ರಾಣೆ ಚಿತ್ರದ ಈ ಹಾಸ್ಯಭರಿತ ಹಾಡು ಜನಪ್ರಿಯವಾಗಿದೆ. ಹಾಡೊಂದು ಚಿತ್ರದ ಬಿಡುಗಡೆಗೂ ಮುನ್ನ ಗೆದ್ದರೆ ಚಿತ್ರವೇ ಗೆದ್ದಂತೆ ಎಂಬ ನಂಬಿಕೆ ಕೆಲವರದ್ದು. ನಿರ್ದೇಶಕ ಶಂಕರ್ ಕೂಡ ಇದೇ ಗುಂಗಲ್ಲಿ ತೇಲಾಡುತ್ತಿದ್ದಾರೆ. ಅವರ ಸುದ್ದಿಗೋಷ್ಠಿಯ ಪ್ರಧಾನ ವಿಷಯವೂ ಗೆದ್ದಿರುವ ಹಾಡಿನ ಕುರಿತೇ ಆಗಿತ್ತು. ಯೂಟ್ಯೂಬ್‌ನಲ್ಲಿ ಸಾವಿರಾರು ಮಂದಿ ಹಾಡನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಲಯ ಕೋಕಿಲ ಸಂಗೀತದ ಈ ಹಾಡು ಮಕ್ಕಳಿಗೂ ಇಷ್ಟವಾಗಿದೆ.

ಮಾತ್ರವಲ್ಲ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿ `ಚಿಟ್ಟೇಸ್ವಾಮಿ'ಯ ಹಾರಾಟ ಬಲು ಜೋರಾಗಿದೆ ಎಂಬ ಖುಷಿ ಅವರದು.
ಶಂಕರ್ ಸಂತೋಷಕ್ಕೆ ಇನ್ನೂ ಕಾರಣಗಳಿದ್ದವು. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರ ಚೆನ್ನಾಗಿದೆ ಎಂದು ಬೆನ್ನುತಟ್ಟಿ ಯು/ಎ ಪ್ರಮಾಣ ಪತ್ರ ನೀಡಿದೆ. ಕೆಲವು ಸಂಭಾಷಣೆಗಳ ಧ್ವನಿ `ಅಡಗಿಸು'ವಂತೆ ಸೂಚಿಸಿದ್ದರೂ ಯಾವುದೇ ಸನ್ನಿವೇಶಕ್ಕೆ ಕತ್ತರಿ ಹಾಕಿಲ್ಲ.

ಸ್ಟಾರ್ ಕಲಾವಿದರು ಇಲ್ಲದಿದ್ದರೂ ಹಂಚಿಕೆದಾರರು ಚಿತ್ರ ಕೊಳ್ಳಲು ನಾ ಮುಂದು ತಾಮುಂದು ಎಂದು ಬರುತ್ತಿದ್ದರೆ, ಊಹಿಸಲಾಗದ ಬೆಲೆ ಉಪಗ್ರಹ ಹಕ್ಕುಗಳನ್ನು ಖಾಸಗಿ ವಾಹಿನಿಯೊಂದು ಈಗಾಗಲೇ ಖರೀದಿಸಿದೆ. ಹೀಗೆ `ದೇವ್ರಾಣೆ' ಬಿಡುಗಡೆಗೂ ಮುನ್ನವೇ ಗೆಲುವಿನ ಭರವಸೆ ಮೂಡಿಸಿದೆ ಎಂಬ ಸಂಭ್ರಮ ಅವರದು.

ಚಿತ್ರ ಬಿಡುಗಡೆ ಮಾಡದಂತೆ ಶಂಕರ್‌ಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಆದರೆ ಅವುಗಳಿಗೆ ಜಗ್ಗುವುದಿಲ್ಲ ಎನ್ನುತ್ತಾರೆ ಅವರು. ಚಿತ್ರದಲ್ಲಿ ಯಾವುದೇ ಸ್ವಾಮೀಜಿಗಳನ್ನು ಅವಹೇಳನ ಮಾಡಿಲ್ಲ. ಯಾರಿಗೂ ನೋವನ್ನುಂಟು ಮಾಡುವ ಉದ್ದೇಶವೂ ಇಲ್ಲಿಲ್ಲ ಎಂಬ ಸ್ಪಷ್ಟನೆ ಅವರದು.

ತಮ್ಮದು ಪ್ರಧಾನ ಪಾತ್ರವಾಗಿದ್ದರೂ, ಚಿತ್ರದಲ್ಲಿನ ಎಲ್ಲಾ ಪಾತ್ರಗಳಿಗೂ ಮಹತ್ವವಿದೆ ಎಂಬ ಮಾತು ನಟ ರವಿಶಂಕರ್ ಅವರದು. ಖಾಸಗಿ ಚಾನೆಲ್‌ಗಳು ಸಿನಿಮಾ ಕೊಳ್ಳಲು ಹಿಂದೇಟು ಹಾಕುತ್ತಿರುವಾಗ ಈ ಚಿತ್ರಕ್ಕೆ ದೊಡ್ಡ ಮೊತ್ತ ತೆತ್ತು ಕೊಂಡುಕೊಂಡಿರುವುದು ಅವರಲ್ಲಿ ಅಚ್ಚರಿ ಮೂಡಿಸಿದೆ.

ಉತ್ತಮ ಸಂದೇಶ ಇರುವ ಚಿತ್ರವಿದು ಎನ್ನುವುದು ತಬಲಾ ನಾಣಿ ಬಣ್ಣನೆ. ಸಂಭಾಷಣೆ ರಚನೆಯ ಹೊಣೆಯನ್ನೂ ಅವರು ನಿರ್ವಹಿಸಿದ್ದಾರೆ. ಲಯ ಕೋಕಿಲ ಎಂದು ಹೆಸರು ಬದಲಿಸಿಕೊಂಡಿರುವ ಸಂಗೀತ ನಿರ್ದೇಶಕ ಲಯೇಂದ್ರರಿಗೆ ಈ ಹಾಡಿನ ಯಶಸ್ಸಿನಿಂದಾಗಿ ಒಂದರ ಹಿಂದೊಂದು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.