ADVERTISEMENT

ಛತ್ರಪತಿ ದಿನೇಶ್ ಗಾಂಧಿಗಿರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಕನ್ನಡದಲ್ಲಿ ಸ್ಟಾರ್ ನಾಯಕರ ಕಾಲ್‌ಷೀಟ್ ಕೊರತೆ ಇರುವುದನ್ನು ಹಿಂದಿ ನಟ ಅರ್ಬಾಜ್ ಖಾನ್ ಎದುರೇ ಹೇಳಿಕೊಂಡ ದಿನೇಶ್ ಗಾಂಧಿ `ಛತ್ರಪತಿ~ ಚಿತ್ರದ ಮೂಲಕ ಕೆಲವರಿಗೆ ಪಾಠ ಕಲಿಸಲು ಹೊರಟಂತಿದೆ. ಅವರ ಮಾತಿನ ಧಾಟಿ ಅದನ್ನೇ ಹೇಳುವಂತಿತ್ತು.

ತಾವೇ ನಿರ್ಮಿಸಿ, ನಿರ್ದೇಶಿಸಿರುತ್ತಿರುವ `ಛತ್ರಪತಿ~ ತೆಲುಗಿನ ರೀಮೇಕ್. 17 ಲಕ್ಷ ರೂಪಾಯಿ ತೆತ್ತು ರೀಮೇಕ್ ಹಕ್ಕು ಪಡೆದುಬಂದ ಅವರು ಸುದೀಪ್ ಕಾಲ್‌ಷೀಟ್‌ಗೆ ಕೈಚಾಚಿದರು. ಸದ್ಯಕ್ಕೆ ಸುದೀಪ್ ಬಿಡುವಾಗಿಲ್ಲ.

ಆಮೇಲೆ ಅವರ ತಲೆಯಲ್ಲಿ ಕೆಲವು ನಟರ ಹೆಸರುಗಳು ಸುಳಿದವಾದರೂ ಅವರದ್ದೂ ಕಾಲ್‌ಷೀಟ್ ಸಮಸ್ಯೆ ಆದರೇನು ಮಾಡುವುದು ಎಂದು ಲೆಕ್ಕಿಸಿ, `ಎಕೆ-56~ ಚಿತ್ರದಲ್ಲಿ ಅಭಿನಯಿಸಿರುವ ಸಿದ್ಧಾಂತ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡರು.

ಕೇರಳದ ಕೊಣ್ಣೂರಿನಲ್ಲಿ ಒಂದು ಹಂತದ ಚಿತ್ರೀಕರಣ ಪೂರೈಸಿರುವ ದಿನೇಶ್ ಗಾಂಧಿ ಮುಂದಿನ ಹಂತದಲ್ಲಿ ವೈಜಾಕ್ ಕಡೆಗೆ ತಂಡದೊಂದಿಗೆ ಪಯಣಿಸಲಿದ್ದಾರೆ.
 
ಮೂಲ ಚಿತ್ರದ ನಿರ್ದೇಶಕ ರಾಜಮೌಳಿ ಯಾವ ಲೊಕೇಷನ್‌ಗಳಲ್ಲಿ ಚಿತ್ರೀಕರಿಸಿದ್ದಾರೋ ದಿನೇಶ್ ಗಾಂಧಿ ಕೂಡ ಅಲ್ಲೇ ಅದೇ ರೀತಿ ಚಿತ್ರೀಕರಣ ಮಾಡುವ ರೀಮೇಕ್ ನಿಷ್ಠೆಗೆ ಬದ್ಧರಾಗಿದ್ದಾರೆ.

ಅರ್ಬಾಜ್ ಖಾನ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಅವರು ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

ನಾಯಕನ ಇಮೇಜ್‌ಗೆ ತಾವು ಮೊದಲಿನಿಂದಲೂ ಅಂಟಿಕೊಂಡಿಲ್ಲ ಎಂದ ಅರ್ಬಾಜ್, ಒಳ್ಳೆಯ ಪಾತ್ರಗಳು ಸಿಕ್ಕರೆ ಕನ್ನಡದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಲು ಸಿದ್ಧವೆಂದು ಇನ್ನಷ್ಟು ನಿರ್ಮಾಪಕರಿಗೆ ತಮ್ಮ ಕಾಲ್‌ಷೀಟ್ ಲಭ್ಯತೆಯ ಅರಿವು ಮೂಡಿಸುವಂತೆ ಮಾತನಾಡಿದರು.

ತೆಲುಗಿನ `ಛತ್ರಪತಿ~ಯಲ್ಲಿ ಪ್ರಭಾಸ್ ನಿರ್ವಹಿಸಿದ್ದ ಪಾತ್ರದ ಸವಾಲನ್ನು ಸ್ವೀಕರಿಸಿರುವುದಾಗಿ ಹೇಳಿದ ಸಿದ್ಧಾಂತ್, `ಎಕೆ-56~ ಬಿಡುಗಡೆಗೆ ಚಾತಕಪಕ್ಷಿಯಾಗಿದ್ದಾರೆ.

ಅನುಷ್ಕಾ ಶೆಟ್ಟಿ, ಇಲಿಯಾನಾ, ತ್ರಿಶಾ ಈ ಪೈಕಿ ಯಾರಾದರನ್ನೂ ಚಿತ್ರಕ್ಕೆ ನಾಯಕಿಯಾಗಿ ಗೊತ್ತುಮಾಡಬೇಕೆಂದು ದಿನೇಶ್ ಗಾಂಧಿ ಯತ್ನಿಸುತ್ತಿದ್ದಾರೆ.
 
ಚಿತ್ರದ ಬಜೆಟ್ ಒಂಬತ್ತು ಕೋಟಿ ಎಂದು ಅವರು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆದಿ ಲೋಕೇಶ್ ಕೂಡ ಅನುಭವ ಹಂಚಿಕೊಂಡರು.

ಕೆ.ಸಿ.ಎನ್.ಚಂದ್ರಶೇಖರ್, ಚಿನ್ನೇಗೌಡ, ಎಸ್.ಎ.ಗೋವಿಂದರಾಜು, ಬಿ.ಎನ್.ಗಂಗಾಧರ್ ಮೊದಲಾದ ನಿರ್ಮಾಪಕರು ಹಾಗೂ ನಿರ್ದೇಶಕ ಇಂದ್ರಜಿತ್ ಅತಿಥಿಗಳ ಸಾಲಿನಲ್ಲಿದ್ದರು. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಕೂಡ ಹಾಜರಿದ್ದರು.

ನಟಿ ಭಾನುಪ್ರಿಯಾ ಅವರನ್ನು ಒಳಗೊಂಡ ಹಾಡು ಸೇರಿದಂತೆ 25 ದಿನಗಳ ಚಿತ್ರೀಕರಣದ ಕೆಲವು ತುಣುಕುಗಳನ್ನು ದಿನೇಶ್ ಗಾಂಧಿ ತೋರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.