ADVERTISEMENT

ಚಿಲಿಪಿಲಿ ರೂಪಿಕಾ

ಎಚ್.ಎಸ್.ರೋಹಿಣಿ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಹೆಸರಿಗೆ ತಕ್ಕಂಥ ರೂಪವತಿ ರೂಪಿಕಾ. ಮುಗ್ಧ ನಗುವಿನ ಈ ಚೆಲುವೆ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟವರು. ಎಸ್.ನಾರಾಯಣ್ ನಿರ್ದೇಶನದ `ಚೆಲುವಿನ ಚಿಲಿಪಿಲಿ~ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಾಗ ರೂಪಿಕಾ ಹದಿನಾಲ್ಕರ ಬಾಲೆ.
 
ಅದಾದ ನಂತರ `ಕಾಲ್ಗೆಜ್ಜೆ~ ಚಿತ್ರದಲ್ಲಿ ನರ್ತಿಸಿ-ನಟಿಸಿ ಗಮನಸೆಳೆದಿದ್ದರು. ನಟನೆಗೆ ಅಲ್ಪ ವಿರಾಮದಂತೆ ಪರಿಣಮಿಸಿದ್ದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು. ಇದೀಗ `ಗೌರಿಪುತ್ರ~, `ಬೀರ~ ಚಿತ್ರಗಳಲ್ಲಿ ನಟಿಸುತ್ತಿರುವ ರೂಪಿಕಾಗೆ ಪರಭಾಷೆಗಳಿಂದಲೂ ಅವಕಾಶಗಳು ಹರಿದು ಬರುತ್ತಿವೆಯಂತೆ.

ನಟ ಚರಣ್‌ರಾಜ್ ನಿರ್ದೇಶನದ ತೆಲುಗಿನ `ಯಥಾರ್ಥ ಪ್ರೇಮಕಥಾ~ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರೂಪಿಕಾಗೆ ತಮಿಳಿನಿಂದಲೂ ಅವಕಾಶಗಳು ಬಂದಿವೆಯಂತೆ. `ಗೌರಿಪುತ್ರ~ ಮತ್ತು `ಬೀರ~ ಚಿತ್ರಗಳಲ್ಲಿ ಹಳ್ಳಿಹುಡುಗಿಯ ಪಾತ್ರಗಳಲ್ಲಿ ಮಿಂಚಿರುವ ಅವರಿಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳಬೇಕೆಂಬಾಸೆ.

`ಬೀರ~ ಚಿತ್ರದ ಹಾಡೊಂದರಲ್ಲಿ ರೂಪಿಕಾ ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರಂತೆ. `ನನ್ನನ್ನು ಕೇವಲ ಹಳ್ಳಿಪಾತ್ರಕ್ಕೆ ಮಾತ್ರ ಸೀಮಿತ ಮಾಡಲಾಗುತ್ತಿದೆ ಎನಿಸಿ, ಒಂದು ಹಾಡಿನಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಳ್ಳಲು ನಿರ್ಧರಿಸಿದೆ. ನನಗೆ ಒಪ್ಪುವಂಥ ಮತ್ತು ಎಲ್ಲಿಯೂ ಅನ್‌ಕಂಫರ್ಟ್ ಎನಿಸಿದ ಉಡುಪುಗಳನ್ನು ಮಾತ್ರ ತೊಟ್ಟಿರುವೆ. ಇವತ್ತಿನ ಟ್ರೆಂಡ್‌ಗೆ ತಕ್ಕ ಉಡುಪು, ಅಷ್ಟೇ. ಆದರೆ ದೇಹ ಪ್ರದರ್ಶನ ನನ್ನಿಂದ ಸಾಧ್ಯವಿಲ್ಲ~ ಎನ್ನುತ್ತಾರೆ.

`ಪರೀಕ್ಷೆಯ ಕಾರಣಕ್ಕೆ ವರ್ಕ್‌ಔಟ್ ಮಾಡಲು ಸಾಧ್ಯವಾಗಲಿಲ್ಲ. ಕೊಂಚ ದಪ್ಪಗಾಗಿರುವೆ. ಇನ್ನು ಮೇಲೆ ಜಿಮ್‌ಗೆ ಹೋಗಬೇಕು~ ಎನ್ನುವ ರೂಪಿಕಾಗೆ ಅಂಗವಿಕಲೆಯ ಪಾತ್ರದಲ್ಲಿ ನಟಿಸಬೇಕೆಂಬ ಅದಮ್ಯ ಆಸೆ ಇದೆ. ಉತ್ತಮ ಸಂದೇಶ ಇರುವ ಸಿನಿಮಾಗಳಲ್ಲಿ ಭಾಗಿಯಾಗುವುದು ಕೂಡ ಅವರಿಷ್ಟ.

`ನಾನು ಶಾಸ್ತ್ರೀಯ ನೃತ್ಯದಲ್ಲಿ ಪಳಗಿರುವುದರಿಂದ ನಟನೆ ಕಷ್ಟ ಎನಿಸಿಲ್ಲ. ಕೊಂಚ ಮಾರ್ಗದರ್ಶನ ಸಿಕ್ಕರೆ ಸಾಕು ಎಂಥ ಪಾತ್ರವನ್ನಾದರೂ ನಿಭಾಯಿಸುವೆ~ ಎನ್ನುವ ವಿಶ್ವಾಸ ಅವರದು.

`ಪಿಯುಸಿ ನಂತರ ಪದವಿಗೆ ಸೇರಬೇಕು. ಪದವಿ ಕೈಲಿದ್ದರೆ ಸಿನಿಮಾ ಹೊರತುಪಡಿಸಿಯೂ ಬದುಕಬಹುದು. ಬದುಕಿನಲ್ಲಿ ಇಂಥ ವಯಸ್ಸು ಮತ್ತೆ ಬರುವುದಿಲ್ಲ. ಆದ್ದರಿಂದ ಕಾಲೇಜು ಬದುಕನ್ನೂ ಎಂಜಾಯ್ ಮಾಡಬೇಕೆಂದು ನಿರ್ಧರಿಸಿದ್ದೇನೆ. ಗೆಳೆಯರೊಂದಿಗೆ ಸುತ್ತಾಡುತ್ತಾ ಕಾಲೇಜು ಬದುಕನ್ನು ಸವಿಯುತ್ತಾ, ಒಳ್ಳೆಯ ಅವಕಾಶಗಳು ಸಿಕ್ಕರೆ ನಟಿಸುತ್ತಾ ಇರಬೇಕು~- ಹೀಗೆ ಕನಸು ಕಾಣುತ್ತಾರೆ ರೂಪಿಕಾ.

`ಎಲ್ಲರೊಂದಿಗೆ ಬೆರೆತು ಬದುಕಿದರೆ ಅಹಂಕಾರ ನಮ್ಮಿಂದ ದೂರ ಉಳಿಯುತ್ತದೆ~ ಎನ್ನುವ ಈ ಪಕ್ಕದ್ಮನೆ ಸುಂದರಿ ತಾನು ನಟಿಸಿರುವ ತೆಲುಗು ಚಿತ್ರಕ್ಕೂ ಡಬ್ಬಿಂಗ್ ಮಾಡಿದ್ದಾರೆ. ಕನ್ನಡದಲ್ಲಿ ನಟಿಸುವ ಎಲ್ಲಾ ಚಿತ್ರಕ್ಕೂ ಡಬ್ಬಿಂಗ್ ಮಾಡಿ ಖುಷಿ ಪಟ್ಟಿದ್ದಾರೆ.

ಬಾಲಿವುಡ್‌ಗೆ ಹೋಗುವ ಕನಸಿಲ್ಲವೇ ಎಂದರೆ, `ಹಂತಹಂತವಾಗಿ ಅತ್ತ ಕಣ್ಣು ಹಾಯಿಸುವೆ. ದಿಢೀರನೆ ನಿರ್ಧಾರ ತೆಗೆದುಕೊಂಡು ಅಲ್ಲಿ ಹೋಗಿ ನನ್ನ ವೃತ್ತಿಗೆ ಹಾನಿಮಾಡಿಕೊಳ್ಳಲು ನನಗಿಷ್ಟವಿಲ್ಲ~ ಎಂಬ ದೂರದೃಷ್ಟಿ ಅವರದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.