ADVERTISEMENT

ಚಿತ್ರಮಂಜರಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 19:30 IST
Last Updated 11 ಆಗಸ್ಟ್ 2011, 19:30 IST
ಚಿತ್ರಮಂಜರಿ
ಚಿತ್ರಮಂಜರಿ   

ಬೆಂಗಳೂರಿನ ಥಂಡಿ ಹವೆಗೆ ಒಡ್ಡಿಕೊಂಡು ಖುಷಿಖುಷಿಯಾಗಿದ್ದರು ಮಂಜರಿ ಫಡ್ನೀಸ್. ಗೆಳತಿಯ ಮಾತುಗಳಲ್ಲಷ್ಟೇ ಕೇಳಿದ್ದ ಈ ನಗರಿಯ ಬಣ್ಣನೆಯನ್ನು ಅವರು ಮನಸಾರೆ ಅನುಭವಿಸಿದರು.
 
`ವಾಟ್ ಎ ವೆದರ್~ (ಎಂಥಾ ಹವಾಮಾನವಪ್ಪಾ!) ಎಂದು ಆನಂದತುಂದಿಲರಾದ ಕೆಲವೇ ಕ್ಷಣಗಳಲ್ಲಿ ಅವರು `ಪ್ರೊಮೋಷನಲ್ ವಿಡಿಯೋ~ ಚಿತ್ರೀಕರಣಕ್ಕೆ ಸನ್ನದ್ಧರಾದರು. ಮಂಜರಿ ಈಗ ಕನ್ನಡ ಚಿತ್ರ `ದಿಲ್‌ಖುಷ್~ ನಾಯಕಿ. `ಲವ್‌ಗುರು~, `ಗಾನಬಜಾನಾ~ ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಮಂಜರಿಯನ್ನು ಇಲ್ಲಿಗೆ ಕರೆತಂದಿದ್ದಾರೆ.

`ರೋಕ್ ಸಕೋ ತೋ ರೋಕ್ ಲೋ~, `ಮುಂಬೈ ಸಾಲ್ಸಾ~, `ಜಾನೆ ತು ಯಾ ಜಾನೆನಾ~ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ಮಂಜರಿ ಬಲು ಬೇಗ ದಕ್ಷಿಣ ಭಾರತದ ಕಡೆಗೆ ಮುಖ ಮಾಡಿದರು. ತೆಲುಗು ಚಿತ್ರರಂಗ ಕೈಬೀಸಿ ಕರೆಯಿತು.

`ನಾನು ಅವಕಾಶದ ಬೆನ್ನು ಹತ್ತಿ ಓಡುವವಳಲ್ಲ. ಆಮೆಯಂಥವಳು. ನಿಧಾನವೇ ವಿಧಾನ. ಸಿಗುವ ಚಿತ್ರಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ. ಅದಕ್ಕೇ ಎಷ್ಟೋ ಜನ ನಾನು ಏನೂ ಸಾಧಿಸಿಲ್ಲ ಎಂದು ಹಂಗಿಸಿರುವುದೂ ಉಂಟು. ಆದರೆ, ನಾನು ಏನೆಂಬುದು ನನಗಷ್ಟೆ ಗೊತ್ತು. ದಕ್ಷಿಣ ಭಾರತದಲ್ಲಿ ವೃತ್ತಿಪರತೆ ಇದೆ.

ಇಲ್ಲಿನ ತಂತ್ರಜ್ಞರ ಜ್ಞಾನ ಅದ್ಭುತವಾದದ್ದು. ಆ ಬಗ್ಗೆ ಗೌರವ ಇಟ್ಟುಕೊಂಡೇ ನಾನಿಲ್ಲಿಗೆ ಕಾಲಿಟ್ಟಿದ್ದು...~ ಮುಂಬೈ ಟು ಬೆಂಗಳೂರು ಕಥೆಯನ್ನು ಮಂಜರಿ ಸಂಕ್ಷಿಪ್ತವಾಗಿ ಹಂಚಿಕೊಳ್ಳುವುದು ಹೀಗೆ.

`ದಿಲ್‌ಖುಷ್~ ಚಿತ್ರದಲ್ಲಿ ಮಂಜರಿಗೆ ಕಾಲೇಜು ಹುಡುಗಿಯ ಪಾತ್ರ. ನಾಯಕನ ಬದುಕಿನ ಕುರಿತ ಧೋರಣೆಯನ್ನೇ ಬದಲಿಸುವ ಪಾತ್ರ. `ಸುಂದರವಾದ, ಪ್ರಜ್ಞಾವಂತ ಹುಡುಗಿಯ ಪಾತ್ರ ಸಿಕ್ಕಿದೆ. ಪ್ರಶಾಂತ್ ರಾಜ್ ಒಳ್ಳೆಯ ಸ್ಕ್ರಿಪ್ಟ್ ಮಾಡಿದ್ದಾರೆ.

ಅದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡೇ ನಾನು ಈ ಪಾತ್ರಕ್ಕೆ ಒಪ್ಪಿಗೆ ನೀಡಿದೆ. ತೆಲುಗು ಚಿತ್ರಗಳನ್ನು ಒಪ್ಪಿಕೊಳ್ಳತೊಡಗಿದಾಗ ಅನೇಕರು ಮುಂಬೈ ಸಹವಾಸ ಬಿಡುತ್ತಿದ್ದೀಯಾ ಎಂದು ಕೇಳಿದ್ದರು. ನಾನು ಬಾಲಿವುಡ್‌ಗೇ ಅಂಟಿಕೊಳ್ಳುವ ನಟಿಯಲ್ಲ. ನಟನೆಗೆ ಭಾಷೆಯ ಹಂಗು ಇಲ್ಲ ಎಂದುಕೊಂಡವಳು. ತೆಲುಗಿನಲ್ಲಿ ನಿಭಾಯಿಸಿದೆ. ಈಗ ಕನ್ನಡಕ್ಕೆ ಬಂದಿದ್ದೇನೆ~ ಅಂತಾರೆ ಮಂಜರಿ.

ಚಿತ್ರೀಕರಣ ನಡೆದಂತೆಲ್ಲಾ ಕನ್ನಡ ಕಲಿಯುವ ಬಯಕೆ ಮಂಜರಿ ಫಡ್ನೀಸ್‌ಗೆ ಇದೆ. ಸಂಭಾಷಣೆಗಳನ್ನು ಅರ್ಥೈಸಿಕೊಂಡು, ತಾವು ಬಲ್ಲ ಭಾಷೆಗೆ ಬರೆದುಕೊಂಡು, ಸಂಪೂರ್ಣವಾಗಿ ಉರುಹೊಡೆದೇ ಸೆಟ್‌ಗೆ ಕಾಲಿಡಬೇಕೆಂಬುದು ಅವರ ಸಂಕಲ್ಪ. ಅದಕ್ಕೇ ಚಿತ್ರೀಕರಣಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ತಮ್ಮ ಸಂಭಾಷಣೆಯ ಭಾಗಗಳನ್ನು ಒದಗಿಸಬೇಕೆಂದು ಪ್ರಶಾಂತ್ ರಾಜ್ ಅವರನ್ನು ಮಂಜರಿ ಕೇಳಿಕೊಂಡಿದ್ದಾರೆ.

ಕನ್ನಡದಲ್ಲಿ ಬೇರೆ ಯಾವುದೇ ಅವಕಾಶ ಇನ್ನೂ ಹುಡುಕಿಕೊಂಡು ಬಂದಿಲ್ಲ. ಈ ಸಿನಿಮಾ ಬಂದಮೇಲೆ ಇಲ್ಲಿನ ಭವಿಷ್ಯ ನಿರ್ಧರಿಸುವುದು ಅವರ ಬಯಕೆ. ಅಷ್ಟರಲ್ಲೇ ತೆಲುಗು ಚಿತ್ರೋದ್ಯಮದ ಒಬ್ಬರ ಫೋನ್ ಕರೆ ಬಂತು. ಮಂಜರಿಯ ಚಿತ್ರಮಂಜರಿ ಕನ್ನಡದಲ್ಲಿ ಏನಾಗುವುದೋ ಎಂಬುದನ್ನು ನೋಡಬೇಕು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.